ADVERTISEMENT

ಮೊಮ್ಮಗನಿಗೆ ಅಜ್ಜಿಯ ಕಿಡ್ನಿ ಅಳವಡಿಕೆ

ಯಶೋದಾ ಆಸ್ಪತ್ರೆ: ಮೂತ್ರಪಿಂಡ ಕಸಿ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2023, 12:21 IST
Last Updated 14 ಫೆಬ್ರುವರಿ 2023, 12:21 IST
ವಿಜಯಪುರ ನಗರದ ಭೂತನಾಳದಲ್ಲಿರುವ ಯಶೋದಾ ಆಸ್ಪತ್ರೆಯಲ್ಲಿ ಕಿಡ್ನಿ ಕಸಿಗೆ ಒಳಗಾದ ಬಾಲಕ ಮತ್ತು ಕಿಡ್ನಿ ದಾನ ಮಾಡಿದ ಅಜ್ಜಿಯೊಂದಿಗೆ ಆಸ್ಪತ್ರೆಯ ಮೂತ್ರಪಿಂಡ ತಜ್ಞ ಡಾ.ರವೀಂದ್ರ ಮದ್ರಕಿ ಮತ್ತು ವೈದ್ಯರ ತಂಡ
ವಿಜಯಪುರ ನಗರದ ಭೂತನಾಳದಲ್ಲಿರುವ ಯಶೋದಾ ಆಸ್ಪತ್ರೆಯಲ್ಲಿ ಕಿಡ್ನಿ ಕಸಿಗೆ ಒಳಗಾದ ಬಾಲಕ ಮತ್ತು ಕಿಡ್ನಿ ದಾನ ಮಾಡಿದ ಅಜ್ಜಿಯೊಂದಿಗೆ ಆಸ್ಪತ್ರೆಯ ಮೂತ್ರಪಿಂಡ ತಜ್ಞ ಡಾ.ರವೀಂದ್ರ ಮದ್ರಕಿ ಮತ್ತು ವೈದ್ಯರ ತಂಡ   

ವಿಜಯಪುರ: ನಗರದ ಭೂತನಾಳದಲ್ಲಿರುವ ಯಶೋದಾ ಆಸ್ಪತ್ರೆಯಲ್ಲಿ ಬೆಳಗಾವಿ ಜಿಲ್ಲೆಯ ಹಾರೂಗೇರಿಯ ಬಾಲಕನಿಗೆ ಕಿಡ್ನಿ ಕಸಿಯನ್ನು ಯಶಸ್ವಿಯಾಗಿ ಮಾಡಲಾಗಿದೆ ಎಂದು ಆಸ್ಪತ್ರೆಯ ಅಧ್ಯಕ್ಷ ಮತ್ತು ಮೂತ್ರಪಿಂಡ ತಜ್ಞ ಡಾ.ರವೀಂದ್ರ ಮದ್ರಕಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 18 ವರ್ಷಗಳಿಂದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕನಿಗೆ ಕಳೆದ ಮೂರು ವರ್ಷಗಳಿಂದ ಹಿಮೋ-ಡಯಾಲಿಸಿಸ್ ಮಾಡಲಾಗುತ್ತಿತ್ತು. ಯಶೋದಾ ಆಸ್ಪತ್ರೆಯಲ್ಲಿ ತಜ್ಞರ ತಂಡವು ಬಾಲಕನ ಆತನ ಅಜ್ಜಿಯ ಮೂತ್ರಪಿಂಡವನ್ನು ಕಸಿ ಮಾಡುವ ಯಶಸ್ವಿಯಾಗಿ ಅಳವಡಿಸಿರುವುದಾಗಿ ಹೇಳಿದರು.

ಆಸ್ಪತ್ರೆಯ ಪರಿಣಿತ ವೈದ್ಯರಾದ ಡಾ. ಭುವನೇಶ್ ಆರಾಧ್ಯ, ಡಾ. ಅವಿನಾಶ್ ಓದುಗೌಡರ್, ಡಾ. ಸುನೀಲ್ ಕುಮಾರ್ ಸಜ್ಜನ್, ಡಾ.ಶ್ರೀನಾಥ್ ಪಾಟೀಲ್, ಡಾ.ಮಹೇಶ್ ಬಾಗಲಕೋಟಕರ್, ಡಾ ಮಂಜುನಾಥ್ ದೋಶೆಟ್ಟಿ ಮತ್ತು ಡಾ. ಸಂತೋಷ ಕಾಮಶೆಟ್ಟಿ ಅವರು ಸುಧಾರಿತ ತಂತ್ರಜ್ಞಾನದೊಂದಿಗೆ ಬಾಲಕನಿಗೆ ಯಶಸ್ವಿಯಾಗಿ ಮೂತ್ರಪಿಂಡ ಕಸಿ ಮಾಡಿದೆ ಎಂದರು.

ADVERTISEMENT

ವಿಜಯಪುರ ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿ ಮೊದಲ ಯಶಸ್ವಿ ಮೂತ್ರಪಿಂಡ ಕಸಿ ಇದಾಗಿದೆ. ಇದೊಂದು ಐತಿಹಾಸಿಕ ಕ್ಷಣವಾಗಿದ್ದು, ಅಂಗಾಂಗ ಕಸಿ ಅಗತ್ಯವಿರುವ ಲಕ್ಷಾಂತರ ಜನರಿಗೆ ಭರವಸೆ ಸಿಕ್ಕಿಂತಾಗಿದೆ. ಜಿಲ್ಲೆಯ ಮೂತ್ರಪಿಂಡ ರೋಗಿಗಳು ಚಿಕಿತ್ಸೆಗಾಗಿ ದೂರದ ನಗರಗಳಿಗೆ ಹೋಗುವ ಬದಲು ಇನ್ನು ಮುಂದೆ ವಿಜಯಪುರ ನಗರದಲ್ಲೇ ಆತ್ಯಾಧುನಿಕ ಚಿಕಿತ್ಸಾ ಸೌಲಭ್ಯ ಪಡೆಯಬಹುದಾಗಿದೆ ಎಂದರು.

ಈ ವೈದ್ಯಕೀಯ ಪ್ರಗತಿಯು ಜಿಲ್ಲೆಯ ಕಸಿ ಕ್ಷೇತ್ರದಲ್ಲಿ ಹೊಸ ಆಶಾಭಾವ ಮೂಡಿಸಿದೆ. ಜಿಲ್ಲೆಯಲ್ಲಿ ಮೂತ್ರಪಿಂಡದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಯಶೋದಾ ಆಸ್ಪತ್ರೆ ಪರಿಹಾರವನ್ನು ನೀಡುತ್ತದೆ ಎಂದು ಹೇಳಿದರು.

ಯಶೋದಾ ಆಸ್ಪತ್ರೆಯು ಮೂತ್ರಪಿಂಡ ದಾನ ಯೋಜನೆ ಪ್ರಾರಂಭಿಸಿದೆ(ಮೃತ ದಾನಿ ಅಂದರೆ ಮೆದುಳು ನಿಷ್ಕ್ರಿಯಗೊಂಡವರ ಅಂಗಗಳನ್ನು ದಾನ ಮಾಡುವವರು) ಮತ್ತು ರಕ್ತ ಸಂಬಂಧಿತ ದಾನಿಗಳನ್ನು ಹೊಂದಿರದ ಅಗತ್ಯವಿರುವ ರೋಗಿಗಳು ನಮ್ಮ ಆಸ್ಪತ್ರೆಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು ಮತ್ತು ಮೂತ್ರಪಿಂಡ ಕಸಿ ಪ್ರಯೋಜನವನ್ನು ಪಡೆಯಬಹುದು ಎಂದರು.

ಯಶೋದಾ ಟ್ರಸ್ಟ್ ಕಾರ್ಯದರ್ಶಿ ಡಾ.ಕಮಲಾ ಮದರಕಿ, ಆಸ್ಪತ್ರೆ ಪದಾಧಿಕಾರಿ ರವಿ ಪವಾರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.