ಒಳ ಮೀಸಲಾತಿ ಜಾರಿ ವಿರೋಧಿಸಿ ಅರೆಬೆತ್ತಲೆ ಪ್ರತಿಭಟನೆ
ವಿಜಯಪುರ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಒಳ ಮೀಸಲಾತಿಯನ್ನು ವಿರೋಧಿಸಿ ಬಂಜಾರಾ, ಭೋವಿ, ಕೋರಚ, ಕೋರಮ, ಭಜಂತ್ರಿ ಸಮುದಾಯದವರು ನಗರದಲ್ಲಿ ಶನಿವಾರ ಹಂದಿ, ಚಪ್ಪಲಿಯನ್ನು ತಲೆ ಮೇಲೆ ಹೊತ್ತು, ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.
ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಗಾಂಧಿ ಚೌಕ ಮಾರ್ಗವಾಗಿ ಬಸವೇಶ್ವರ ವೃತ್ತ ಅಂಬೇಡ್ಕರ್ ವೃತ್ತದ ಮೂಲಕ ಸಾಗಿ ಹೆಚ್ಚುವರಿ ಜಿಲ್ಲಾಧಿಕಾರಿಗೆ ಸೋಮಲಿಂಗ ಗೆಣ್ಣೂರಗೆ ಮನವಿ ಸಲ್ಲಿಸಿದರು.
ಬಂಜಾರ ಸಮುದಾಯದ ಮುಖಂಡ ಮಹೇಂದ್ರಕುಮಾರ ನಾಯಕ ಮಾತನಾಡಿ, ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ನೀಡುವ ಸಂಬಂಧ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಆಯೋಗ ನೀಡಿರುವ ವರದಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಇದನ್ನು ಸಮುದಾಯ ತೀವ್ರವಾಗಿ ಕಂಡಿಸುತ್ತೇವೆ ಎಂದರು.
ಡಾ.ಬಾಬು ರಾಜೇಂದ್ರ ನಾಯಕ ಮಾತನಾಡಿ, ಆಯೋಗವು ಒಳ ಮೀಸಲಾತಿ ಹಂಚಿರುವುದು ಸುಪ್ರೀಂ ಕೋರ್ಟ್ ಆದೇಶಕ್ಕೆ ತದ್ವಿರುದ್ಧವಾಗಿದೆ. ಯಾವ ನ್ಯಾಯಾಲಯಕ್ಕೂ ಅಥವಾ ರಾಜ್ಯ ಸರ್ಕಾರಕ್ಕೂ ಜಾತಿಗಳನ್ನು ವಿಂಗಡಿಸುವುದು, ಸೇರಿಸುವುದು ಮತ್ತು ಗುಂಪುಗಳನ್ನು ಮಾಡುವ ಅಧಿಕಾರ ಇರುವುದಿಲ್ಲ ಎಂದು ಹೇಳಿದರು.
ಭೋವಿ ಸಮುದಾಯದ ರಾಜ್ಯ ಘಟಕದ ಅಧ್ಯಕ್ಷ ಲಕ್ಷ್ಮಣ ಭೋವಿ ಮಾತನಾಡಿ, ಜಾತಿ ಗಣತಿಯಲ್ಲಿ ನಮ್ಮ ಸಮುದಾಯವನ್ನು ಪರಿಗಣಿಸದೆ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ. ಈ ಸರ್ಕಾರಕ್ಕೆ ಮುಂದಿನ ದಿನಮಾನದಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಮಾಜಿ ಶಾಸಕ ದೇವಾನಂದ ಚವ್ಹಾಣ ಮಾತನಾಡಿ, ಸಿದ್ದರಾಮಯ್ಯ ಸರ್ಕಾರವು ಆರ್ಥಿಕವಾಗಿ ಸುಧಾರಣೆಯಾಗಿರುವ ಸಮುದಾಯಗಳಿಗೆ ಶೇ 6 ರಷ್ಟು ಒಳಮೀಸಲಾತಿ ನೀಡಿ, ತೀವ್ರವಾಗಿ ಹಿಂದುಳಿದ 63 ಸಮುದಾಯಕ್ಕೆ ಶೇ 5ರಷ್ಟು ಮೀಸಲಾತಿ ನೀಡಿ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.
ಭಜಂತ್ರಿ ಸಮುದಾಯದ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರ ಜಾಧವ, ಬಂಜಾರ ಮುಖಂಡ ರಾಜು ಜಾಧವ, ಡಾ. ಅರವಿಂದ ಜಾಧವ, ಸಿದ್ದಲಿಂಗ ಸ್ವಾಮೀಜಿ, ಕೆಸರಹಟ್ಟಿ ಸೋಮಲಿಂಗ ಸ್ವಾಮೀಜಿ, ಸಂಜು ಮಹಾರಾಜ,ಗೋಪಾಲ ಮಹಾರಾಜ, ಪ್ರಕಾಶ ಮಹಾರಾಜ, ಭೀಮು ಮಹಾರಾಜ, ಮಾಜಿ ಶಾಸಕ ಮನೋಹರ ಐನಾಪುರ, ರಾಜಪಾಲ ಚವ್ಹಾಣ, ರಾಜು ಎಲ್. ಜಾಧವ, ರಾಜು ಚವ್ಹಾಣ, ಭಜಂತ್ರಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರ ಜಾಧವ, ಸಂತೋಷ ಚವ್ಹಾಣ, ಕುಂಚಿಕೊರವ ಸಮಾಜದ ಅಬ್ದುಲ್ ಕುಂಚಿಕೊರವ, ಈರಪ್ಪ ಕುಂಚಿಕೊರವ, ಕೆಂಚಪ್ಪ ಕುಂಚಿಕೊರವ, ಭೋವಿ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಲಕ್ಷ್ಮಣ ಭೋವಿ, ಮಲ್ಲಿಕಾರ್ಜುನ ನಾಯಕ, ಚಂದ್ರು ರಾಠೋಡ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.