ADVERTISEMENT

ಬಡ ವಿದ್ಯಾರ್ಥಿಗಳಿಗೆ ಉಚಿತ ಜನನ ಪ್ರಮಾಣಪತ್ರ

ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಜನನ ಪ್ರಮಾಣಪತ್ರಕ್ಕೆ ಕಾನೂನು ನೆರವು

ಬಸವರಾಜ ಎಸ್.ಉಳ್ಳಾಗಡ್ಡಿ
Published 9 ಸೆಪ್ಟೆಂಬರ್ 2025, 6:24 IST
Last Updated 9 ಸೆಪ್ಟೆಂಬರ್ 2025, 6:24 IST
   

ಬಸವನಬಾಗೇವಾಡಿ: ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಜನನ ಪ್ರಮಾಣಪತ್ರ ವಂಚಿತ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ತಾಲ್ಲೂಕು ಕಾನೂನು ಸೇವಾ ಸಮಿತಿಯೂ ತಾಲ್ಲೂಕು ಆಡಳಿತದ ಸಹಯೋಗದಲ್ಲಿ ಉಚಿತ ಹಾಗೂ ತ್ವರಿತವಾಗಿ ಜನನ ಪ್ರಮಾಣಪತ್ರ ಒದಗಿಸುವ  ಕಾರ್ಯಕ್ಕೆ ಮುಂದಾಗಿದೆ.

ಜನನ ಪ್ರಮಾಣಪತ್ರ ಎಲ್ಲಾ ಸರ್ಕಾರಿ ದಾಖಲೆಗಳಿಗೂ ಮೂಲ ದಾಖಲೆ. ಹಳ್ಳಿಗಳಲ್ಲೇ ತಾಯಂದಿರ ಹೆರಿಗೆಗಳಾದಾಗ, ಜನನ ಪ್ರಮಾಣಪತ್ರಕ್ಕಾಗಿ ಅರಿವಿನ ಕೊರತೆ, ಅಲೆದಾಟ, ಖರ್ಚು ಹೀಗೆ ನಾನಾ ಕಾರಣಗಳಿಂದ ಮಕ್ಕಳು ಜನನ ಪ್ರಮಾಣಪತ್ರ ಪಡೆಯಲಾಗದೇ ವಂಚಿತರಾಗಿರುತ್ತಾರೆ. ಅಂತಹ ಮಕ್ಕಳು ಗ್ರಾಮದ ಸರ್ಕಾರಿ ಶಾಲೆಗಳಿಗೆ ಸೇರಿಸುವ ವೇಳೆ ಪಾಲಕರ ಹೇಳಿಕೆಯನ್ನಾಧರಿಸಿ ಮಕ್ಕಳ ಜನ್ಮದಿನ ದಾಖಲಿಸಲಾಗುತ್ತದೆ. ಬಡ ಪಾಲಕರು ತಮ್ಮ ಮಕ್ಕಳ ಜನನ ಪ್ರಮಾಣ ಪತ್ರ ದಾಖಲೆ ಪಡೆಯಲು ವಕೀಲರ ಮೂಲಕ ಅರ್ಜಿ ಸಲ್ಲಿಸಿ ಹತ್ತಾರು ಬಾರಿ ಕಚೇರಿಗಳಿಗೆ ಅಲೆದಾಡಿ, ಕನಿಷ್ಠ ನಾಲ್ಕೈದು ಸಾವಿರ ಹಣ ಖರ್ಚು ಮಾಡಬೇಕಾಗುತ್ತದೆ.

ಜನನ ಪ್ರಮಾಣಪತ್ರ ವಂಚಿತ ತಾಲ್ಲೂಕಿನ ಸರ್ಕಾರಿ ಶಾಲೆಗಳ ಸಾವಿರಾರು ವಿದ್ಯಾರ್ಥಿಗಳ‌ ಶೈಕ್ಷಣಿಕ ಹಾಗೂ ಭವಿಷ್ಯದ ಹಿತದೃಷ್ಠಿಯಿಂದ ಪಾಲಕರಿಗೆ ಅಲೆದಾಟ ತಪ್ಪಿಸಿ ಹಣ, ಸಮಯ ವ್ಯರ್ಥವಾಗದಂತೆ ಅಂತಹ ವಿದ್ಯಾರ್ಥಿಗಳಿಗೆ ಕಾನೂನಿನಡಿ ಉಚಿತ ಮತ್ತು ತ್ವರಿತವಾಗಿ ಜನನ ಪ್ರಮಾಣಪತ್ರ ಒದಗಿಸಲು ಬಸವನಬಾಗೇವಾಡಿ ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಶಶಿಧರ ಎಂ.ಗೌಡ ಅವರು ವಿಶೇಷ ಆಸಕ್ತಿಯೊಂದಿಗೆ ಮುಂದಾಗಿದ್ದಾರೆ.

ADVERTISEMENT

ಈ ನಿಟ್ಟಿನಲ್ಲಿ ಅವರು ತಹಶೀಲ್ದಾರ್‌ ವೈ.ಎಸ್.ಸೋಮನಕಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ‌ ರಾಠೋಡ ಸೇರಿದಂತೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳೊಂದಿಗೆ ಚರ್ಚಿಸಿ, ಸೂಕ್ತ ನಿರ್ದೇಶನ ನೀಡಿದ್ದಾರೆ.

‘ನ್ಯಾಯಾಧೀಶರ ನಿರ್ದೇಶನದಂತೆ, ಬಿಇಒ ಅವರು ಎಲ್ಲಾ ಸರ್ಕಾರಿ ಶಾಲೆಗಳ ಮುಖ್ಯಗುರುಗಳಿಂದ ವರದಿಗಳನ್ನು ತರಿಸಿಕೊಂಡು ಈಗಾಗಲೇ ಜನನ ಪ್ರಮಾಣಪತ್ರ ವಂಚಿತ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳ ಜಾತಿ ಹಾಗೂ ಜನ್ಮದಿನಾಂಕ ಮಾಹಿತಿ ನೀಡಿದ್ದಾರೆ. ಇದಕ್ಕೆ ತಹಶೀಲ್ದಾರರು ಹಾಗೂ ಪುರಸಭೆ ಮುಖ್ಯಾಧಿಕಾರಿಗಳು ನೀಡುವ ಅಲಭ್ಯತೆ (ನಾನ್ ಅವಲೆಬಿಲಿಟಿ) ಪ್ರಮಾಣಪತ್ರಗಳನ್ನು ಪಡೆದುಕೊಂಡು ಕೋರ್ಟ್ ಗೆ ಉಚಿತವಾಗಿ ಪಿಟಿಷನ್ ಸಲ್ಲಿಸುತ್ತೇವೆ' ಎಂದು ಕಾನೂನು ಸೇವಾ ಸಮಿತಿಯಿಂದ ಈ ಕಾರ್ಯಕ್ಕೆ ನೇಮಗೊಂಡ ಪ್ಯಾನೆಲ್ ವಕೀಲರಾದ ಭಾರತಿ ಪತ್ತಾರ ‘ಪ್ರಜಾವಾಣಿ’ ಗೆ ತಿಳಿಸಿದರು.

‘ಸೆ.13 ರ ಲೋಕ ಅದಾಲತ್ ನಲ್ಲಿ ಪ್ರಕರಣ ಇತ್ಯರ್ಥಗೊಂಡು ಕೋರ್ಟ್ ಡಿಕ್ರಿ (ಅಂತಿಮ ತೀರ್ಪು) ಆದ ಬಳಿಕ ಜನನ ಪ್ರಮಾಣಪತ್ರ ವಂಚಿತ ಸರ್ಕಾರಿ ಶಾಲೆಗಳ ಬಡ ವಿದ್ಯಾರ್ಥಿಗಳಿಗೆ ಸುಲಭವಾಗಿ ಜನನ ಪ್ರಮಾಣಪತ್ರ ಸಿಗಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.