ADVERTISEMENT

ಚಡಚಣ | ಸರ್ಕಾರಿ ಜಾಗ ಅತಿಕ್ರಮಣ: ತೆರವಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 6:55 IST
Last Updated 5 ಡಿಸೆಂಬರ್ 2025, 6:55 IST
‌ಚಡಚಣದ ಸರ್ಕಾರಿ ನಿವೇಶನವನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿರುವುದನ್ನು ತೆರವುಗೊಳಿಸಲು ಆಗ್ರಹಿಸಿ ಪಟ್ಟಣ ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ತಹಶೀಲ್ದಾರ್‌ ಸಂಜಯ ಇಂಗಳೆ ಅವರಿಗೆ ಗುರುವಾರ ಮನವಿ ಸಲ್ಲಿಸಿದರು
‌ಚಡಚಣದ ಸರ್ಕಾರಿ ನಿವೇಶನವನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿರುವುದನ್ನು ತೆರವುಗೊಳಿಸಲು ಆಗ್ರಹಿಸಿ ಪಟ್ಟಣ ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ತಹಶೀಲ್ದಾರ್‌ ಸಂಜಯ ಇಂಗಳೆ ಅವರಿಗೆ ಗುರುವಾರ ಮನವಿ ಸಲ್ಲಿಸಿದರು   

ಚಡಚಣ:ಪಟ್ಟಣ ವ್ಯಾಪ್ತಿಯಲ್ಲಿರುವ ಝಳಕಿ ರಾಜ್ಯ ಹೆದ್ದಾರಿ 41ಕ್ಕೆ ಹೊಂದಿಕೊಂಡಿರುವ ಸರ್ವೆ ನಂ.132 ರ 31 ಗುಂಟೆ ಸರ್ಕಾರಿ ಮುಪತ್‌ ಗಾಯರಾಣ ನಿವೇಶನವನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಿಸಿಕೊಂಡಿದ್ದು, ಕೂಡಲೇ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಧೋತ್ರೆ ತಹಶೀಲ್ದಾರ್‌ ಸಂಜಯ ಇಂಗಳೆ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ಪಟ್ಟಣ ಪಂಚಾಯಿತಿ ಸದಸ್ಯ ಪ್ರಕಾಶಗೌಡ ಪಾಟೀಲ ಮಾತನಾಡಿ, ಪಟ್ಟಣದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಈ ನಿವೇಶನದಲ್ಲಿ ಕಾನೂನು ಬಾಹಿರವಾಗಿ ರಸ್ತೆ ನಿರ್ಮಿಸಲಾಗುತ್ತಿದೆ. ಇದರಿಂದ ಕಾಲಕ್ರಮೇಣ ಈ ನಿವೇಶನವನ್ನು ಕಬಳಿಸುವ ಹುನ್ನಾರ ನಡೆಯುತ್ತಿದೆ. ಕೂಡಲೇ ತಡೆದು ಈ ನಿವೇಶನದ ಸುತ್ತ ತಂತಿ ಬೇಲಿ ಹಾಕಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಧೋತ್ರೆ ಮಾತನಾಡಿ, ಪಟ್ಟಣದ ಪಂಢರಪುರ ರಸ್ತೆಗೆ ಹೊಂದಿಕೊಂಡಿರುವ 3 ಎಕರೆ ಪಂಚಾಯಿತಿ ಆಸ್ತಿಯನ್ನು ಮಿನಿ ವಿಧಾನಸೌಧ ನಿರ್ಮಾಣಕ್ಕೆ ಹಸ್ತಾಂತರಿಸಲಾಗಿದೆ. ಅದರ ಬದಲಾಗಿ ಈ ಗಾಯರಾಣ ಜಾಗವನ್ನು ಪಟ್ಟಣ ಪಂಚಾಯಿತಿಗೆ ವರ್ಗಾಯಿಸಿದರೆ ಮಳಿಗೆಗಳನ್ನು ನಿರ್ಮಿಸಿ ಆದಾಯ ಪಡೆಯಬಹುದು ಎಂದರು.

ADVERTISEMENT

ಮನವಿ ಸ್ವೀಕರಿಸಿದ ತಹಶೀಲ್ದಾರ್‌ ಸಂಜಯ ಇಂಗಳೆ ಸರ್ಕಾರಿ ನಿವೇಶನಕ್ಕೆ ಆಗಮಿಸಿ, ಸ್ಥಳ ಪರಿಶೀಲಿಸಿದರು. ನಂತರ ಈ ನಿವೇಶನದಲ್ಲಿ ನಿರ್ಮಿಸಲಾದ ರಸ್ತೆಯನ್ನು ಜೆಸಿಬಿ ಮೂಲಕ ತೆರವುಗೊಳಿಸಿ, ಸುತ್ತಲು ತಂತಿ ಬೇಲಿ ಅಳವಡಿಸಲು ಚಾಲನೆ ನೀಡಿದರು.

ಪಟ್ಟಣ ಪಂಚಾಯಿತಿ ಸದಸ್ಯ ರಾಜು ಕೋಳಿ, ಬಾಲಾಜಿ ಗಾಡಿವಡ್ಡರ, ಧರ್ಮು ಬನಸೋಡೆ, ಅಣ್ಣಾ ಪೂಜಾರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.