ADVERTISEMENT

‘ಮಹಾಬಲೇಶ್ವರದಲ್ಲಿ ಗಂಗಾಪೂಜೆ’

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 14:14 IST
Last Updated 12 ಜುಲೈ 2019, 14:14 IST

ಕೊಲ್ಹಾರ: ‘ಸಂಪ್ರದಾಯದಂತೆ ಈ ವರ್ಷವೂ ಸಹ ಜುಲೈ 16ರಂದು ಗುರು ಪೂರ್ಣಿಮೆ ಅಂಗವಾಗಿ ಕೃಷ್ಣಾ ನದಿಯ ಉಗಮಸ್ಥಾನ ಮಹಾಬಲೇಶ್ವರದಲ್ಲಿ ಕೃಷ್ಣಾ ತೀರದ ರೈತರೊಂದಿಗೆ ತೆರಳಿ ಗಂಗಾಪೂಜೆಯನ್ನು ನೆರವೇರಿಸಲಾವುದು’ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.

ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೋದ ವರ್ಷ ಮಹಾರಾಷ್ಟ್ರ ರಾಜ್ಯದಲ್ಲಿ ಇದೇ ಸಮಯದಲ್ಲಿ ನಡೆದ ಮರಾಠಿ ಮೀಸಲಾತಿ ಹೋರಾಟದ ಕಾರಣ ಮಹಾಬಲೇಶ್ವರಕ್ಕೆ ಹೋಗಲು ಆಗಲಿಲ್ಲ. ಹಾಗಾಗಿ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಚಿಕ್ಕಸಂಗಮದಲ್ಲಿ ಗಂಗಾಪೂಜೆಯನ್ನು ನೆರವೇರಿಸಲಾಗಿತ್ತು. ಪ್ರತಿ ವರ್ಷ ಕೃಷ್ಣಾ ನದಿ ಉಗಮಸ್ಥಾನದಲ್ಲಿ ನೆರವೇರಿಸುವ ಗಂಗಾಪೂಜೆ ಜತೆ ಚಿಕ್ಕಸಂಗಮದಲ್ಲಿಯೂ ಕೂಡ ಪೂಜಾ ಕೈಂಕರ್ಯವನ್ನು ಮುಂದುವರೆಸಿಕೊಂಡು ಹೋಗಲಾಗುವುದು’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಜಿಲ್ಲಾಡಳಿತ ಮೂಲಕ ಜಲಸಂಪನ್ಮೂಲ ಇಲಾಖೆಯಿಂದ ಸರ್ಕಾರದ ಕಾರ್ಯಕ್ರಮವಾಗಿ ಗಂಗಾಪೂಜೆಯನ್ನು ಮೂರು ವರ್ಷ ನೆರವೇರಿಸಲಾಗಿತ್ತು. ರಾಜಕೀಯ ಅಸ್ಥಿರತೆ ಮಧ್ಯೆ ಮುಂಬರುವ ದಿನಗಳಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂದು ಸಂಕಲ್ಪ ಮಾಡಲಾಗುವುದು’ ಎಂದರು.

ADVERTISEMENT

‘ಜಿಲ್ಲೆಯ ರೈತರು, ನಾಗರಿಕರು, ಮಹಿಳೆಯರು ಹಾಗೂ ಗಣ್ಯರು ಜುಲೈ 15 ರಂದು ಬೆಳಿಗ್ಗೆ ಸಾತಾರ್‌ ನಗರಕ್ಕೆ ಬರಬೇಕು. ಅಲ್ಲಿ ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ. ಜುಲೈ 16 ರಂದು ಮಹಾಬಲೇಶ್ವರದಲ್ಲಿ ನಡೆಯುವ ಪೂಜೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.