ADVERTISEMENT

ನಿಗಮ ಸ್ಥಾಪನೆ: ಐತಿಹಾಸಿಕ ನಿರ್ಣಯ

ಇಂಡಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಯಶವಂತರಾಯಗೌಡ ಪಾಟೀಲ ಸ್ವಾಗತ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2020, 10:34 IST
Last Updated 18 ನವೆಂಬರ್ 2020, 10:34 IST
ಯಶವಂತರಾಯಗೌಡ ಪಾಟೀಲ
ಯಶವಂತರಾಯಗೌಡ ಪಾಟೀಲ   

ವಿಜಯಪುರ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವ ಮೂಲಕ ಐತಿಹಾಸಿಕ ನಿರ್ಣಯ ಕೈಗೊಂಡಿದ್ದು, ಸಮುದಾಯದ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಇಂಡಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಯಶವಂತ ರಾಯಗೌಡ ಪಾಟೀಲ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಗಮ ಸ್ಥಾಪಿಸಬೇಕು ಎಂಬುದು ದಶಕಗಳ ಬೇಡಿಕೆಯಾಗಿತ್ತು. ಕಳೆದ ಮಾರ್ಚ್‌ನಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ನಿಗಮ ಸ್ಥಾಪನೆ ಬಗ್ಗೆ ನಾನು ಸದನದಲ್ಲಿ ಹಕ್ಕೊತ್ತಾಯ ಮಾಡಿದ್ದೆ. ಇದಕ್ಕೆ ರಾಜ್ಯದ ವಿವಿಧ ಪಕ್ಷಗಳ ಶಾಸಕರು ಧ್ವನಿಗೂಡಿಸಿದ್ದರು. ಇದೀಗ ರಾಜ್ಯ ಸರ್ಕಾರ ನಿಗಮ ಸ್ಥಾಪನೆ ಮಾಡಿರುವುದು ಸ್ವಾಗತಾರ್ಹ ಎಂದರು.

ಸದ್ಯ ಕೋವಿಡ್‌ ಸಂಕಷ್ಟ ಇರುವುದರಿಂದ ನಿಗಮಕ್ಕೆ ಅನುದಾನ ಮೀಸಲಿಟ್ಟಿಲ್ಲ. ಭವಿಷ್ಯದಲ್ಲಿ ಹೆಚ್ಚಿನ ಅನುದಾನವನ್ನು ನಿಗಮಕ್ಕೆ ನೀಡಬೇಕು ಎಂದು ಅವರು ಮನವಿ ಮಾಡಿದರು.

ADVERTISEMENT

ವೀರಶೈವ ಲಿಂಗಾಯತ ಸಮಾಜದಲ್ಲೂ ಅನೇಕ ಉಪಪಂಗಡಗಳಿವೆ, ಆರ್ಥಿಕವಾಗಿ ಬಹಳಷ್ಟು ಕಡುಬಡವರಿದ್ದಾರೆ. ಭವಿಷ್ಯದಲ್ಲಿ ಅವರು ಆರ್ಥಿಕವಾಗಿ ಸುಧಾರಣೆಯಾಗಲು, ಶೈಕ್ಷಣಿಕವಾಗಿ ಮುಂದೆ ಬರಲು ನಿಗಮದಿಂದ ಅನುಕೂಲವಾಗಲಿದೆ ಎಂದರು.

ನಿಗಮ ಸ್ಥಾಪನೆಗೆ ಸಾಕಷ್ಟು ಪರ, ವಿರೋಧ ವ್ಯಕ್ತವಾಗುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಶಾಸಕರು,ರಾಜ್ಯ ಸರ್ಕಾರ ಕೈಗೊಂಡಿರುವ ಒಳ್ಳೆಯ ನಿರ್ಣಯವನ್ನು ಪ್ರಾಂಜಲ ಮನಸ್ಸಿನಿಂದ ಸ್ವಾಗತಿಸೋಣ ಎಂದು ಹೇಳಿದರು.

ನಿಗಮ ಸ್ಥಾಪನೆಯು ಲಿಂಗಾಯತ ಸಮಾಜದ ಮುಂದುವರಿದವರಿಗೆ ಸಹಾಯ ಮಾಡಲು ಅಲ್ಲ, ಆರ್ಥಿಕವಾಗಿ ಹಿಂದುಳಿದವರಿಗೆ ಹೆಚ್ಚು ಅನುಕೂಲವಾಗಬೇಕು ಎಂದರು.

2 ‘ಎ’ಗೆ ಸೇರ್ಪಡೆಗೊಳಿಸಿ

ವೀರಶೈವ ಲಿಂಗಾಯತ ಸಮಾಜವನ್ನು ಕೇಂದ್ರದ ಹಿಂದುಳಿದ ವರ್ಗಗಳ2 ‘ಎ’ಗೆ ಸೇರ್ಪಡೆಗೊಳಿಸಲುರಾಜ್ಯ ಸರ್ಕಾರ ಶಿಫಾರಸು ಮಾಡುವಂತೆ ಆಗ್ರಹಿಸಿದರು.

ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ವೀರಶೈವ ಲಿಂಗಾಯತ ಸೇರ್ಪಡೆಯಾದರೆ ಸಮಾಜದ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಬೇಸರ:ಭೀಮಾ ನದಿ ಪ್ರವಾಹಕ್ಕೆ ತುತ್ತಾದ ಜಿಲ್ಲೆಗೆ ಮುಖ್ಯಮಂತ್ರಿ ಭೇಟಿ ನೀಡದೇ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದ ಅವರು, ಈ ಬಗ್ಗೆ ನೋವಿದೆ. ಜಿಲ್ಲೆಗೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವಾನ ಹೇಳಬೇಕಾಗಿತ್ತು ಎಂದು ಹೇಳಿದರು.

ಸೊನ್ನಾ ಬ್ಯಾರೇಜ್‌ ಅವೈಜ್ಞಾನಿಕ ನಿರ್ವಹಣೆಯಿಂದಭೀಮಾ ಪ್ರವಾಹಕ್ಕೆ ಕಾರಣವಾಯಿತು. ನೀರಾವರಿ ನಿಗಮದ ತಪ್ಪಿತಸ್ಥ ಎಂಜಿನಿಯರ್‌ಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.

ಕೃಷ್ಣಾ ನದಿ ನೀರು ನಿರ್ವಹಣೆ ವೈಜ್ಞಾನಿಕವಾಗಿ ನಡೆಯುತ್ತಿದ್ದು, ಇದೇ ರೀತಿ ಭೀಮಾ ನದಿ ನೀರು ನಿರ್ವಹಣೆಗೂ ವೈಜ್ಞಾನಿಕವಾಗಿ ನಡೆಯಬೇಕಾಗಿದೆ ಎಂದರು.

****

ರಾಜ್ಯದಲ್ಲಿ ಇನ್ನೂ ಅನೇಕ ಶೋಷಿತ ಸಮುದಾಯಗಳಿವೆ. ಅವುಗಳನ್ನು ಗುರುತಿಸುವ ಕೆಲಸವನ್ನು ಸರ್ಕಾರ ಮಾಡಬೇಕು
–ಯಶವಂತರಾಯಗೌಡ ಪಾಟೀಲ
ಶಾಸಕ, ಇಂಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.