ದೇವರಹಿಪ್ಪರಗಿ: ಸರ್ಕಾರಿ ಸ್ವಾಮ್ಯದ ನಿರ್ಮಾಣ ಸಂಸ್ಥೆಯಿಂದ ನಿರ್ಲಕ್ಷ್ಯಕ್ಕೆ ಒಳಗಾದ ಪಟ್ಟಣದ ನೂತನ ಪಶುವೈದ್ಯಕೀಯ ಆಸ್ಪತ್ರೆಯ ಕಟ್ಟಡ ಮೇಲೇಳದೇ ನಿರ್ಮಾಣ ಹಂತದಲ್ಲಿಯೇ ಅರ್ಧಕ್ಕೆ ನಿಂತಂತಾಗಿದೆ.
ಪಟ್ಟಣದ ಪಶು ಆಸ್ಪತ್ರೆಯ ಆವರಣದಲ್ಲಿ ಕಳೆದ ನವೆಂಬರ್ 1ರ ರಾಜ್ಯೋತ್ಸವ ದಿನದಂದು ಶಾಸಕ ರಾಜುಗೌಡ ಪಾಟೀಲ (ಕುದರಿ ಸಾಲವಾಡಗಿ)ರಿಂದ ಭೂಮಿಪೂಜೆ ನೆರವೇರಿಸಿದ್ದು, ಅಂದಾಜು ₹50.13 ಲಕ್ಷಗಳ ವೆಚ್ಚದಲ್ಲಿ ನಿಗದಿತ ಸಮಯದಲ್ಲಿ ನಿರ್ಮಾಣವಾಗಬೇಕಿದ್ದ ಕಟ್ಟಡ ಕಾರ್ಯ ಕಳೆದ ಬಹುತೇಕ ತಿಂಗಳಿಂದ ಸ್ಥಗಿತಗೊಂಡಿದೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ ಮಾತನಾಡಿ, 2022-23ನೇ ಸಾಲಿನ ಆರ್.ಐ.ಡಿ.ಎಫ್ ಟ್ರ್ಯಾಂಚ್ ಅಡಿಯಲ್ಲಿ ಪಟ್ಟಣದ ಪಶುವೈದ್ಯಕೀಯ ಆಸ್ಪತ್ರೆ ಸೇರಿದಂತೆ ರಾಜ್ಯದ 57 ಪಶು ವೈದ್ಯ ಸಂಸ್ಥೆಗಳ ನೂತನ ಕಟ್ಟಡಗಳ ನಿರ್ಮಾಣಕ್ಕೆ ಸರ್ಕಾರ ಆಡಳಿತಾತ್ಮಕ ಮಂಜೂರಾತಿ ನೀಡಿತು ಎಂದು ತಿಳಿಸಿದರು.
‘ಈ ಕಾಮಗಾರಿಗಳನ್ನು ರಾಜ್ಯ ಸರ್ಕಾರಿ ಸ್ವಾಮ್ಯದ ನಿರ್ಮಾಣ ಸಂಸ್ಥೆಯಾದ ಕರ್ನಾಟಕ ಸ್ಟೇಟ್ ಹ್ಯಾಬಿಟೇಟ್ ಸೆಂಟರ್‌ಗೆ ವಹಿಸಲಾಯಿತು. ನಂತರ ನೂತನ ಆಸ್ಪತ್ರೆಗಾಗಿ ಭೂಮಿಪೂಜೆ ನೆರವೇರಿಸಿ, ತದನಂತರ ಆರಂಭದ ಕಾಂಕ್ರೀಟ್ ಕಂಬಗಳಿಗಾಗಿ ಕಬ್ಬಿಣದ ಫಿಲ್ಲರ್‌ಗಳನ್ನು ಅಳವಡಿಸುವ ಕಾರ್ಯ ಕೈಗೊಳ್ಳಲಾಯಿತು. ಆಮೇಲೆ ಯಾವುದೇ ಕಾರ್ಯ ಆರಂಭಗೊಳ್ಳದೇ ಕಾರ್ಯ ಸ್ಥಗಿತಗೊಳಿಸಲಾಗಿದ್ದು, ಈಗ ಇಡೀ ಪ್ರದೇಶ ಸಾರ್ವಜನಿಕರ ಶೌಚಾಲಯವಾಗಿ ಮಾರ್ಪಾಡಾಗಿದೆ’ ಎಂದು ಬೇಸರಿಸಿದರು.
‘ಈ ಕುರಿತು ಕೇಳಬೇಕೆಂದರೆ ನಿರ್ಮಾಣ ಸಂಸ್ಥೆಯ ಯಾವ ಅಧಿಕಾರಿಗಳು ಹಾಗೂ ಅವರ ಸಂಪರ್ಕ ಸಂಖ್ಯೆಗಳು ದೊರೆಯುತ್ತಿಲ್ಲ. ಈಗ ಕ್ಷೇತ್ರದ ಶಾಸಕರ ಗಮನಕ್ಕೆ ತಂದು ಪುನಃ ಕಾರ್ಯ ಆರಂಭಿಸಲು ಕ್ರಮ ವಹಿಸಬೇಕಾಗಿದೆ’ ಎಂದು ನುಡಿದರು.
‘ತಾಲ್ಲೂಕು ಕೇಂದ್ರದಲ್ಲಿ ಈಗ ಇರುವ ಪಶು ಆಸ್ಪತ್ರೆಯ ಕಟ್ಟಡ ಚಿಕ್ಕದು ಹಾಗೂ ಹಳೆಯದಾಗಿದ್ದು, ನೂತನ ಕಟ್ಟಡದ ಅಗತ್ಯತೆಯಿದೆ. ಈ ನಿಟ್ಟಿನಲ್ಲಿ ಆರಂಭಗೊಂಡ ನೂತನ ಕಟ್ಟಡಕ್ಕೆ ಚಾಲನೆ ನೀಡಿ ಬೇಗನೇ ಜನೋಪಯೋಗಕ್ಕೆ ದೊರೆಯುವಂತೆ ಮಾಡುವುದು ಅಗತ್ಯ. ಈ ಕುರಿತು ಶಾಸಕರು ಹಾಗೂ ಸಂಬಂಧಿಸಿದ ಸಂಸ್ಥೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ರೈತ ಮುಖಂಡರಾದ ಶಂಕರಗೌಡ ಕೋಟಿಖಾನಿ(ಹರನಾಳ), ಬಸವರಾಜ ಕಲ್ಲೂರ(ಮುಳಸಾವಳಗಿ), ಶಾಂತಪ್ಪ ದೇವೂರ ಹಾಗೂ ಚಂದ್ರಶೇಖರ ಕೋಟಿನ್ ಆಗ್ರಹಿಸಿದರು.
ನೂತನ ಪಶು ಆಸ್ಪತ್ರೆಯ ನಿರ್ಮಾಣ ಕುರಿತು ನನಗೆ ಅಷ್ಟಾಗಿ ಮಾಹಿತಿ ಇಲ್ಲ. ನಾನು ಪ್ರಭಾರಿ ಅದಾಗ್ಯೂ ಈ ಕುರಿತು ವಿಚಾರಿಸಿ ಅಗತ್ಯಕ್ರಮ ವಹಿಸುತ್ತೇನೆ.
–ಡಾ.ಪ್ರಶಾಂತ ತಳವಾರ. ಪ್ರಭಾರ ಸಹಾಯಕ ನಿರ್ದೇಶಕ ಪಶು ಆಸ್ಪತ್ರೆ ದೇವರಹಿಪ್ಪರಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.