ಕೊಲ್ದಾರ: ಮಂಗಳವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಕೃಷ್ಣಾ ನದಿ ಹಿನ್ನೀರಿನಿಂದ ಮುಳುಗಡೆಯಾಗುವ ರೈತರ ಜಮೀನುಗಳಿಗೆ ಸರ್ಕಾರ ನೀರಾವರಿ ಕ್ಷೇತ್ರಕ್ಕೆ 1 ಎಕರೆಗೆ ₹55 ಲಕ್ಷ, ಒಣಬೇಸಾಯ 1 ಎಕರೆ ಕ್ಷೇತ್ರಕ್ಕೆ ₹45 ಲಕ್ಷ ದರ ನಿಗದಿ ಮಾಡಲು ಆಗ್ರಹಿಸಿದ ರೈತರು ಸತ್ಯಾಗ್ರಹ ಸೋಮವಾರ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ನೇತೃತ್ವದಲ್ಲಿ ಪ್ರಾರಂಭಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಅಣೆಕಟ್ಟನ್ನು 524 ಮೀ ಎತ್ತರಿಸಲು ಸರ್ಕಾರ ನಿರ್ಧರಿಸಿರುವುದರಿಂದ ಮುಳಗಡೆಯಾಗುವ ಜಮೀನುಗಳಿಗೆ ಈಗಿನ ಮಾರುಕಟ್ಟೆ ದರದಲ್ಲಿ ಯೋಗ್ಯ ಬೆಲೆಯನ್ನು ರೈತರ ಜಮೀನುಗಳಿಗೆ ಕೊಡಬೇಕೆಂದು ಆಗ್ರಹಿಸಿ ಪಟ್ಟಣದ ಯುಕೆಪಿ ವೃತ್ತದ ಹತ್ತಿರ ಪ್ರವಾಸಿ ಮಂದಿರದ ಎದುರಿಗೆ ಕೈಗೊಂಡ ಸರದಿ ಉಪವಾಸ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.
ಸತ್ಯಾಗ್ರಹ ಪ್ರಾರಂಭಿಸುವ ಮೊದಲು ಮಹಿಳೆಯರು ರೈತರು ಸೇರಿ ಶಕ್ತಿದೇವತೆ ಕೊರೆಮ್ಮದೇವಿಗೆ ಶೀಲವಂತ ಹಿರೇಮಠದ ಕೈಲಾಸನಾಥ ಶ್ರೀಗಳ ವೇದಮಂತ್ರ ಪಠಣದಿಂದ ಪೂಜೆಯನ್ನು ನೆರವೇರಿಸಿ, ಟೆಂಟ್‌ನಲ್ಲಿ ರೈತರು ಸತ್ಯಾಗ್ರಹಕ್ಕೆ ಚಾಲನೆ ನೀಡಿದರು. ಸೆ.20ರ ವರೆಗೆ ಸರದಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು. ಸೆ.21ರಿಂದ ಆಮರಣ ಉಪವಾಸ ಸತ್ಯಾಗ್ರಹ ಪ್ರಾರಂಭಿಸಲಾಗುವುದು ಎಂದರು.
ಈ ಭಾಗದ ಶಾಸಕ, ಸಚಿವ ಶಿವಾನಂದ ಪಾಟೀಲ ಪ್ರತಿ ಎಕರೆ ಭೂಮಿಗೆ ₹35 ಲಕ್ಷದ ವರೆಗೆ ಪರಿಹಾರ ನೀಡಿದರೆ ಸಾಕು ಎನ್ನುವ ಉದ್ದಟತನದಿಂದ ಮಾತುಗಳನ್ನು ಆಡಿದ್ದಾರೆ. ರೈತರಿಗೆ, ರೈತರ ಭೂಮಿಗೆ ಬೆಲೆ ಇಲ್ಲವೇ ಎಂದು ಶಿವಾನಂದ ಪಾಟೀಲ ವಿರುದ್ಧ ಹರಿಹಾಯ್ದರು. ಬೇಕಿದ್ದರೆ ಸಚಿವ ಶಿವಾನಂದ ಪಾಟೀಲ ತಮ್ಮ ಭೂಮಿಯನ್ನು ಬಿಟ್ಟು ಕೊಡಲಿ. ತಮ್ಮದೇ ಸರ್ಕಾರ ಇರುವುದರಿಂದ ಪ್ರತೀ ಎಕರೆ ನೀರಾವರಿ ಭೂಮಿಗೆ ₹60 ಲಕ್ಷ ಹಾಗೂ ನೀರಾವರಿ ಅಲ್ಲದ ಭೂಮಿಗೆ ₹50 ಲಕ್ಷ ಒದಗಿಸಿಕೊಡಲಿ ಎಂದರು.
ಸತ್ಯಾಗ್ರಹ ಸಂಚಾಲಕರಾಗಿ ಚಂದ್ರಶೇಖರ ಬೆಳ್ಳುಬ್ಬಿ, ಜಗದೀಶ ಸುಣಗದ ಅವರನ್ನು ನೇಮಕ ಮಾಡಲಾಯಿತು.ವಿಜಯಪುರ ಬಿಜೆಪಿ ಜಿಲ್ಲಾ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಂಡಲ ಅಧ್ಯಕ್ಷ ಸಿದ್ದರಾಮ ಕಾಖಂಡಕಿ, ಚಂದ್ರಶೇಖರಯ್ಯ ಗಣಕುಮಾರ, ಇಸ್ಮಾಯಿಲಸಾಬ ತಹಶೀಲ್ದಾರ್. ನಂದಬಸಪ್ಪ ಚೌಧರಿ, ಬಾಬು ಬಜಂತ್ರಿ, ಶಿವಾನಂದ ಅವಟಿ, ಪ್ರಶಾಂತ ಪವಾರ, ಸಗರೆಪ್ಪ ಮುರನಾಳ, ವಿರುಪಾಕ್ಷಿ ಗಿಡ್ಡಪ್ಪಗೋಳ, ರಾಜು ತುಂಬರಮಟ್ಟಿ, ಬಸವರಾಜ ಅಂಬಲಜರಿ, ಅಖಿಲಗೌಡ ಪಾಟೀಲ, ಸಂಗಪ್ಪ ಚಿತ್ತಾಪುರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.