ADVERTISEMENT

ಪೊಲೀಸರಿಂದಲೇ ತಂದೆ ಕೊಲೆ: ಸಿಬಿಐ ತನಿಖೆಗೆ ಆಗ್ರಹ

ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರು ಯಲಹಂಕ ಠಾಣೆ ಹೆಡ್‌ ಕಾನ್‌ಸ್ಟೆಬಲ್‌ ವಿಡಿಯೊ ವೈರಲ್‌

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 12:54 IST
Last Updated 4 ನವೆಂಬರ್ 2020, 12:54 IST
ಬಸವರಾಜ ಪಾಟೀಲ
ಬಸವರಾಜ ಪಾಟೀಲ   

ವಿಜಯಪುರ: ‘ಹಣಕ್ಕಾಗಿ ವಿಜಯಪುರ ಜಿಲ್ಲೆ ಸಿಂದಗಿ ಪೊಲೀಸರು ಕುಟುಂಬದ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ತಂದೆಯನ್ನು ಕೊಲೆ ಮಾಡಿದ್ದು, ಪ್ರಕರಣವನ್ನು ಸಿಬಿಐಗೆ ವಹಿಸಬೇಕು’ ಎಂದು ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ವಿಜಯಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಬೆಂಗಳೂರು ಯಲಹಂಕ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ಬಸವರಾಜ ಪಾಟೀಲ ಮನವಿ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

‘ನಾನು ಬೆಂಗಳೂರು ನಗರದಲ್ಲಿ 13 ವರ್ಷಗಳಿಂದ ಪೊಲೀಸ್‌ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನನ್ನ ಕುಟುಂಬದ ವಿರುದ್ಧ ಸಿಂದಗಿ ಪೊಲೀಸರು ದೌರ್ಜನ್ಯ, ಅಟ್ಟಹಾಸ, ರಾಕ್ಷಸ ಕೃತ್ಯ ಎಸಗಿದ್ದಾರೆ. ಅವರು ಹೇಳಿದ ಹಾಗೆ ಕೇಳಲಿಲ್ಲ ಎಂದು ತಂದೆಯನ್ನು ಹೊಡೆದು ಕೊಲೆ ಮಾಡಿದ್ದಾರೆ. ತಾಯಿ, ಸಹೋದರನನ್ನು ಹೊಡೆದಿದ್ದಾರೆ. ಅವರಿಬ್ಬರು ಈಗ ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ತಂದೆ ಸಾಯುವ ಮುನ್ನಾ ಡೆತ್‌ ನೋಟ್‌ ಬರೆದಿದ್ದಾರೆ. ಅದರಲ್ಲಿ, ದೌರ್ಜನ್ಯ ಎಸಗಿದ ಸಿಂದಗಿಯ ಎಂಟು ಜನ ಪೊಲೀಸರ ಹೆಸರನ್ನು ಬರೆದಿದ್ದಾರೆ. ಈ ಕುರಿತು ಸೂಕ್ತ ದಾಖಲೆಗಳು, ಸಾಕ್ಷಿಗಳು ಇದ್ದರೂ ವಿಜಯಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇದುವರೆಗೂ ಅವರ ವಿರುದ್ಧ ಕ್ರಮಕೈಗೊಂಡಿಲ್ಲ’ ಎಂದು ದೂರಿದ್ದಾರೆ.
‘ನಾನೊಬ್ಬ ಪೊಲೀಸ್‌ ಇಲಾಖೆ ನೌಕರನಾಗಿದ್ದೂ ನನ್ನ ತಂದೆ ಜೀವ ಕಾಪಾಡಿಕೊಳ್ಳಲು ಸಾಧ್ಯವಾಗಿಲ್ಲ. ಇನ್ನು ಸಾರ್ವಜನಿಕರ ಪಾಡೇನು’ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ನಮ್ಮ ತಂದೆ ಸಾವಿಗೆ ಹಾಗೂ ನಮ್ಮ ಕುಟುಂಬಕ್ಕೆ ಮುಖ್ಯಮಂತ್ರಿಗಳು, ಗೃಹ ಸಚಿವರು ಹಾಗೂ ವಿಜಯಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರು ನ್ಯಾಯ ದೊರಕಿಸಿಕೊಡಬೇಕು’ ಎಂದು ಒತ್ತಾಯಿಸಿದ್ದಾರೆ.

‘ನನ್ನ ಮತ್ತು ನನ್ನ ಅಣ್ಣನಿಗೆ ಸಿಂದಗಿ ಪೊಲೀಸರು ಬೆದರಿಕೆ ಹಾಕುತ್ತಿದ್ದಾರೆ. ನನ್ನ ವಿರುದ್ಧ ಎಫ್‌ಐಆರ್‌ ದಾಖಲಿಸಿ, ನೌಕರಿ ತೆಗೆಯುವುದಾಗಿ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಅವರು ದೂರಿದ್ದಾರೆ.

ಈ ಕುರಿತು ದೂರವಾಣಿ ಮೂಲಕ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹೆಡ್‌ ಕಾನ್‌ಸ್ಪೆಬಲ್‌ ಬಸವರಾಜ ಪಾಟೀಲ, ‘ಜಮೀನು ವಿವಾದ ಸಂಬಂಧ ನಮ್ಮ ದಾಯಾದಿಗಳ ಪರ ವಹಿಸಿರುವ ಸಿಂದಗಿ ಪೊಲೀಸರು, ಅವರಿಂದ ಹಣ ಪಡೆದು ನಮ್ಮ ಕುಟುಂಬದ ವಿರುದ್ಧ 2006ರಿಂದ ದೌರ್ಜನ್ಯ ನಡೆಸುತ್ತಾ ಬಂದಿದ್ದಾರೆ. ಪೊಲೀಸ್‌ ದೌರ್ಜನ್ಯದಿಂದ ನೊಂದ ನಮ್ಮ ತಂದೆ 2016ರಲ್ಲಿ ಸಾವನಪ್ಪಿದ್ದಾರೆ. ಅಂದಿನಿಂದ ಇಂದಿನವರೆಗೂ ಕುಟುಂಬಕ್ಕೆ ನಿರಂತರ ಕಿರುಕುಳ ನೀಡುತ್ತಿದ್ದಾರೆ. ನನಗೆ ನ್ಯಾಯ ಒದಗಿಸಿಕೊಡಿ’ ಎಂದು ಮನವಿ ಮಾಡಿದರು.
***
ಪೊಲೀಸ್‌ ಸಿಬ್ಬಂದಿಯೊಬ್ಬರು ತಮ್ಮ ಕುಟುಂಬಕ್ಕೆ ಅನ್ಯಾಯವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಆರೋಪ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಮಾಹಿತಿ ಪಡೆದು, ಸೂಕ್ತ ಕ್ರಮಕೈಗೊಳ್ಳಲಾಗುವುದು

- ಅನುಪಮ್‌ ಅಗರವಾಲ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.