ADVERTISEMENT

ವಿಜಯಪುರ | ಆಲಮಟ್ಟಿಯಿಂದ ನೀರು: ಜಿಲ್ಲೆಯ 99 ಕೆರೆಗಳ ಭರ್ತಿಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2024, 16:23 IST
Last Updated 18 ಫೆಬ್ರುವರಿ 2024, 16:23 IST
<div class="paragraphs"><p> ಆಲಮಟ್ಟಿ </p></div>

ಆಲಮಟ್ಟಿ

   

ಆಲಮಟ್ಟಿ: ಆಲಮಟ್ಟಿ ಜಲಾಶಯ ಹಿನ್ನೀರಿನಿಂದ ಮುಳವಾಡ ಏತ ನೀರಾವರಿ ಯೋಜನೆಯಿಂದ 72 ಹಾಗೂ ಚಿಮ್ಮಲಗಿ ಪೂರ್ವ ಮತ್ತು ಪಶ್ಚಿಮ ಕಾಲುವೆ ವ್ಯಾಪ್ತಿಯ 27 ಸೇರಿ ಜಿಲ್ಲೆಯ 99 ಕೆರೆಗಳ ಭರ್ತಿಗೆ  ಸೋಮವಾರಿಂದ ನೀರು ಹರಿಸಲಾಗುವುದು.

ಅದಕ್ಕಾಗಿ ಕೃಷ್ಣಾ ಭಾಗ್ಯ ಜಲ ನಿಗಮ ಸನ್ನದ್ಧವಾಗಿದ್ದು, ಹಲವು ಬಾರಿ ಪೂರ್ವಭಾವಿ ಸಭೆ ನಡೆಸಿ ನೀರು ಯಾವ ರೀತಿ ಹರಿಸುವುದರ ಬಗ್ಗೆ ಸಿದ್ಧತೆ ಮಾಡಿಕೊಂಡಿದೆ.

ADVERTISEMENT

1.8  ಟಿಎಂಸಿ ಅಡಿ ನೀರು:

ಫೆ.19 ರಿಂದ ಮಾರ್ಚ್‌ 10 ರವರೆಗೆ ನಾನಾ ಹಂತಗಳಲ್ಲಿ ನೀರು ಹರಿಯಲಿದೆ. ಬೇಸಿಗೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕೆ ಸಂಗ್ರಹಿಸಿಡಲಾದ 5.5 ಟಿಎಂಸಿ ಅಡಿ ನೀರಿನ ಪೈಕಿ ಸದ್ಯ 1.8  ಟಿಎಂಸಿ ಅಡಿ ನೀರು ಬಳಕೆಗೆ ಬೆಳಗಾವಿ ಪ್ರಾದೇಶಿಕ ಆಯುಕ್ತರು ಅನುಮತಿ ನೀಡಿದ್ದಾರೆ. ಆ ಪ್ರಕಾರ ನೀರು ಬಿಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಮೊದಲು ಕಾಲುವೆಯ ಕೊನೆ ಹಂತದ ಕೆರೆಗಳ ಭರ್ತಿ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. ಆದರೆ ಯಾವುದೇ ಕಾರಣಕ್ಕೂ ಕೃಷಿ ಬಳಕೆಗೆ ಈ ನೀರು ಬಳಸುವಂತಿಲ್ಲ ಎಂದು ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್‌ ಎಚ್.ಎನ್‌. ಶ್ರೀನಿವಾಸ ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭೆ:

ಕಾಲುವೆಯ ನೀರು ಅನ್ಯ ಉದ್ದೇಶಕ್ಕೆ ಬಳಸಬಾರದು, ಕೆರೆಗಳ ಭರ್ತಿಗೆ ಕ್ರಮ ಕೈಗೊಳ್ಳಲು ವಿಜಯಪುರ ಜಿಲ್ಲಾಧಿಕಾರಿಗಳು ಫೆ.19 ರಂದು ಬೆಳಿಗ್ಗೆ ವಿವಿಧ ಇಲಾಖೆಯ ಅಧಿಕಾರಿಗಳ ವಿಡಿಯೋ ಕಾನ್ಫರೆನ್ಸ್‌ ಸಭೆ ಕರೆದಿದ್ದು, ಕಟ್ಟುನಿಟ್ಟಿನ ವಾಚ್‌ ಮತ್ತು ವಾರ್ಡ್‌ ಕೈಗೊಳ್ಳುವ ಕುರಿತು ನಾನಾ ನಿರ್ದೇಶನ ನೀಡಲಿದ್ದಾರೆ. ನೀರು ಸರಾಗವಾಗಿ ಹೋಗಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚರ್ಚಿಸಲಿದ್ದಾರೆ.

ಆಲಮಟ್ಟಿಯಲ್ಲಿ ಸಂಗ್ರಹಿತ ನೀರು ಇನ್ನೂ ಜೂನ್‌ರವರೆಗೂ ಕುಡಿಯುವ ನೀರಿನ ಉದ್ದೇಶಕ್ಕೆ, ಉಷ್ಣ ವಿದ್ಯುತ್‌ ಸ್ಥಾವರಗಳಿಗೆ ಸಂಗ್ರಹಿಸಡಬೇಕಿದೆ. ಹೀಗಾಗಿ ನೀರಿನ ಪೋಲಾಗದಂತೆ ಜಿಲ್ಲಾಧಿಕಾರಿಗಳು ಜಲಾಶಯದ ನೀರಿನ ಸಂಗ್ರಹದ ಮೇಲೆ ನಿಗಾ ಇಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.