ADVERTISEMENT

ದೇವರಹಿಪ್ಪರಗಿ | ಕಸ ವಿಲೇವಾರಿಗೆ ಸಾರ್ವಜನಿಕರ ಸಹಕಾರ ಅಗತ್ಯ: ಎಸ್.ಎಸ್. ಬಾಗಲಕೋಟ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 6:57 IST
Last Updated 3 ಆಗಸ್ಟ್ 2025, 6:57 IST
ದೇವರಹಿಪ್ಪರಗಿ ಪಟ್ಟಣ ಪಂಚಾಯಿತಿಯಲ್ಲಿ ನೂತನವಾಗಿ ಆರಂಭಗೊಂಡ ಕಸ ಕಂಡರೆ ಕ್ಯೂಆರ್ ಕೋಡ್‌ಗೆ ಫೋಟೋ ಕಳಿಸಿ ಅಭಿಯಾನದ ಜಾಗೃತಿ ಜಾಥಾದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರು, ಸಿಬ್ಬಂದಿ, ಪೌರ ಕಾರ್ಮಿಕರು ಭಾಗವಹಿಸಿದ್ದರು
ದೇವರಹಿಪ್ಪರಗಿ ಪಟ್ಟಣ ಪಂಚಾಯಿತಿಯಲ್ಲಿ ನೂತನವಾಗಿ ಆರಂಭಗೊಂಡ ಕಸ ಕಂಡರೆ ಕ್ಯೂಆರ್ ಕೋಡ್‌ಗೆ ಫೋಟೋ ಕಳಿಸಿ ಅಭಿಯಾನದ ಜಾಗೃತಿ ಜಾಥಾದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರು, ಸಿಬ್ಬಂದಿ, ಪೌರ ಕಾರ್ಮಿಕರು ಭಾಗವಹಿಸಿದ್ದರು   

ದೇವರಹಿಪ್ಪರಗಿ: ‘ಕಸ ಕಂಡರೆ ಕ್ಯೂಆರ್ ಕೋಡ್‌ಗೆ ಫೋಟೋ ಕಳಿಸಿ' ನೂತನ ಅಭಿಯಾನಕ್ಕೆ ಎಲ್ಲರೂ ಸ್ಪಂದಿಸಿ ಪಟ್ಟಣದ ಸ್ವಚ್ಛತೆಗೆ ಸಂಪೂರ್ಣ ಸಹಕಾರ ನೀಡಬೇಕು’ ಎಂದು ಮುಖ್ಯಾಧಿಕಾರಿ ಎಸ್.ಎಸ್. ಬಾಗಲಕೋಟ ಹೇಳಿದರು.

ಪಟ್ಟಣದ ಪಂಚಾಯಿತಿ ಆವರಣದಲ್ಲಿ ಶನಿವಾರ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಸ್ವಚ್ಛತೆಗಾಗಿ ಪೌರ ಕಾರ್ಮಿಕರು ಶ್ರಮಿಸುತ್ತಿದ್ದಾರೆ. ಆದಾಗ್ಯೂ ಕಸ ವಿಲೇವಾರಿ ಕುರಿತು ಆಗಾಗ ದೂರುಗಳು ಬರುವ ಹಿನ್ನೆಲೆ ಜಿಲ್ಲಾಧಿಕಾರಿಗಳ ಆದೇಶದಂತೆ ಈ ವಿನೂತನ ಅಭಿಯಾನ ಆರಂಭಿಸಲಾಗಿದೆ’ ಎಂದು ತಿಳಿಸಿದರು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ ಮಾತನಾಡಿ, ‘ಪಟ್ಟಣದಲ್ಲಿ ಕಸ ವಿಲೇವಾರಿ ಸರಿಯಾಗಿ ಕಾರ್ಯಗತಗೊಳಿಸಿ ಸ್ವಚ್ಛ ಪರಿಸರ ನಿರ್ಮಿಸಬೇಕಾಗಿದೆ. ಕಸ ವಿಲೇವಾರಿ ವಾಹನ ಮನೆ ಬಾಗಿಲಿಗೆ ಬಂದಾಗ ಕಸವನ್ನು ಪೌರ ಕಾರ್ಮಿಕರ ಸಹಾಯದೊಂದಿಗೆ ವಿಲೇವಾರಿ ವಾಹನಕ್ಕೆ ರವಾನಿಸಲು ಸಾರ್ವಜನಿಕರು ಮುಂದಾಗಬೇಕು. ಇದರಿಂದ ನಿಮ್ಮ ಸುತ್ತಲಿನ ವಾತಾವರಣವೂ ಶುದ್ಧವಾಗಿರುತ್ತದೆ. ಯಾವುದೇ ಕಾರಣಕ್ಕೂ ಕಸವನ್ನು ರಸ್ತೆ ಬದಿ ಎಸೆಯುವುದು ಬೇಡ’ ಎಂದರು.

ADVERTISEMENT

ಅಭಿಯಾನ ಅಂಗವಾಗಿ ಪಟ್ಟಣ ಪಂಚಾಯಿತಿಯಿಂದ ಅಂಬೇಡ್ಕರ್ ವೃತ್ತದವರೆಗೆ ಜಾಗೃತಿ ಜಾಥಾ ನಡೆಸಲಾಯಿತು. ಪಟ್ಟಣ ಪಂಚಾಯಿತಿ ಸದಸ್ಯರಾದ ಕಾಸುಗೌಡ ಬಿರಾದಾರ(ಜಲಕತ್ತಿ), ಶಾಂತಯ್ಯ ಜಡಿಮಠ, ನಾಮನಿರ್ದೇಶಿತ ಸದಸ್ಯರಾದ ಹುಸೇನ್ ಕೊಕಟನೂರ, ಸುನೀಲ ಕನಮಡಿ, ಸಿಬ್ಬಂದಿ ಬಂದಗೀಸಾಬ್ ಮಂಡೆ, ಮುತ್ತುರಾಜ್ ಹಿರೇಮಠ, ಪ್ರವೀಣ ಹಿರೇಮಠ, ಪೌರ ಕಾರ್ಮಿಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.