ADVERTISEMENT

ರಾಜ್ಯಪಾಲರಿಗೆ ಅಗೌರವ; ಸದಸ್ಯರನ್ನು ಅನರ್ಹಗೊಳಿಸಿ: ರಮೇಶ ಜಿಗಜಿಣಗಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 2:18 IST
Last Updated 23 ಜನವರಿ 2026, 2:18 IST
ರಮೇಶ ಜಿಗಜಿಣಗಿ
ರಮೇಶ ಜಿಗಜಿಣಗಿ   

ವಿಜಯಪುರ: ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರನ್ನು ಅತ್ಯಂತ ಅಗೌರವದಿಂದ ನಡೆಸಿಕೊಳ್ಳುವ ಮೂಲಕ ಕಾಂಗ್ರೆಸ್ ನಾಯಕರು ಭಾರತೀಯ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತಂದು ಅತ್ಯಂತ ಬೇಜವಾಬ್ದಾರಿತನದಿಂದ ನಡೆದುಕೊಂಡಿದ್ದಾರೆ. ಕೂಡಲೇ ಈ ಎಲ್ಲ ಸದಸ್ಯರನ್ನು ಅನರ್ಹಗೊಳಿಸಿ ಮುಂದೆ ಅವರು ಚುನಾವಣೆಗೆ ಸ್ಪರ್ಧೆ ಮಾಡದಂತೆ ನಿಷೇಧ ಹೇರಬೇಕು’ ಎಂದು ಸಂಸದ ರಮೇಶ ಜಿಗಜಿಣಗಿ ಒತ್ತಾಯಿಸಿದ್ದಾರೆ.

ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ಸಾಂವಿಧಾನಿಕ ಹುದ್ದೆಯಲ್ಲಿರುವವರು, ಸರ್ಕಾರ ಸಿದ್ಧಪಡಿಸಿದ ಭಾಷಣವನ್ನೇ ಓದಬೇಕು ಎಂಬ ನಿಯಮ ಎಲ್ಲಿಯೂ ಇಲ್ಲ. ತನ್ನ ಸ್ವಾರ್ಥ ಸಾಧನೆಗಾಗಿ ವಿಶೇಷ ಅಧಿವೇಶನವನ್ನು ಕರೆಯುವ ಮೂಲಕ ಕಾಂಗ್ರೆಸ್ ಸರ್ಕಾರ ರಾಜಕಾರಣ ಮಾಡಲು ಬಯಸಿತ್ತು. ಆದರೆ, ಜನಪರ ಚಿಂತನೆಯುಳ್ಳ ರಾಜ್ಯಪಾಲರು ಸರ್ಕಾರದ ಸಿದ್ಧ ಭಾಷಣ ಓದಲಿಲ್ಲ. ಇದರಿಂದಾಗಿಯೇ ಕಾಂಗ್ರೆಸ್ ಶಾಸಕರು ರಾಜ್ಯಪಾಲರ ಜೊತೆ ಅತ್ಯಂತ ಕೆಟ್ಟದಾಗಿ ನಡೆದುಕೊಂಡು ಅವರ ದಾರಿಯನ್ನು ಅಡ್ಡಗಟ್ಟಿರುವುದು ಶೋಭೆ ತರದ ಸಂಗತಿ, ಇದು ಅತ್ಯಂತ ನಾಚಿಕಗೇಡಿನ ಸಂಗತಿ ಎಂದು ಜಿಗಜಿಣಗಿ ಆಕ್ರೋಶ ಹೊರಹಾಕಿದ್ದಾರೆ.

‘ರಾಜ್ಯಪಾಲರ ದಾರಿಯನ್ನು ಅಡ್ಡಗಟ್ಟಿ ಘೇರಾವ್ ಹಾಕುವುದು ನಮ್ಮ ಸಂಸ್ಕೃತಿಯಲ್ಲ. ಕಾಂಗ್ರೆಸ್ ನಾಯಕರು ಮಾಡಿರುವ ಈ ಕೃತ್ಯ ಸಹಿಸಿಕೊಳ್ಳಲು ಸಾಧ್ಯವಿಲ್ಲ, ಕೂಡಲೇ ರಾಜ್ಯಪಾಲರಿಗೆ ಅಗೌರವ ತೋರಿದ ಎಲ್ಲ ಕಾಂಗ್ರೆಸ್ ಸದಸ್ಯರನ್ನು ಕೂಡಲೇ ಶಾಸಕ ಸ್ಥಾನದಿಂದ ವಜಾ ಮಾಡಬೇಕು. ಈ ರೀತಿಯ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲದವರು ಚುನಾವಣೆಗೂ ಸ್ಪರ್ಧಿಸಬಾರದು, ಹೀಗಾಗಿ ಅವರೆಲ್ಲರೂ ಚುನಾವಣೆ ಸ್ಪರ್ಧಿಸದಂತೆ ನಿಷೇಧ ಹೇರಬೇಕು’ ಎಂದು ಜಿಗಜಿಣಗಿ ಒತ್ತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.