ADVERTISEMENT

ಅಂಗವಿಕಲರಿಗೆ ಸಲಕರಣೆ ವಿತರಣೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 20:15 IST
Last Updated 3 ಡಿಸೆಂಬರ್ 2019, 20:15 IST
ಕೊಲ್ಹಾರ ಪಟ್ಟಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಅಂಗವಿಕಲರಿಗೆ ಮಂಗಳವಾರ ವಿವಿಧ ಸಲಕರಣೆಗಳನ್ನು ವಿತರಿಸಲಾಯಿತು
ಕೊಲ್ಹಾರ ಪಟ್ಟಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಅಂಗವಿಕಲರಿಗೆ ಮಂಗಳವಾರ ವಿವಿಧ ಸಲಕರಣೆಗಳನ್ನು ವಿತರಿಸಲಾಯಿತು   

ಕೊಲ್ಹಾರ: ‘ಕಣ್ಣಿಗೆ ಗೋಚರಿಸದ ಸಹಸ್ರ ದೇವರಿಗಿಂತ, ಕಣ್ಮುಂದೆ ಕಾಣುವ ವಿಕಲಚೇತನರು ಹಾಗೂ ಹಿರಿಯ ಜೀವಿಗಳಿಗೆ ತೋರಿಸುವ ಪ್ರೀತಿ ಹಾಗೂ ಸೇವೆ ಸಹಸ್ರ ದೇವರ ಪೂಜೆಗಿಂತ ಶ್ರೇಷ್ಠ’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ವ್ಯವಸ್ಥಾಪಕ ಶ್ರೀನಿವಾಸ ಪೂಜಾರಿ ಹೇಳಿದರು.

ಪಟ್ಟಣದ ಬನಶಂಕರಿ ದೇವಸ್ಥಾನದ ಭವನದಲ್ಲಿ ಬಸವನಬಾಗೇವಾಡಿಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಒಕ್ಕೂಟಗಳ ಸಾಧನಾ ಸಮಾವೇಶ ಹಾಗೂ ಜನಮಂಗಳ ಕಾರ್ಯಕ್ರಮದಡಿ ಅಂಗವಿಕಲರಿಗೆ ಸಲಕರಣೆ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜನ್ಮ ದಿನವನ್ನು ಆಚರಿಸುವ ಬದಲು ನಿರ್ಗತಿಕರು ಹಾಗೂ ವೃದ್ಧರಿಗೆ ಕೊಡುಗೆ ನೀಡುವ ಪರಿಪಾಠ ರೂಢಿಸಿಕೊಳ್ಳಬೇಕು. ಸಾಮಾನ್ಯ ಜನರಿಗಿಂತ ಅಂಗವಿಕಲರಿಗೆ ದೇವರು ವಿಶೇಷ ಶಕ್ತಿ ನೀಡಿರುತ್ತಾನೆ. ಸಲಕರಣೆ ವಿತರಣೆ ಕಾರ್ಯ ಸಂಸ್ಥೆಯಿಂದ ನಿರಂತರವಾಗಿ ಸಾಗಿದೆ. ಜಿಲ್ಲೆಯಲ್ಲಿ ಒಂದೂವರೆ ಲಕ್ಷ ಸದಸ್ಯರಿದ್ದು, 15 ಸಾವಿರ ಸ್ವಸಹಾಯ ಸಂಘಗಳಿವೆ’ ಎಂದರು.

ADVERTISEMENT

‘ಜಿಲ್ಲೆಯಲ್ಲಿ 30 ಮಹಿಳೆಯರಿಗೆ ಆಟೊ ಚಾಲನೆ ತರಬೇತಿ ನೀಡಲಾಗಿದ್ದು, ಅವರು ಚಾಲನಾ ಪರವಾನಗಿ ಪಡೆದುಕೊಂಡಿದ್ದಾರೆ. ಸಂಸ್ಥೆ ವತಿಯಿಂದ ಅವರಿಗೆ ಆಟೊಗಳನ್ನು ವಿತರಿಸಲಾಗುವುದು. ಹಣಕ್ಕೆ ಬೆಲೆ ಕೊಡದೇ ಗುಣಕ್ಕೆ ಬೆಲೆ ಕೊಡುವ ಕಾರ್ಯಕರ್ತರೇ ಸಂಸ್ಥೆಯ ಶಕ್ತಿ’ ಎಂದು ಹೇಳಿದರು.

ಸಂಸ್ಥೆಯ ಬಸವನಬಾಗೇವಾಡಿ ತಾಲ್ಲೂಕು ಯೋಜನಾಧಿಕಾರಿ ಪಿ.ಸುಧಾ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪಟ್ಟಣ ಪಂಚಾಯಿತಿ ಸದಸ್ಯೆ ಪುಷ್ಪಾ ಗಣಕುಮಾರ ಹಾಗೂ ಪತ್ರಕರ್ತ ಪರಶುರಾಮ ಗಣಿ ಮಾತನಾಡಿದರು.

ಗಾಲಿ ಕುರ್ಚಿ, ವಾಟರ್ ಬೆಡ್, ವಾಕರ್, ವಾಕ್ ಸ್ಟಿಕ್ ಸೇರಿದಂತೆ ವಿವಿಧ ಪರಿಕರಗಳನ್ನು ಉಚಿತವಾಗಿ ವಿತರಿಸಲಾಯಿತು. ಅತ್ಯುತ್ತಮ ಸಾಧನೆ ತೋರಿದ ಒಕ್ಕೂಟಗಳಿಗೆ ಪ್ರಶಸ್ತಿ ನೀಡಲಾಯಿತು.

ಬನಶಂಕರಿ ದೇವಸ್ಥಾನ ಕಮಿಟಿಯ ಈರಣ್ಣ ಔರಸಂಗ, ಸಿದ್ದು ಕೂಚಬಾಳ, ಶಂಕರಲಿಂಗ ಕಲ್ಯಾಣಿ ಇದ್ದರು. ವಲಯ ಮೇಲ್ವಿಚಾರಕಿ ಪದ್ಮಶ್ರೀ ಪಿ. ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.