ADVERTISEMENT

ಗಾಂಧಿ, ಶಾಸ್ತ್ರಿ ಜೀವನ ಸಂದೇಶ ಪ್ರೇರಣದಾಯಕ: ಜಿಲ್ಲಾಧಿಕಾರಿ ಡಾ. ಆನಂದ್‌

ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 5:28 IST
Last Updated 3 ಅಕ್ಟೋಬರ್ 2025, 5:28 IST
ವಿಜಯಪುರ ನಗರದ ಗಾಂಧಿ ಭವನದಲ್ಲಿ ಗುರುವಾರ ಆಯೋಜಿಸಲಾಗಿದ್ದ  ಗಾಂಧೀಜಿ ಹಾಗೂ  ಶಾಸ್ತ್ರೀಜಿ  ಜಯಂತಿಯಲ್ಲಿ  ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು
ವಿಜಯಪುರ ನಗರದ ಗಾಂಧಿ ಭವನದಲ್ಲಿ ಗುರುವಾರ ಆಯೋಜಿಸಲಾಗಿದ್ದ  ಗಾಂಧೀಜಿ ಹಾಗೂ  ಶಾಸ್ತ್ರೀಜಿ  ಜಯಂತಿಯಲ್ಲಿ  ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು   

ವಿಜಯಪುರ: ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ತಮ್ಮ ಜೀವನದ ತತ್ವ, ಸಂದೇಶದ ಮೂಲಕ ದೇಶಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಆನಂದ್‌ ಕೆ. ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಗುರುವಾರ ನಗರದ ಜಿಲ್ಲಾ ಪಂಚಾಯತ್ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಆಯೋಜಿಸಲಾಗಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜಯಂತಿ ಕಾರ್ಯಕ್ರಮದಲ್ಲಿ ಚರಕ ನೇಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗಾಂಧೀಜಿಯವರ ಸತ್ಯ, ಅಹಿಂಸೆ ಮೂಲಕ ಕೈಗೊಂಡ ಸತ್ಯಾಗ್ರಹವು ಬಲಿಷ್ಠ ಬ್ರಿಟೀಷರನ್ನು ತಲೆಬಾಗಿಸಿತು. ಸತ್ಯಾಗ್ರಹ, ಅಸಹಕಾರ ಚಳವಳಿ,  ಖಾದಿ ಬಟ್ಟೆ, ದೇಶೀಯ ವಸ್ತುಗಳ ಮಹತ್ವವನ್ನು ಅವರು ಸಾರಿದರು ಎಂದು ಹೇಳಿದರು.

ADVERTISEMENT

ಲಾಲ್ ಬಹದ್ದೂರ್‌ ಶಾಸ್ತ್ರೀಜಿಯವರು ನೀಡಿದ ಜೈ ಜೈವಾನ್ ಜೈ ಕಿಸಾನ್ ಘೋಷವಾಕ್ಯ ರೈತ ಹಾಗೂ ಸೈನಿಕರ ಬಗೆಗಿನ ಅಪಾರ ಕಾಳಜಿಗೆ ದ್ಯೋತಕವಾಗಿದೆ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಮಾತನಾಡಿ, ಗಾಂಧೀಜಿಯವರನ್ನು ಇಡೀ ಜಗತ್ತು ಗೌರವಿಸುತ್ತದೆ. ಸತ್ಯವೇ ದೇವರು ಎಂಬುದನ್ನು ತಿಳಿಸಿದರು. ವಿಶ್ವಸಂಸ್ಥೆಯು ಮಹಾತ್ಮ ಗಾಂಧೀಜಿಯವರ ಜನ್ಮದಿನಾಚರಣೆಯನ್ನು ಅಹಿಂಸಾ ದಿನಾಚರಣೆಯನ್ನಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಚರಿಸುತ್ತಿರುವುದು ವಿಶ್ವ ಅವರನ್ನು ಗೌರವಿಸುವ ಪರಿಯಾಗಿದೆ ಎಂದು ಹೇಳಿದರು.

ಗಾಂಧೀಜಿ ಕುರಿತು ಸಂಗಮೇಶ ಮೇತ್ರಿ, ಲಾಲ್ ಬಹಾದ್ದೂರ ಶಾಸ್ತ್ರಿ ಕುರಿತು ಕವಿತಾ ಕಲ್ಯಾಣಪ್ಪಗೋಳ ಉಪನ್ಯಾಸ ನೀಡಿದರು.

ರಾಷ್ಟ್ರ ನಾಯಕರ ವೇಷ ತೊಟ್ಟ ಚಿಕ್ಕ ಮಕ್ಕಳು ಪ್ರೇಕ್ಷಕರ ಕಣ್ಮನ ಸೆಳೆದರು. ರಘುಪತಿ ರಾಘವ ರಾಜ ರಾಮ್ ಹಾಗೂ ವೈಷ್ಣವ ಜನತೋ ಎಂಬ ಗಾಂಧೀಜಿಯವರ ಪ್ರಿಯ ಭಜನೆಗಳನ್ನು ವಿರೇಶ ವಾಲಿ  ತಂಡದವರು ಸುಶ್ರಾವ್ಯವಾಗಿ ಹಾಡಿದರು. ಸರ್ವಧರ್ಮ ಪ್ರಾರ್ಥನೆ ನಡೆಯಿತು. 

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ರಾಜಶೇಖರ್ ಡಂಬಳ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ  ಬದ್ರುದ್ದಿನ್ ಸೌದಾಗರ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ ಹೊಸಮನಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸಿ.ಬಿ ಕುಂಬಾರ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ, ವಿಜಯಪುರ ತಹಶೀಲ್ದಾರ್‌ ಪ್ರಶಾಂತ ಚನಗೊಂಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಅಡಿವೆಪ್ಪ ಸಾಲಗಲ್, ವಿದ್ಯಾವತಿ ಅಂಕಲಗಿ, ಪೀಟರ್ ಅಲೆಕ್ಸಾಂಡರ್, ಸುರೇಶ ಘೋಣಸಗಿ, ಬಾಬುಗೌಡ ಪಾಟೀಲ್, ನಿಲೇಶ ಬೇನಾಳ, ನಾಗರಾಜ ಲಂಬೂ, ಭೀಮರಾಯ ಜಿಗಜಿಣಗಿ ಉಪಸ್ಥಿತರಿದ್ದರು.

ಗಾಂಧೀಜಿ, ಶಾಸ್ತ್ರೀಜಿ ಕುರಿತು ಉಪನ್ಯಾಸ  | ಪ್ರೇಕ್ಷಕರ ಕಣ್ಮನ ಸೆಳೆದ ಚಿಣ್ಣರು ಸರ್ವಧರ್ಮ ಪ್ರಾರ್ಥನೆ
ಮಹಾತ್ಮ ಗಾಂಧೀಜಿಯವರ ಸತ್ಯ ಪ್ರಾಮಾಣಿಕತೆ ಸ್ವಾವಲಂಬನೆ ಸಂಘರ್ಷ ನಿವಾರಣೆ ಕರುಣೆ ದಯೆಯಂತಹ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ
ಡಾ. ಆನಂದ್‌ ಕೆ. ಜಿಲ್ಲಾಧಿಕಾರಿ 

ಪ್ರಬಂಧ ಸ್ಪರ್ಧೆ: ಬಹುಮಾನ ವಿತರಣೆ 

ಗಾಂಧೀಜಿ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಪ್ರೌಢಶಾಲೆ ಪದವಿಪೂರ್ವ ಹಾಗೂ ಪದವಿ-ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಒಟ್ಟು 579 ಶಾಲೆಗಳಿಂದ 8198 ವಿದ್ಯಾರ್ಥಿಗಳು ಭಾಗವಹಿಸಿದ್ದರು.  ಪ್ರೌಢಶಾಲಾ ವಿಭಾಗದಲ್ಲಿ ವಿಜಯಪುರ ಜಲನಗರ ಸರ್ಕಾರಿ ಪ್ರೌಢಶಾಲೆ 10ನೇ ತರಗತಿ ವಿದ್ಯಾರ್ಥಿನಿ ಅನ್ನಪೂರ್ಣ ಬ.ಪೂಜಾರಿ ಪ್ರಥಮ ಇಂಡಿ ತಾಲ್ಲೂಕಿನ ನಾದ ಕೆ.ಡಿ.ಯ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಸೃಷ್ಟಿ ಹಳೇಮನಿ ದ್ವೀತಿಯ ಸ್ಥಾನ ಹಾಗೂ ಸಿಂದಗಿ ತಾಲ್ಲೂಕಿನ ಕೆರೂಟರಗಿ ಆರ್.ಎಂ.ಎಸ್.ಎ. ಪ್ರೌಢಶಾಲೆ ವಿದ್ಯಾರ್ಥಿನಿ ಶ್ರೇಯಾ ಮ.ಪಾಟೀಲ ತೃತೀಯ ಸ್ಥಾನ ಪಡೆದರು. ಪದವಿಪೂರ್ವ ವಿಭಾಗದಲ್ಲಿ ಕೊಲ್ಹಾರ ತಾಲ್ಲೂಕಿನ ಕೂಡಗಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಗೌರಿ ಮ.ತೆಲಗಿ ಪ್ರಥಮ ವಿಜಯಪುರ ನಗರದ ಬಾಲಕಿಯರ ಸರ್ಕಾರಿ ಪೂರ್ವ ಕಾಲೇಜಿನ ಲಕ್ಷ್ಮೀ ಎಂ.ಮಾಳೆ ದ್ವೀತಿಯ ಹಾಗೂ ವಿಜಯಪುರ ಸಿಕ್ಯಾಬ ಮಹಿಳಾ ಪದವಿಪೂರ್ವ ಕಾಲೇಜಿನ ಚೇತನಾ ಬಿ.ಬಗಲಿ ಮತ್ತು ಬಬಲೇಶ್ವರ ತಾಲ್ಲೂಕಿನ ಅರ್ಜುಣಗಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಮೇಘಾ ಕೊಟ್ಯಾಳ ತೃತೀಯ ಸ್ಥಾನ ಪಡೆದರು. ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗದಲ್ಲಿ ವಿಜಯಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಐಶ್ವರ್ಯ ರಜಪೂತ ಪ್ರಥಮ ಝಳಕಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸೌಮ್ಯ ಎಸ್.ಬಿರಾದಾರ ದ್ವೀತಿಯ ಹಾಗೂ ದೇವರಹಿಪ್ಪರಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಧಿಕಾ ಧರ್ಮಸೆಟ್ಟಿ ತೃತೀಯ ಸ್ಥಾನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.