ADVERTISEMENT

ವಿಜಯಪುರ: ಆಸ್ಟ್ರಿಯಾದಿಂದ ಬಂದ ಅಗ್ನಿಶಾಮಕ ವಾಹನ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 5:23 IST
Last Updated 28 ಸೆಪ್ಟೆಂಬರ್ 2025, 5:23 IST
ವಿಜಯಪುರ ವಿಮಾನ ನಿಲ್ದಾಣಕ್ಕೆ ಆಸ್ಟ್ರಿಯಾದಿಂದ ಸೋಮವಾರ ಬಂದು ತಲುಪಿರುವ ಅತ್ಯಾಧುನಿಕ ಅಗ್ನಿಶಾಮಕ ವಾಹನಗಳು
ವಿಜಯಪುರ ವಿಮಾನ ನಿಲ್ದಾಣಕ್ಕೆ ಆಸ್ಟ್ರಿಯಾದಿಂದ ಸೋಮವಾರ ಬಂದು ತಲುಪಿರುವ ಅತ್ಯಾಧುನಿಕ ಅಗ್ನಿಶಾಮಕ ವಾಹನಗಳು   

ವಿಜಯಪುರ: ಉದ್ಘಾಟನೆಗೆ ಸಜ್ಜಾಗಿರುವ ಇಲ್ಲಿನ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣಕ್ಕೆ ಅಗತ್ಯವಾದ ಎರಡು ಅತ್ಯಾಧುನಿಕ ಅಗ್ನಿಶಾಮಕ ವಾಹನಗಳು ಆಸ್ಟ್ರಿಯಾದಿಂದ ಸೋಮವಾರ ಬಂದು ತಲುಪಿವೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಈ ಅಗ್ನಿಶಾಮಕ ವಾಹನಗಳು ಕಂಪ್ಯೂಟರೀಕೃತವಾಗಿದ್ದು, ಜಾಗತಿಕ ಟೆಂಡರ್ ಅಡಿಯಲ್ಲಿ ಆಸ್ಟ್ರಿಯಾದಿಂದ ಪೂರೈಕೆಯಾಗಿವೆ. ಇವುಗಳ ಬೆಲೆ ಅಂದಾಜು ₹24 ಕೋಟಿ. ಇವು ತುರ್ತು ಸಂದರ್ಭಗಳಲ್ಲಿ 160 ಮೀಟರ್‌ವರೆಗೂ ನೀರನ್ನು ಹಾಯಿಸಿ, ಬೆಂಕಿಯನ್ನು ನಂದಿಸುವ ಸಾಮರ್ಥ್ಯ ಹೊಂದಿವೆ. ಈ ಮೂಲಕ ನಾಗರಿಕ ವಿಮಾನಯಾನ ಮಹಾ‌ ನಿರ್ದೇಶನಾಲಯ ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಹೇಳಿದ್ದ ಮತ್ತೊಂದು ಅಗತ್ಯ ಪೂರೈಸಲಾಗಿದೆ ಎಂದು ಹೇಳಿದ್ದಾರೆ.

ಈ ಅಗ್ನಿಶಾಮಕ ವಾಹನಗಳು ನೆಲದ ಮೇಲಿನ‌ ಬೆಂಕಿಯನ್ನು ನಂದಿಸಿಕೊಂಡು ವೇಗದಿಂದ ಮುನ್ನುಗ್ಗಬಲ್ಲವು. ವಿಜಯಪುರ ವಿಮಾನ ನಿಲ್ದಾಣದ ಮೂಲ ವಿನ್ಯಾಸದಲ್ಲಿ ಈ ಸೌಲಭ್ಯಗಳು ಇರಲಿಲ್ಲ. ಆಮೇಲೆ ಇದರ ಜತೆಗೆ ಇನ್ನೂ ಹಲವು ಅನುಕೂಲಗಳನ್ನು ಸೇರಿಸಲಾಯಿತು. ಆಸ್ಟ್ರಿಯಾದಿಂದ ಹಡಗಿನಲ್ಲಿ ಮುಂಬೈಗೆ ಬಂದಿಳಿದ ಈ ವಾಹನಗಳನ್ನು, ಅಲ್ಲಿಂದ ಟ್ರಕ್ ಮೂಲಕ ವಿಜಯಪುರಕ್ಕೆ ತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಅಗ್ನಿಶಾಮಕ ವಾಹನಗಳು ಬಂದಿರುವುದರಿಂದ ವಿಮಾನ ನಿಲ್ದಾಣ ಉದ್ಘಾಟನೆಯತ್ತ ಮತ್ತೊಂದು ಹೆಜ್ಜೆ ಮುಂದಿಡಲಾಗಿದೆ. ಪರಿಸರ ಸಂಬಂಧಿ ಅನುಮತಿ ಮಾತ್ರ ಬಾಕಿ ಇದ್ದು, ಅದನ್ನು ಪಡೆದುಕೊಳ್ಳಲು ಕೂಡ ಪ್ರಯತ್ನಿಸಲಾಗುತ್ತಿದೆ ಎಂದು ಪಾಟೀಲ
ಹೇಳಿದ್ದಾರೆ.

ವಿಜಯಪುರ ವಿಮಾನ ನಿಲ್ದಾಣಕ್ಕೆ ಆಸ್ಟ್ರಿಯಾದಿಂದ ಸೋಮವಾರ ಬಂದು ತಲುಪಿರುವ ಅತ್ಯಾಧುನಿಕ ಅಗ್ನಿಶಾಮಕ ವಾಹನ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.