ADVERTISEMENT

ಒಳಮೀಸಲಾತಿ ಕಾಂಗ್ರೆಸ್ ಮೋಸದಾಟ: ಸಂಸದ ಗೋವಿಂದ ಕಾರಜೋಳ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 14:35 IST
Last Updated 29 ಅಕ್ಟೋಬರ್ 2024, 14:35 IST
ಸಂಸದ ಗೋವಿಂದ ಕಾರಜೋಳ
ಸಂಸದ ಗೋವಿಂದ ಕಾರಜೋಳ   

ಸಿಂದಗಿ: ಏಳು ಜನ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಂವಿಧಾನಪೀಠ ನ್ಯಾ.ಸದಾಶಿವ ಆಯೋಗ ವರದಿ ಜಾರಿಗೆಗಾಗಿ ಆದೇಶ ಹೊರಡಿಸಿದ್ದರೂ ಕಾಂಗ್ರೆಸ್ ಸರ್ಕಾರ ದತ್ತಾಂಶದ ನೆಪವೊಡ್ಡಿ ಒಂದೂವರೆ ವರ್ಷಗಳಾದರೂ ಒಳಮೀಸಲಾತಿ ಜಾರಿಗೆ ತಂದಿಲ್ಲ. ಇದು ಕಾಂಗ್ರೆಸ್‌ನ ಮೋಸದಾಟ. ಮುಖ್ಯಮಂತ್ರಿ ಸಿದ್ಧರಾಮಯ್ಯ ದಲಿತ ವಿರೋಧಿಯಾಗಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಒಳಮೀಸಲಾತಿ ಕುರಿತಾಗಿ ಈಗ ಮತ್ತೆ ಒನ್ ಮ್ಯಾನ್ ಕಮೀಷನ್ ಆಯೋಗ ರಚನೆ ಮಾಡುವುದಾಗಿ ಕ್ಯಾಬಿನೆಟ್‌ನಲ್ಲಿ ನಿರ್ಧಾರ ಮಾಡಿರುವದನ್ನು ಖಂಡಿಸಿ ರಾಜ್ಯವ್ಯಾಪಿ ಹೋರಾಟ ಕೈಗೊಳ್ಳಲಾಗುವುದು. 30 ಜಿಲ್ಲೆಗಳಲ್ಲಿ ಈಗ ಸಾಂಕೇತಿಕ ಧರಣಿ ನಡೆಸಿ 15 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ನಂತರ ಉಗ್ರ ಹೋರಾಟ ಪ್ರಾರಂಭಗೊಳ್ಳುತ್ತದೆ. ಕಾಂಗ್ರೆಸ್ ಶಾಸಕರ ಮನೆ ಎದುರು ಅಹೋರಾತ್ರಿ ಧರಣಿ, ಸಚಿವರು, ಮುಖ್ಯಮಂತ್ರಿಗಳಿಗೆ ಮುತ್ತಿಗೆ ಹಾಕಲಾಗುವುದು. ರಾಜ್ಯದಲ್ಲಿ ಶಾಸಕರು, ಸಚಿವರಿಗೆ ಓಡಾಡಲು ಬಿಡುವದಿಲ್ಲ ಎಂದು ಎಚ್ಚರಿಕೆ ನೀಡಿದರು.

ಒಳಮೀಸಲಾತಿ ಜಾರಿಗೆಯಿಂದ ಲಂಬಾಣಿ, ಬೋವಿ ಸಮುದಾಯವನ್ನು ಕೈಬಿಡುವ ತಪ್ಪು ತಿಳಿವಳಿಕೆಯನ್ನು ಕಾಂಗ್ರೆಸ್ ಬಿಂಬಿಸುತ್ತಿದೆ. ಆದರೆ ಪರಿಶಿಷ್ಟ 101 ಜಾತಿಗಳನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ADVERTISEMENT

ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸದಾಶಿವ ಆಯೋಗ ರಚನೆಯಾಗಿ ಮೂರು ವರ್ಷ ನಾಮಕಾವಾಸ್ತೆ ಇತ್ತು. ತದನಂತರ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ₹13 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಿ 4 ವರ್ಷಗಳ ಕಾಲ ನ್ಯಾಯಮೂರ್ತಿ ಸದಾಶಿವ ರಾಜ್ಯದಾದ್ಯಂತ ಸಂಚರಿಸಿ 2012 ರಲ್ಲಿ ಡಿ.ವಿ.ಸದಾನಂದಗೌಡ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ವರದಿ ಸ್ವೀಕಾರ ಮಾಡಲಾಯಿತು.

ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸದಾಶಿವ ಆಯೋಗ ಅನುಷ್ಠಾನಗೊಳಿಸುವುದಾಗಿ ತಿಳಿಸಿದ್ದರಿಂದ 101 ಪರಿಶಿಷ್ಟ ಜಾತಿ ಕಾಂಗ್ರೆಸ್ ಗೆ ಬೆಂಬಲಿಸಿ ಮತ ಕೊಟ್ಟಿದ್ದರು. ಆದರೆ ಸಿಎಂ ಸಿದ್ಧರಾಮಯ್ಯ ಮೂಗಿಗೆ ತುಪ್ಪ ಒರೆಸಿದ್ದರಿಂದ 2018 ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲಾಗಿತ್ತು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಹಾವನೂರ ವರದಿಯಿಂದ ಇಲ್ಲಿಯವರೆಗಿನ ಎಲ್ಲ ಆಯೋಗಗಳ ಮಾಹಿತಿಗಳನ್ನು ಸಂಗ್ರಹಿಸಿ ಬೊಮ್ಮಾಯಿ ಸರ್ಕಾರ ನಾಲು ವರ್ಗಗಳನ್ನಾಗಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿತ್ತು ಎಂದು ಕಾರಜೋಳ ವಿವರಿಸಿದರು.

ಶಾಸಕ ಹರೀಶ ಪೂಂಜಾ, ಮಾಜಿ ಶಾಸಕರಾದ ರಮೇಶ ಭೂಸನೂರ, ಅರುಣ ಶಹಾಪೂರ, ಭೀಮಾಶಂಕರ ಹದನೂರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಅಶೋಕ ಅಲ್ಲಾಪೂರ, ಗುರು ತಳವಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.