ಚಡಚಣ: ಸತತವಾಗಿ ಮೂರು ದಿನಗಳಿಂದ ಧಾರಾಕಾರ ಸುರಿಯುತ್ತಿರುವ ಮಳೆಯಿಂದ ತಾಲ್ಲೂಕಿನ ಹಲವಾರು ಗ್ರಾಮಗಳು ಜಲಾವೃತಗೊಂಡು, ಸಂಪರ್ಕ ಕಡಿತಗೊಂಡಿವೆ.
ವಿಜಯಪುರ ಮಾರ್ಗವಾಗಿ ದೇವರ ನಿಂಬರಗಿ- ಜಿಗಜೆವಣಿ - ಇಂಚಗೇರಿ ಗ್ರಾಮಗಳ ಮೂಲಕ ಚಡಚಣ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಜಜಲಾವೃತಗೊಂಡಿವೆ. ಏಳಗಿ - ಹಲಸಂಗಿ ಗ್ರಾಮದ ಪ್ರಮುಖ ರಸ್ತೆ ಸಂಪರ್ಕ ಸ್ಥಗಿತವಾಗಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಜಿಗಜೇವಣಿ ಗ್ರಾಮದಲ್ಲಿ ಗುರುವಾರ ನಸುಕಿನಲ್ಲಿ ಸುಮಾರ 5 ಅಡಿ ಎತ್ತರ ನೀರು ಹರಿಯುತ್ತಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಗ್ರಾಮದ ಶ್ರೀ ಕವದೇಶ್ವರ ಮಹಾರಾಜರ ದೇವಸ್ಥಾನ, ನೂರಾರು ಮನೆಗಳು, ಅಂಗಡಿಗಳು, ಪೆಟ್ರೋಲ್ ಬಂಕ್ ಗಳಲ್ಲಿ ನೀರು ನುಗ್ಗಿ ಜಲಾವೃತವಾಗಿವೆ. ಶಾಲಾ ವಿದ್ಯಾರ್ಥಿಗಳು, ಪ್ರಯಾಣಿಕರು ಯಾವುದೇ ಸಾರಿಗೆ ವ್ಯವಸ್ಥೆಯು ಇಲ್ಲದೆ ಇಡೀ ದಿವಸ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ದೇವರನಿಂಬರಗಿ ಗ್ರಾಮದಿಂದ ವಿಜಯಪುರಕ್ಕೆ ಸಂಪರ್ಕ ಕಲ್ಪಸುವ ರಸ್ತೆ ಜಲಾವೃತಗೊಂಡು, ಗುರುಲಿಂಗ ಮಹಾರಾಜರ ಮಠ ಜಲ ದಿಗ್ಭಂದನಕ್ಕೆ ಒಳಗಾಗಿದೆ. ಜಿಗಜೇವಣಿ ಹಾಗೂ ದೇವರನಿಂಬರಗಿ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.
ನಾಗಠಾಣ ಮತಕ್ಷೇತ್ರ ಶಾಸಕ ವಿಠ್ಠಲ ಕಟಕಧೋಂಡ ಮತ್ತು ತಹಶೀಲ್ದಾರ್ ಸಂಜಯ ಇಂಗಳೆ ಗುರವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬೆಳೆ ಹಾನಿಗೊಳಗಾದ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.
ಗ್ರಾಮದಲ್ಲಿನ ರಸ್ತೆ ಸಂಪರ್ಕ ಕಲ್ಪಿಸುವ ಬ್ಯಾರೇಜ್, ಹಳ್ಳ ಕೊಳ್ಳ ಬಹುತೇಕ ತುಂಬಿ ಹರಿಯುತ್ತಿದ್ದು, ರಸ್ತೆ ದಾಟಲು ಸಾರ್ವಜನಿಕರು ಜಾಗೃತ ವಹಿಸಬೇಕು ಎಂದು ತಹಶೀಲ್ದಾರ್ ಸಂಜಯ ಇಂಗಳೆ ತಿಳಿಸಿದರು.
ಶಾಸಕ ವಿಠ್ಠಲ ಕಟಕಧೋಂಡ ಈ ವೇಳೆ ಮಾತನಾಡಿ, ಮಳೆಯಿಂದ ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದು, ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕೆಂದು ಮನವಿ ಮಾಡುತ್ತೇನೆ ಎಂದು ಹೇಳಿದರು.
ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಸಂಜಯ ಖಡಗೇಕರ, ಮುಖಂಡ ರವಿ ಚಾಧವ, ಚಡಚಣ ಹೆಸ್ಕಾಂ ಎಇಇ ವಿಜಯಕುಮಾರ ಹವಾಲ್ದಾರ, ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ದಯಾನಂದ ಮಠ, ಎಸ್.ಎಂ.ಪಾಟೀಲ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.