ADVERTISEMENT

ಅಭಿವೃದ್ಧಿ ಆಧರಿಸಿ ಚುನಾವಣೆ: ಯತ್ನಾಳ 

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2022, 12:24 IST
Last Updated 25 ಡಿಸೆಂಬರ್ 2022, 12:24 IST
ವಿಜಯಪುರ ನಗರದಲ್ಲಿ ಭಾನುವಾರ ನಡೆದ ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆಯಲ್ಲಿ ಪಾಲಿಕೆ ಕಾರ್ಮಿಕರಿಗೆ ಸನ್ಮಾನಿಸಲಾಯಿತು
ವಿಜಯಪುರ ನಗರದಲ್ಲಿ ಭಾನುವಾರ ನಡೆದ ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆಯಲ್ಲಿ ಪಾಲಿಕೆ ಕಾರ್ಮಿಕರಿಗೆ ಸನ್ಮಾನಿಸಲಾಯಿತು   

ವಿಜಯಪುರ: ನನಗೆ ರಾಜಕೀಯ ಪುನರ್ಜನ್ಮ ನೀಡಿದವರು ವಿಜಯಪುರ ಜನರು. ನಗರ ಹಿಂದೆ ಹೇಗಿತ್ತು, ಈಗ ಹೇಗಿದೆ ನೋಡಿ. ಅಭಿವೃದ್ಧಿ ಆಧಾರದ ಮೇಲೆಯೇ ಮುಂದಿನ ಚುನಾವಣೆ ನಡೆಯಲಿದೆ. ತಿಂಡಿ ಇದ್ದವರು ನಿಲ್ಲಲಿ. ಬ್ಲ್ಯಾಕ್ ಮೇಲ್ ಮಾಡುವುದು ಬೇಡ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದ ಅಟಲ್ ಬಿಹಾರಿ ವಾಜಪೇಯಿ ವೃತ್ತದಲ್ಲಿ ಭಾನುವಾರ ನಡೆದ ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆ, ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ 22 ಜನ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ, ಮಹಾನಗರ ಪಾಲಿಕೆಯ ಕಸವಿಲೇವಾರಿ ವಾಹನಗಳ ಲೋಕಾರ್ಪಣೆ, ₹ 50 ಕೋಟಿ ವಿಶೇಷ ಅನುದಾನಡಿ ಕೈಗೊಂಡಿರುವ ಆಂತರಿಕ ರಸ್ತೆ ಮತ್ತು ಒಳಚರಂಡಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

₹ 50 ಕೋಟಿ ಅನುದಾನ ಏಕಕಾಲದಲ್ಲಿ ನಗರದ ಅಭಿವೃದ್ಧಿಗೆ ತಂದಿರುವುದು ಇತಿಹಾಸ. ಈವರೆಗೆ ನಗರದಲ್ಲಿ ದಿನಕ್ಕೆ ಎರಡು ಜೊತೆ ಬಟ್ಟೆ ಹಾಕುವ ಸ್ಥಿತಿ ಇತ್ತು. ಸದ್ಯ ಒಂದು ಜೊತೆ ನಾಲ್ಕು ದಿನ ಹಾಕುತ್ತಿದ್ದೇವೆ ಎಂದು ಜನ ಹೇಳುತ್ತಿದ್ದಾರೆ. ರಾಜ್ಯದಲ್ಲಿಯೇ ಯಾವ ಶಾಸಕ ಮಾಡದಷ್ಟು ಅಭಿವೃದ್ಧಿ ಕಾರ್ಯ ಜಿಲ್ಲೆಯ ಅಧಿಕಾರಿಗಳ ಸಹಕಾರದಿಂದ ಮಾಡಿರುವೆ ಎಂದರು.

ADVERTISEMENT

ನಗರದ ಅಟಲ್ ಬಿಹಾರಿ ವಾಜಪೇಯಿ ಮಾರ್ಗ ಒತ್ತುವರಿ ತೆರವು ಮಾಡಿದಾಗ ಜನ ಮತ ಹಾಕಿದಕ್ಕೂ ಸಾರ್ಥಕ ಆಯಿತು ಅಂತ ಹೇಳಿದರು. ಇದೀಗ ಶೀಘ್ರದಲ್ಲೇ ಇನ್ನೊಂದು ಕಾರ್ಯಾಚರಣೆ ಮಾಡಲಾಗುವುದು ಎಂದು ತಿಳಿಸಿದರು.

ನಗರದ ಮಹಾತ್ಮ ಗಾಂಧಿ ಸರ್ಕಲ್‌ದಲ್ಲಿ ₹ 35 ಕೋಟಿ ಅನುದಾನದಲ್ಲಿ ಪ್ಲೈಓವರ್ ನಿರ್ಮಿಸಲು ಶೀಘ್ರ ಟೆಂಡರ್ ಕರೆಯಲಾಗುತ್ತದೆ. 27 ಸಾವಿರ ಎಲ್ ಇಡಿ ಬಲ್ಬ್‌ಗಳ ಅಳವಡಿಕೆ ಕಾರ್ಯ ಸಹ ಆರಂಭಗೊಳ್ಳಲಿದೆ. ಬಡವರಿಗೆ ಗುಣಮಟ್ಟದ ₹ 10 ಸಾವಿರ ಮನೆಗಳನ್ನು ನಿರ್ಮಿಸಿಕೊಡಲಾಗುತ್ತಿದೆ. ಸುಮಾರು ಒಂದು ಸಾವಿರ ಎಕರೆ ಪ್ರದೇಶದಲ್ಲಿ ಟೆಕ್ಸ್‌ ಟೈಲ್‌ ಪಾರ್ಕ್‌ ನಿರ್ಮಿಸಲಾಗುವುದು. ನಗರದಲ್ಲಿ ವರ್ತುವಲ್ ರಸ್ತೆ ಮಾಡುವ ಯೋಜನೆ ಇರುವುದಾಗಿ ತಿಳಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಮಹಾನಗರ ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ರಾಜು ಮಗಿಮಠ, ರಾಜೇಶ ದೇವಗಿರಿ, ಶಿವರುದ್ರ ಬಾಗಲಕೋಟ, ರಾಹುಲ್ ಜಾಧವ, ರಾಜು ಕುರಿ, ಎಂ.ಎಸ್.ಕರಡಿ, ಕಿರಣ ಪಾಟೀಲ, ಕುಮಾರ ಗಡಗಿ, ಪಾಂಡು ಸಾಹುಕಾರ್, ರಾಜು ಚವ್ಹಾಣ, ಆಯುಕ್ತ ವಿಜಯಕುಮಾರ್ ಮೆಕ್ಕಳಕಿ ಇದ್ದರು.

***

ರಾಜ್ಯದಲ್ಲಿ ಬಿಜೆಪಿ ಕಟ್ಟಿದ ಪ್ರಮುಖ ನಾಲ್ಕು ಜನರಲ್ಲಿ ನಾನು ಒಬ್ಬ. ವಿಜಯಪುರದ ಬಿಜೆಪಿಯ ಮೊದಲ ಸಂಸದ ಕೂಡ ನಾನೇ. ಮೀಸಲು ಕ್ಷೇತ್ರ ಆಗದಿದ್ದರೆ ಇಂದಿಗೂ ಸಂಸದನಾಗಿ, ಕೇಂದ್ರ ಸಚಿವನಾಗಿರುತ್ತಿದೆ

-ಬಸನಗೌಡ ಪಾಟೀಲ ಯತ್ನಾಳ, ಶಾಸಕರು ವಿಜಯಪುರ ನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.