ADVERTISEMENT

ಐನೂರಕ್ಕೂ ಅಧಿಕ ವಚನ ವಾಚನ: ಗಿನ್ನಿಸ್ ದಾಖಲೆ ಬರೆದ ಬಾಲ‌ ಪ್ರತಿಭೆ ದಿತಿ ಶಿರಶ್ಯಾಡ

ಬಸವರಾಜ ಎಸ್.ಉಳ್ಳಾಗಡ್ಡಿ
Published 14 ನವೆಂಬರ್ 2025, 5:29 IST
Last Updated 14 ನವೆಂಬರ್ 2025, 5:29 IST
ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಜರುಗಿದ ಸಮಾರಂಭದಲ್ಲಿ ದಿತಿ ಶಿರಶ್ಯಾಡ ಇವಳಿಗೆ ‘ಅನುಭವಮಂಟಪ ಬಾಲಪ್ರತಿಭೆ’ ಪ್ರಶಸ್ತಿ ನೀಡಿದ ಗಳಿಗೆ
ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಜರುಗಿದ ಸಮಾರಂಭದಲ್ಲಿ ದಿತಿ ಶಿರಶ್ಯಾಡ ಇವಳಿಗೆ ‘ಅನುಭವಮಂಟಪ ಬಾಲಪ್ರತಿಭೆ’ ಪ್ರಶಸ್ತಿ ನೀಡಿದ ಗಳಿಗೆ   

ಬಸವನಬಾಗೇವಾಡಿ: ಎರಡು ವರ್ಷ ವಯಸ್ಸಿನಲ್ಲೇ 300ಕ್ಕೂ ಅಧಿಕ‌ ಸಾಮಾನ್ಯಜ್ಞಾನ ಪ್ರಶ್ನೆಗಳಿಗೆ ತಡವರಿಸದೇ ಉತ್ತರ ನೀಡಿ ಅನೇಕ ವಿಷಯಗಳ ಜ್ಞಾನಭಂಡಾರದಿಂದ ಜ್ಞಾಪಕಶಕ್ತಿ ಹೊಂದಿರುವ ‘ಅತಿ ಚಿಕ್ಕ ವಯಸ್ಸಿನ ಬಾಲಪ್ರತಿಭೆ’ ಎಂದು ಗಿನ್ನಿಸ್ ದಾಖಲೆ ಮಾಡಿದ ಬಸವನಾಡಿನ ಹೆಮ್ಮೆಯ ಕುವರಿ ದಿತಿ ಹನುಮಂತ ಶಿರಶ್ಯಾಡ.

ದಿತಿ ತಾಲ್ಲೂಕಿನ ದಿಂಡಿವಾರ ಗ್ರಾಮದ ಶಿಕ್ಷಕ ಹನುಮಂತ ಹಾಗೂ ಸರಸ್ವತಿ ಶಿರಶ್ಯಾಡ ದಂಪತಿಯ ಪುತ್ರಿ. ಮನೆಯೇ ಮೊದಲ ಪಾಠ ಶಾಲೆ ಎನ್ನುವಂತೆ ಶಿರಶ್ಯಾಡ ದಂಪತಿ ಮಗಳು ದಿತಿ ಜ್ಞಾಪಕಶಕ್ತಿ‌ ಬಗ್ಗೆ ಒಂದೂವರೇ ವರ್ಷದವಳಿದ್ದಾಗಲೇ ಗುರುತಿಸಿ ಅವಳಿಗೆ ಸೂಕ್ತ ತರಬೇತಿ, ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ. ಆಗಲೇ ಅವಳು ರಾಜ್ಯಗಳ ಹೆಸರು, ಕನ್ನಡ, ಇಂಗ್ಲಿಷ್ ವರ್ಣಮಾಲೆ, ವಚನಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರು ಹೀಗೆ ಅನೇಕ ವಿಚಾರಗಳ ಬಗ್ಗೆ ಹೇಳುತ್ತಿದ್ದಳು.

ಸಿಂದಗಿಯ ಪ್ರೇರಣಾ ಪಬ್ಲಿಕ್ ಶಾಲೆಯಲ್ಲಿ ಎಲ್.ಕೆ.ಜಿ ಓದುತ್ತಿರುವ ದಿತಿ ಶಿರಶ್ಯಾಡ 4 ವರ್ಷ ವಯಸ್ಸಿನಲ್ಲಿ ಭಗವದ್ಗೀತೆಯ 18 ಅಧ್ಯಾಯಗಳ ಹೆಸರು, ಶ್ರೀರಾಮನ ವಂಶಸ್ಥರ ಹೆಸರು, 40 ಶ್ಲೋಕಗಳು, 60 ಸಂವತ್ಸರಗಳ ಹೆಸರು, 200ಕ್ಕೂ ಅಧಿಕ ಗಾದೆಗಳು, 30ಕ್ಕೂ ಅಧಿಕ ಒಡಪುಗಳು, ಅಶೋಕ ಚಕ್ರದೊಳಗಿನ 24 ಗೆರೆಗಳ ಅರ್ಥ, ಕರ್ನಾಟಕದ ಜಿಲ್ಲೆಗಳು, ದೇವಸ್ಥಾನಗಳ ವಿಶೇಷತೆಗಳು, ಸಿದ್ಧೇಶ್ವರ ಶ್ರೀಗಳ ಹಿತನುಡಿಗಳು, ಭಾರತದ ಸಂವಿಧಾನ ಪೀಠಿಕೆ, ಭೂಗೋಳ, ಸಾಮಾನ್ಯಜ್ಞಾನ ಸಂಬಂಧಿತ ಸೇರಿ ಸುಮಾರು ಐದು ಸಾವಿರಕ್ಕೂ ಅಧಿಕ ಪ್ರಶ್ನೆಗಳಿಗೆ ಉತ್ತರ ನೀಡುತ್ತಾಳೆ.

ADVERTISEMENT

ದಿತಿ 20ಕ್ಕೂ ಅಧಿಕ ದೊಡ್ಡ ವೇದಿಕೆಗಳ‌ ಮೇಲೆ ಬಸವಾದಿ ಶರಣರ ಐನೂರಕ್ಕೂ ಹೆಚ್ಚು ವಚನಗಳನ್ನು ಅಭಿನಯದ ಮೂಲಕ ವಾಚಿಸಿ ಮೆಚ್ಚುಗೆ ಪಡೆದಿದ್ದಾಳೆ. ಈ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿವೆ. 

ದಿತಿ ಶಿರಶ್ಯಾಡ ಸಾಧನೆಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. ವಿಜಯಪುರ ಜಿಲ್ಲಾಡಳಿತದಿಂದ ವಿಶೇಷ ಸಾಧನೆ ಪ್ರಶಸ್ತಿ, ಬಸವಕಲ್ಯಾಣದಲ್ಲಿ ‘ಅನುಭವ ಮಂಟಪ ಬಾಲಪ್ರತಿಭೆ’ ಪ್ರಶಸ್ತಿ, ಸಿದ್ದಗಂಗಾ ಶ್ರೀಮಠದಿಂದ ‘ಸಿದ್ಧಗಂಗಾ ಶ್ರೀ ಬಾಲಪ್ರತಿಭೆ’ ಪ್ರಶಸ್ತಿ, ಭಾಲ್ಕಿ ಪಟ್ಟದೇವರು ಪೂಜ್ಯರಿಂದ ಸನ್ಮಾನ ಗೌರವ, ಬಸವನಬಾಗೇವಾಡಿ, ಕಲಬುರಗಿಯಲ್ಲಿ ಜರುಗಿದ ಬಸವ ಸಂಸ್ಕೃತಿ ಅಭಿಯಾನದ ಕಾರ್ಯಕ್ರಮದಲ್ಲಿ ಸಂತಮಹಾಂತರಿಂದ ಸನ್ಮಾನ ಗೌರವ ಹೀಗೆ ದಿತಿಗೆ ಸಾಲುಸಾಲು ಪ್ರಶಸ್ತಿ, ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡು ಮಕ್ಕಳಿಗೆ ಪ್ರೇರಣಾಶಕ್ತಿಯಾಗಿದ್ದಾಳೆ.

ದಿತಿ ಶಿರಶ್ಯಾಡ
ಮಗಳ ಆಸಕ್ತಿ ಮೇರೆಗೆ ಅನೇಕ ವಿಷಯ ವಿಚಾರಗಳ ಕುರಿತು ಮಾರ್ಗದರ್ಶನ ನೀಡುತ್ತಿದ್ದೇವೆ. ಅವಳಿಗೆ ಉತ್ತಮ ಶಿಕ್ಷಣ ಸಂಸ್ಕಾರ ನೀಡಿ ಬಸವನಾಡಿನ ಹೆಮ್ಮೆಯ ಕುವರಿಯಾಗಿ ಬೆಳಗಬೇಕೆಂಬುದಷ್ಟೇ ನಮ್ಮ‌ ಆಸೆ
ಹನುಮಂತ, ಶಿರಶ್ಯಾ ದಿತಿ ತಂದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.