ಇಂಡಿ: ‘ಜೀವನದಲ್ಲಿ ಅಧಿಕಾರ, ಅಂತಸ್ತು ಶಾಶ್ವತವಲ್ಲ. ಅಧಿಕಾರದಲ್ಲಿ ಇರುವ ದಿವಸಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ಮಾಡುವ ಮೂಲಕ ಪ್ರೀತಿ, ವಿಶ್ವಾಸ ಗಳಿಸಬೇಕು. ಉಸಿರು ಹೋದರೂ ಹೆಸರು ಉಳಿಯುವಂತೆ ಕೆಲಸ ಮಾಡಬೇಕು’ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ತಾಲ್ಲೂಕಿನ ಪಡನೂರ ಗ್ರಾಮದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ಮಾಡಿ ಮಂಗಳವಾರ ಮಾತನಾಡಿದರು.
‘ಧೂಳಖೇಡ– ಮರಗೂರ ಗ್ರಾಮಗಳ ಶ್ರೀಭೀಮಾಶಂಕರ ಸಹಕಾರ ಸಕ್ಕರೆ ಕಾರ್ಖಾನೆ ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಸಂಪೂರ್ಣ ವಿವರಣೆ ನೀಡಲಾಗಿದ್ದು, ಇಷ್ಟರಲ್ಲಿಯೇ ಇದಕ್ಕೆ ಸಹಾಯ ನೀಡುವುದಾಗಿ ಭರವಸೆ ನೀಡಿದ್ದಾರೆ’ ಎಂದರು.
‘ತಾಲ್ಲೂಕಿನಲ್ಲಿ ಕುಡಿಯುವ ನೀರಿಗಾಗಿ ಶ್ರಮಿಸಿದ್ದೇನೆ. ಇಂಡಿ ಪಟ್ಟಣಕ್ಕೆ ಭೀಮಾ ನದಿಯಿಂದ ₹100 ಕೋಟಿ ವೆಚ್ಚದಲ್ಲಿ 24x7 ನೀರು ಒದಗಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕೃಷ್ಣಾನದಿಯಿಂದ ಒಂದೇ ನಲ್ಲಿ ಎರಡು ಟ್ಯಾಪ್ ಮಾಡಿ ಭೀಮಾ-ಕೃಷ್ಣಾ ನೀರು ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.
‘ತಾಲ್ಲೂಕಿನ ಅನೇಕ ರಸ್ತೆಗಳು ಸುಧಾರಣೆಯಾಗದೆ ಹಾಗೆ ಉಳಿದಿದ್ದವು. ಲೋಕೋಪಯೋಗಿ ಇಲಾಖೆ ಸಚಿವರು ನನ್ನ ಮತಕ್ಷೇತ್ರಕ್ಕೆ ರಸ್ತೆಗಳ ಸುಧಾರಣೆಗೆ ವಿಶೇಷ ಅನುದಾನ ನೀಡಿದ್ದಾರೆ. ಅದರಲ್ಲಿ ಕೆಲವು ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುವುದು. ಪಡನೂರ ಗ್ರಾಮದ ಬಳಿ ಭೀಮಾನದಿಗೆ ಸೇತುವೆ, ರಸ್ತೆಗಳ ಸುಧಾರಣೆ, ದೇವಾಲಯಗಳ ಜೀರ್ಣೋದ್ಧಾರ ಕೆಲಸಗಳು ನಡೆಯುತ್ತಿವೆ’ ಎಂದರು.
ವಿರೂಪಾಕ್ಷ ಸ್ವಾಮೀಜಿ ಮತ್ತು ಕೆಂಚಪ್ಪ ಪೂಜಾರಿ ಸಾನ್ನಿಧ್ಯ ವಹಿಸಿದ್ದರು.
ಎಂ.ಆರ್ ಪಾಟೀಲ, ಕಲ್ಲನಗೌಡ ಬಿರಾದಾರ, ಬಾಬುಸಾಹುಕಾರ ಮೇತ್ರಿ, ಜೆಟ್ಟೆಪ್ಪ ರವುಳಿ, ಜೀತಪ್ಪ ಕಲ್ಯಾಣಿ, ಪ್ರಶಾಂತ ಕಾಳೆ, ಸದಾಶಿವ ಪ್ಯಾಟಿ, ನಿವೃತ್ತ ಡಿವೈಎಸ್ಪಿ ಸರನಾಡಗೌಡ, ಮುಸ್ತಾಕ ಇಂಡಿಕರ್, ಚಂದುಸಾಹುಕಾರ ಶಿರಗೂರ, ಜಾವೇದ್ ಮೋಮಿನ್, ಶಿವಯೋಗೆಪ್ಪ ಜೋತಗೊಂಡ, ಜಂಗಲಿಸಾಹುಕಾರ, ಬಸಪ್ಪಗೌಡ್ರು, ರುದ್ರಗೌಡ ಅಲಗೊಂಡ, ವಿಠ್ಠಲಗೌಡ ಪಾಟೀಲ ಅಗರಖೇಡ, ತಾಲ್ಲೂಕು ಲೋಕೋಪಯೋಗಿ ಇಲಾಖೆ ಅಧಿಕಾರಿ ದಯಾನಂದ ಮಠ, ಗುತ್ತಿಗೆದಾರ ಎಲ್.ಎಂ ಮಡಗೊಂಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.