ADVERTISEMENT

ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಿ: ಶಾಸಕ ಯಶವಂತರಾಯಗೌಡ ಪಾಟೀಲ

ಶಾಸಕ ಯಶವಂತರಾಯಗೌಡ ಪಾಟೀಲ ನೈತಿಕ ಬೆಂಬಲ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2023, 14:32 IST
Last Updated 25 ಫೆಬ್ರುವರಿ 2023, 14:32 IST
ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ನಡೆದ ಲಿಂಗಾಯತ ಪಂಚಮಸಾಲಿ ಸಮುದಾಯದ ಹೋರಾಟದಲ್ಲಿ ಶನಿವಾರ ಶಾಸಕ ಯಶವಂತರಾಯಗೌಡ ಪಾಟೀಲ ಪಾಲ್ಗೊಂಡು ಬೆಂಬಲಿಸಿದರು
ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ನಡೆದ ಲಿಂಗಾಯತ ಪಂಚಮಸಾಲಿ ಸಮುದಾಯದ ಹೋರಾಟದಲ್ಲಿ ಶನಿವಾರ ಶಾಸಕ ಯಶವಂತರಾಯಗೌಡ ಪಾಟೀಲ ಪಾಲ್ಗೊಂಡು ಬೆಂಬಲಿಸಿದರು   

ಇಂಡಿ: ಲಿಂಗಾಯತ ಪಂಚಮಸಾಲಿ ಸಮುದಾಯ ಅಭಿವೃದ್ದಿಗೆ ಮುಂಬರುವ ಪಿಳಿಗೆಯ ಉದ್ಯೋಗ, ಆರ್ಥಿಕ ಶ್ರೇಯೋಭಿವೃದ್ದಿಗೆ ಸರ್ಕಾರ 2 ಎ ಮೀಸಲಾತಿ ಕೊಡಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಆಗ್ರಹಿಸಿದರು.

ಕೂಡಲಸಂಗಮದ ಬಸವಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಒಳಮೀಸಲಾತಿ ಹೋರಾಟದ ಸ್ಥಳಕ್ಕೆ ಭೇಟಿ ನೀಡಿ ನೈತಿಕ ಬೆಂಬಲ ಸೂಚಿಸಿ ಅವರು ಮಾತನಾಡಿದರು.

ಪಂಚಮಸಾಲಿ ಲಿಂಗಾಯತ ಸಮುದಾಯದಲ್ಲಿ ಬಡವರಿಗೆ ಅನುಕೂಲವಾಗಲಿ ಎಂದು ಪೂಜ್ಯರು ಸಾಕಷ್ಟು ಹೋರಾಟ ಮಾಡುತ್ತಿದ್ದು, ಅವರು ಮಾಡುತ್ತಿರುವ ಹೋರಾಟ ಸ್ತುತ್ಯಾರ್ಹವಾಗಿದೆ. ಪಾದಯಾತ್ರೆ ಹಾಗೂ ವಿನೂತನ ರೀತಿಯಿಂದ ಹೋರಾಟ ಮಾಡುತ್ತಿದ್ದಾರೆ. ಸರ್ಕಾರ ಈಗಾಗಲೇ ಸ್ಫಂದಿಸಬೇಕಾಗಿತ್ತು ಎಲ್ಲೋ ಎಡವಿದೆ ಎಂದು ಭಾವಿಸಿರುವೆ ಎಂದರು.

ADVERTISEMENT

ಲಿಂಗಾಯತ ಪಂಚಮಸಾಲಿ ಸಮಾಜ ರಾಜ್ಯಲ್ಲಿಯೇ ಅತ್ಯಂತ ದೊಡ್ಡ ಸಮುದಾಯ, ಸರ್ಕಾರ ಯಾವುದೇ ಇರಲಿ ಕಳಕಳಿಯಿಂದ ಸ್ಪಂದಸಬೇಕು. ಪಕ್ಷಗಳು ಬರುತ್ತವೆ, ಹೋಗುತ್ತವೆ, ಪಕ್ಷ ಮಹತ್ವವಲ್ಲ. ರಾಜ್ಯದ ಮುಖ್ಯಮಂತ್ರಿಗಳು, ಸಚಿವ ಸಂಪುಟ ಬಹುದಿನಗಳಿಂದ ನಡೆದ ಲಿಂಗಾಯತ ಪಂಚಮಸಾಲಿಗಳ ಹೋರಾಟಕ್ಕೆ ಸ್ಪಂದಿಸಿ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.

ಮೀಸಲಾತಿ ನೀಡುವ ವಿಷಯದಲ್ಲಿ ರಾಜಕೀಯ ಬೇಡ, ಪೂಜ್ಯರ ವಿಶೇಷ ಕಳಕಳಿ ನೋಡಿದರೆ ರೋಮಾಂಚನವಾಗುತ್ತದೆ, ನಾನು ಈ ಹಿಂದೇ ಬಹಳ ಹೋರಾಟಗಳನ್ನು ನೋಡಿದ್ದೇನೆ ಸ್ವಲ್ಪ ದಿನ ಹೋರಾಟ ಮಾಡಿ ಕೈಬಿಟ್ಟಿರುವುದು ನೋಡಿದ್ದೇನೆ, ಕಿಂಚ್ಚಿತ್ತು ಧೃತಿಗೇಡದೆ ಸಮುದಾಯದ ಏಳಿಗೆ ಮುಖ್ಯ ಎಂದು ಪೂಜ್ಯರು ಹೋರಾಟ ನಡೆಸಿ ಇತಿಹಾಸ ಸೃಷ್ಠಿ ಮಾಡಿದ್ದಾರೆ ಸರ್ಕಾರ ಗಮನಿಸಬೇಕು ಎಂದು ಆಗ್ರಹಿಸಿದರು.

ಸಮುದಾಯದ ಪೀಠಾಧಿಪತಿಗಳು ಹೋರಾಟ ಮಾಡುತ್ತಿದ್ದಾರೆ, ಪೂಜ್ಯರ ಸಹನೆ, ತಾಳ್ಮೆ ಪರೀಕ್ಷೆ ಮಾಡುವುದು ಬೇಡ, ಸರ್ಕಾರ, ಮುಖ್ಯಮಂತ್ರಿಗಳು ಸ್ಪಂದಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ಒಂದು ವೇಳೆ ಈ ಹೋರಾಟಕ್ಕೆ ಸರ್ಕಾರ ಸ್ಪಂದಿಸದಿದ್ದರೆ ನಿಜವಾಗಿ ಹೃದಯವಿಲ್ಲದ ಸರ್ಕಾರ ಎನ್ನಬೇಕಾಗುತ್ತದೆ. ಕೂಡಲೆ ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.

ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಮಹಾಸ್ವಾಮೀಜಿ ಹೋರಾಟ ಕುರಿತು ಆರ್ಶೀವಚನ ನೀಡಿದರು.

ಶ್ರೀಶಾಂತೇಶ್ವರ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರಭಾಕರ ಬಗಲಿ, ಶಾಂತುಗೌಡ ಬಿರಾದಾರ, ನೀಲಕಂಠಗೌಡ ಪಾಟೀಲ, ರವಿಗೌಡ ಪಾಟೀಲ, ಅಯ್ಯನಗೌಡ ಬಿರಾದಾರ, ರಾಜು ಕುಲಕರ್ಣಿ ಹೋರಾಟದಲ್ಲಿ ಪಾಲ್ಗೊಂಡಿದ್ದರು.

ನನ್ನ ರಾಜಕೀಯ ಬೆಳವಣಿಗೆಗೆ ಪಂಚಮಸಾಲಿ ಸಮುದಾಯದ ಕೊಡುಗೆ ಸಾಕಷ್ಟು ಇರುವುದನ್ನು ಸ್ಮರಿಸಬೇಕಾಗಿರುವುದು ನನ್ನ ಕರ್ತವ್ಯ

–ಯಶವಂತರಾಯಗೌಡ ಪಾಟೀಲ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.