ADVERTISEMENT

ವಿಜಯಪುರ | ಹದವಾಗಿ ಸುರಿದ ಮುಂಗಾರುಪೂರ್ವ ಮಳೆ: ಹೊಲದತ್ತ ಕೃಷಿಕರು

ರೈತರ ಮೊಗದಲ್ಲಿ ಸಂತಸ

ಬಸವರಾಜ ಸಂಪಳ್ಳಿ
Published 17 ಮೇ 2020, 8:14 IST
Last Updated 17 ಮೇ 2020, 8:14 IST
ವಿಜಯಪುರ ಸಮೀಪದ ಅರಕೇರಿ ಗ್ರಾಮದ ಹೊಲವೊಂದರಲ್ಲಿ ರೈತರು ಬೇಸಿಗೆ ಶೇಂಗಾ ಕೀಳುತ್ತಿರುವ ದೃಶ್ಯ ಶನಿವಾರ ಕಂಡುಬಂದಿತು –ಪ್ರಜಾವಾಣಿ ಚಿತ್ರ
ವಿಜಯಪುರ ಸಮೀಪದ ಅರಕೇರಿ ಗ್ರಾಮದ ಹೊಲವೊಂದರಲ್ಲಿ ರೈತರು ಬೇಸಿಗೆ ಶೇಂಗಾ ಕೀಳುತ್ತಿರುವ ದೃಶ್ಯ ಶನಿವಾರ ಕಂಡುಬಂದಿತು –ಪ್ರಜಾವಾಣಿ ಚಿತ್ರ   

ವಿಜಯಪುರ: ಕೊರೊನಾ ಸಂಕಷ್ಟದ ನಡುವೆಯೇ ಜಿಲ್ಲೆಯಾದ್ಯಂತ ಮುಂಗಾರು ಪೂರ್ವ ಹದಮಳೆಯಾಗುತ್ತಿರುವುದು ರೈತ ಸಮುದಾಯದಲ್ಲಿ ಖುಷಿ ತಂದಿದೆ.

ಒಂದು ವಾರದ ಈಚೆಗೆ ಉತ್ತಮ ಮಳೆಯಾಗುತ್ತಿರುವುದರಿಂದ ರೈತರು ಹೊಲದತ್ತ ಮುಖ ಮಾಡಿದ್ದು, ಸ್ವಚ್ಛ ಮಾಡತೊಡಗಿದ್ದಾರೆ.

ಜಿಲ್ಲೆಯ ಪ್ರಮುಖ ಮುಂಗಾರು ಬೆಳೆಗಳಾದ ತೊಗರಿ, ಮೆಕ್ಕೆಜೋಳ, ಸಜ್ಜೆ ಬಿತ್ತನೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳತೊಡಗಿದ್ದು, ನಿರೀಕ್ಷೆಯಂತೆ ಮಳೆಯಾದರೆ ಜೂನ್‌ ಮೊದಲ ವಾರದಿಂದ ಬಿತ್ತನೆ ಆರಂಭವಾಗಲಿದೆ.

ADVERTISEMENT

ಹದ ಮಳೆಯಾಗಿರುವುದರಿಂದ ಬೇಸಿಗೆ ಶೇಂಗಾ ಕೀಳಲು ರೈತರಿಗೆ ಅನುಕೂಲವಾಗಿದೆ. ಜೊತೆಗೆ ಬಿಸಿಲೂ ಇರುವುದರಿಂದ ಕಾಯಿಯನ್ನು ಒಣಗಿಸಲು ಅನುಕೂಲವಾಗಿದೆ.

4.80 ಲಕ್ಷ ಹೆಕ್ಟೆರ್‌ ಬಿತ್ತನೆ ಗುರಿ:ಜಿಲ್ಲೆಯಲ್ಲಿ ಈ ಬಾರಿ 4.80 ಲಕ್ಷ ಹೆಕ್ಟೆರ್‌ ಬಿತ್ತನೆ ಗುರಿ ಹೊಂದಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಸಕ್ತ ಸಾಲಿಗೆ ಜಿಲ್ಲೆಗೆ 15,600 ಕ್ವಿಂಟಲ್‌ ಬಿತ್ತನೆ ಬೀಜದ ಅಗತ್ಯವಿದ್ದು, ಸದ್ಯ 5 ಸಾವಿರ ಕ್ವಿಂಟಲ್‌ ತೊಗರಿ, 2 ಸಾವಿರ ಕ್ವಿಂಟಲ್‌ ಮೆಕ್ಕೆ ಜೋಳ, 1 ಸಾವಿರ ಕ್ವಿಂಟಲ್‌ ಸಜ್ಜೆ ಇದೆ ಎಂದು ಹೇಳಿದರು.

79 ಸಾವಿರ ಮೆಟ್ರಿಕ್‌ ಟನ್‌ ರಸಗೊಬ್ಬರದ ಅಗತ್ಯವಿದ್ದು, ಯೂರಿಯಾ, ಡಿಎಪಿ, ಎಂಒಪಿ, ಕಾಂಪ್ಲೆಕ್ಸ್‌ ಪೊಟ್ಯಾಶ್‌ ಸೇರಿದಂತೆ ಸದ್ಯ 17 ಸಾವಿರ ಮೆಟ್ರಿಕ್‌ ಟನ್‌ ಇದೆ ಎಂದರು.

ಜಿಲ್ಲೆಯಲ್ಲಿ ಇರುವ 20 ರೈತ ಸಂಪರ್ಕ ಕೇಂದ್ರಗಳ ಮೂಲಕ ಶೀಘ್ರದಲ್ಲೇ ರೈತರಗೆ ಬೀಜ, ಗೊಬ್ಬರವನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುವುದು ಎಂದು ತಿಳಿಸಿದರು.

11 ತಂಡ ರಚನೆ:ಜಿಲ್ಲೆಯಲ್ಲಿ ನಕಲಿ ಬೀಜ, ಗೊಬ್ಬರ ಮತ್ತು ಕೃಷಿ ಪರಿಕರಗಳ ಮಾರಾಟಗಾರರ ಪತ್ತೆಗೆ 11 ತಂಡಗಳನ್ನು ರಚಿಸಲಾಗಿದೆ. ಜಿಲ್ಲೆಯಾದ್ಯಂತ ಪರಿಶೀಲನೆ ಆರಂಭವಾಗಿದೆ. ನಕಲಿ ಕಂಡುಬಂದರೆ ತಕ್ಷಣ ಅಂತವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ರೈತರಿಗೆ ಸಲಹೆ:ಯಾವುದೇ ಅನಧಿಕೃತ ಮಾರಾಟಗಾರರ ಬಳಿ ಬೀಜ, ಗೊಬ್ಬರ, ಕೃಷಿ ಉಪಕರಣಗಳನ್ನು ಖರೀದಿಸಬಾರದು ಎಂದು ಜಂಟಿ ಕೃಷಿ ನಿರ್ದೇಶಕರು ರೈತರಲ್ಲಿ ಮನವಿ ಮಾಡಿದರು.

ಬೀಜ, ಗೊಬ್ಬರ, ಕೃಷಿ ಪರಿಕರಗಳನ್ನು ಖರೀದಿಸಿದರೆ ಕಡ್ಡಾಯವಾಗಿ ರಸೀದಿ ಪಡೆಯಬೇಕು ಮತ್ತು ಅದನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು. ಒಂದು ವೇಳೆ ಕಳಪೆಯಾಗಿದ್ದರೆ ಮಾರಾಟಗಾರರ ವಿರುದ್ಧ ಕ್ರಮಕೈಗೊಳ್ಳಲು ಮತ್ತು ಪರಿಹಾರ ಪಡೆಯಲು ನೆರವಾಗಲಿದೆ ಎಂದು ಹೇಳಿದರು.

ಕೋವಿಡ್: ರೈತರಗೆ ಸಲಹೆ
ರೈತರು ಹೊಲದಲ್ಲಿ ಕೆಲಸ ಮಾಡುವಾಗ ಕೋವಿಡ್ ಸಾಂಕ್ರಾಮಿಕ ರೋಗದ ಸೋಂಕಿನಿಂದ ರಕ್ಷಿಸಿಕೊಳ್ಳಲು ಹಾಗೂ ಅದರ ಹರಡುವಿಕೆಯನ್ನು ತಡೆಯಲು, ಒಬ್ಬರಿಂದ ಒಬ್ಬರಿಗೆ ಕನಿಷ್ಠ 4 ಅಡಿ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್‌ ಧರಿಸಬೇಕು ಹಾಗೂ ಮೇಲಿಂದ ಮೇಲೆ ಸೋಪಿನಿಂದ ಕೈ ತೊಳೆದುಕೊಳ್ಳಬೇಕು ಎಂದು ವಿಜಯಪುರ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ತಜ್ಞರು ಸಲಹೆ ನೀಡಿದ್ದಾರೆ.

ರೈತರು ತಮ್ಮ ಮೊಬೈಲ್‌ನಲ್ಲಿ ‘ಆರೋಗ್ಯ ಸೇತು’ ಆ್ಯಪ್‌ ಡೌನ್ ಮಾಡಿಕೊಳ್ಳಬೇಕು ಹಾಗೂ ಯಾವುದಾದರೂ ಜರೂರಿ ಕೆಲಸಕ್ಕೆ ಮನೆಯಿಂದ ಹೊರಗೆ ಹೋಗುವಾಗ ಆ ಮೊಬೈಲ್‌ ಅನ್ನು ಜೊತೆಗೆ ತೆಗೆದುಕೊಂಡು ಹೋಗಬೇಕು. ಇದರಿಂದ ತಾವು ಯಾವುದಾದರೂ ಕೋವಿಡ್ ಸೋಂಕಿತ ವ್ಯಕ್ತಿ ಅಥವಾ ಸೋಂಕಿತ ಪ್ರದೇಶದ ಸನಿಹದಲ್ಲಿ ಇರುವಿರೋ ಹೇಗೆ ಎಂಬುದನ್ನು ತಿಳಿಯಬಹುದು ಹಾಗೂ ಆ ಪ್ರದೇಶದಿಂದ ದೂರ ಉಳಿದು ಸೋಂಕಿನಿಂದ ರಕ್ಷಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.