ಸೋಲಾಪುರ: ಸೀನಾ, ಕೊಳೆಗಾವ್, ಭೀಮಾ ಬೋರಿ, ನದಿಗಳ ನೀರು ಅಪಾರ ಪ್ರಮಾಣದಲ್ಲಿ ಬಿಟ್ಟಿದ್ದರಿಂದ ಪ್ರವಾಹ ಉಂಟಾಗಿ ಜಿಲ್ಲೆಯ 431 ಶಾಲೆಗಳು ಜಲಾವೃತಗೊಂಡಿವೆ.
ಅತಿವೃಷ್ಟಿ ಹಾಗೂ ಪ್ರವಾಹದ ನೀರಿನಿಂದ ಶಾಲೆಗಳ ಹಾನಿ ವಿವರವಾದ ಮಾಹಿತಿ ನೀಡಲು ಶಾಲಾ ಮುಖ್ಯೋಪಾಧ್ಯಾಯರಿಗೆ ಸೂಚಿಸಲಾಗಿದೆ. ಮಾಹಿತಿ ಬಂದ ನಂತರ ನಷ್ಟದ ಪ್ರಮಾಣ ತಿಳಿಯಲಿದೆ ಎಂದು ಪ್ರಾಥಮಿಕ ಶಿಕ್ಷಣಾಧಿಕಾರಿ ಖಾದರ್ ಶೇಖ್ ತಿಳಿಸಿದ್ದಾರೆ.
ಶಾಲೆಗಳ ವರ್ಗ ಕೋಣೆಗಳಲ್ಲಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಕೆಲವು ಶಾಲೆಗಳಿಗೆ ಪ್ರಾಥಮಿಕ ಶಿಕ್ಷಣಾಧಿಕಾರಿ ಖಾದರ ಶೇಖ್ ಭೇಟಿ ನೀಡಿ ಶಾಲೆಗಳ ಪರಿಶೀಲನೆ ನಡೆಸಿದ್ದಾರೆ. ಕೆಲವು ಶಾಲೆಗಳನ್ನು ಬೇರೆ ಕಡೆ ಸ್ಥಳಾಂತರಿಸಲಾಗಿದೆ.
ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಸೀನಾ, ಭೀಮಾ, ಬೋರಿ ಈ ನದಿಗಳ ದಂಡೆಯಲ್ಲಿರುವ ಗ್ರಾಮಗಳ ಅನೇಕ ಶಾಲೆಗಳು ಇನ್ನೂ ನೀರಲ್ಲಿವೆ. ಯಾವ ಶಾಲೆಗಳಲ್ಲಿ ನೀರು ಕಡಿಮೆಯಾಗಿದೆಯೋ ಆ ಶಾಲೆಗಳಲ್ಲಿ ಸ್ವಚ್ಛತೆಯ ಕಾರ್ಯ ಆರಂಭಿಸಲಾಗಿದೆ.
ಪ್ರವಾಹದ ನೀರಿನಿಂದಾಗಿ ಶಾಲೆಗಳಲ್ಲಿ ದಾಖಲೆಯ ರಿಜಿಸ್ಟರ್, ಕಿಟಕಿ, ಬಾಗಿಲು, ಟೇಬಲ್, ಕುರ್ಚಿ, ಕಂಪ್ಯೂಟರ್ ಇತ್ಯಾದಿ ವಸ್ತುಗಳ ಅಪಾರ ನಷ್ಟವಾಗಿದೆ. ವಿವರವಾದ ಮಾಹಿತಿಯನ್ನು ಶಿಕ್ಷಣ ವಿಭಾಗದ ಕಡೆಗೆ ಕಳಿಸಿಕೊಡಿ ಎಂದು ಶಿಕ್ಷಣಾಧಿಕಾರಿ ಶೇಖ ಶಾಲಾ ಮುಖ್ಯೋಪಾಧ್ಯಾಯರಿಗೆ ಆದೇಶ ನೀಡಿದ್ದಾರೆ.
ದಕ್ಷಿಣ ಸೋಲಾಪುರ ತಾಲೂಕಿನ ಹತ್ತೂರ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ವರ್ಗ ಕೋಣೆಯಲ್ಲಿ ಸೇರಿರುವ ನೀರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.