ADVERTISEMENT

ದಶಕಗಳ ಕನಸು ನನಸು; ರಂಗಾಸಕ್ತರಲ್ಲಿ ಹೊಂಗನಸು..!

ಹಂದಿಗನೂರು ಸಿದ್ದರಾಮಪ್ಪ ಬಯಲು ರಂಗಮಂದಿರ ನಿರ್ಮಾಣ; ಅಂತಿಮ ಸ್ಪರ್ಶ

ಡಿ.ಬಿ, ನಾಗರಾಜ
Published 26 ಮಾರ್ಚ್ 2019, 20:00 IST
Last Updated 26 ಮಾರ್ಚ್ 2019, 20:00 IST
ವಿಜಯಪುರದ ಕಂದಗಲ್ ಹನುಮಂತರಾಯ ರಂಗಮಂದಿರದ ಹಿಂಭಾಗ ನಿರ್ಮಾಣಗೊಂಡಿರುವ ಹಂದಿಗನೂರು ಸಿದ್ದರಾಮಪ್ಪ ಬಯಲು ರಂಗಮಂದಿರಪ್ರಜಾವಾಣಿ ಚಿತ್ರ
ವಿಜಯಪುರದ ಕಂದಗಲ್ ಹನುಮಂತರಾಯ ರಂಗಮಂದಿರದ ಹಿಂಭಾಗ ನಿರ್ಮಾಣಗೊಂಡಿರುವ ಹಂದಿಗನೂರು ಸಿದ್ದರಾಮಪ್ಪ ಬಯಲು ರಂಗಮಂದಿರಪ್ರಜಾವಾಣಿ ಚಿತ್ರ   

ವಿಜಯಪುರ:ಮೂರುವರೆ ದಶಕದ ಬೇಡಿಕೆ ಸಾಕಾರಗೊಳ್ಳುತ್ತಿದೆ. ರಂಗಾಸಕ್ತರ ಕೋರಿಕೆಯಂತೆ ವಿಜಯಪುರದ ಕಂದಗಲ್ ಹನುಮಂತರಾಯ ರಂಗಮಂದಿರದ ಹಿಂಭಾಗ, ಹಂದಿಗನೂರು ಸಿದ್ದರಾಮಪ್ಪ ಬಯಲು ರಂಗಮಂದಿರದ ನಿರ್ಮಾಣ ಕೆಲಸ ಭರದಿಂದ ಸಾಗಿದೆ.

ಮೊದಲ ಹಂತದಲ್ಲಿ ಬಯಲು ರಂಗಮಂದಿರದ ವೇದಿಕೆ, ಹಿಂಭಾಗ ಆವರಣಗೋಡೆ, ಮೇಲ್ಛಾವಣಿ, ಅಕ್ಕ ಪಕ್ಕ ಕಲಾವಿದರ ಡ್ರೆಸ್ಸಿಂಗ್‌ ಕೊಠಡಿ, ಅದರ ಬಾಜು ಶೌಚಾಲಯದ ನಿರ್ಮಾಣ ಕಾಮಗಾರಿ ಈಗಾಗಲೇ ಪೂರ್ಣಗೊಂಡಿವೆ.

ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಸ್ಥಳೀಯ ರಂಗ ಕಲಾವಿದರ ಮನವಿಗೆ ಓಗೊಟ್ಟು ಹಂದಿಗನೂರು ಸಿದ್ದರಾಮಪ್ಪ ಬಯಲು ರಂಗಮಂದಿರ ನಿರ್ಮಾಣಕ್ಕೆ ಹಸಿರು ನಿಶಾನೆ ನೀಡಿ, ಮಂಜೂರಾತಿ ಒದಗಿಸಿದ್ದರು.

ADVERTISEMENT

‘₹ 71 ಲಕ್ಷ ಮೊತ್ತದ ಯೋಜನೆಯಿದು. ವೇದಿಕೆ, ಕಲಾವಿದರ ಡ್ರೆಸ್ಸಿಂಗ್ ಕೊಠಡಿ, ಪಾತ್ರಧಾರಿಗಳ ವಿಶ್ರಾಂತಿ ಕೊಠಡಿ ಕಾಮಗಾರಿ ಈಗಾಗಲೇ ಮುಗಿದಿದೆ. ಲೋಕೋಪಯೋಗಿ ಇಲಾಖೆ ಈ ಕಾಮಗಾರಿ ನಿರ್ವಹಿಸಿದ್ದು, ಈಗಾಗಲೇ ₹ 30 ಲಕ್ಷ ಮೊತ್ತ ಬಿಡುಗಡೆಯಾಗಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಎಚ್‌.ಬಿ.ವಿದ್ಯಾವತಿ ತಿಳಿಸಿದರು.

‘ಎರಡನೇ ಹಂತದ ಅನುದಾನ ಬಿಡುಗಡೆ ಮಾಡುವಂತೆ ಈಗಾಗಲೇ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಪತ್ರ ಬರೆದಿದ್ದೇವೆ. 200ರಿಂದ 300 ಪ್ರೇಕ್ಷಕರು ಕುಳಿತುಕೊಳ್ಳಲು ಅನುಕೂಲವಾಗುವಂತೆ ಕಾಂಕ್ರೀಟ್‌ ನೆಲಹಾಸು ನಿರ್ಮಿಸಬೇಕಿದೆ. ಶೀಘ್ರದಲ್ಲೇ ಆ ಕೆಲಸವನ್ನು ಸಂಬಂಧಿಸಿದವರು ಕೈಗೆತ್ತಿಕೊಂಡು ಪೂರ್ಣಗೊಳಿಸುವರು. ನಂತರವಷ್ಟೇ ಇಲಾಖೆಗೆ ಹಸ್ತಾಂತರ ಮಾಡಲಿದ್ದಾರೆ’ ಎಂದು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಅವೈಜ್ಞಾನಿಕ; ಅಪಸ್ವರ

‘ಮೂರುವರೆ ದಶಕದ ಬೇಡಿಕೆಗೆ ಕೊನೆಗೂ ಮನ್ನಣೆ ಸಿಕ್ಕಿತು. ಸಂತಸವಾಯ್ತು. ಆದರೆ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳು ಸ್ಥಳೀಯ ರಂಗಾಸಕ್ತರ ಸಲಹೆ ಪಡೆಯದೆ, ಕಾಮಗಾರಿ ನಡೆಸಿದ್ದು ಅವೈಜ್ಞಾನಿಕವಾಗಿದೆ’ ಎಂದು ಕಲಾ ಮಾಧ್ಯಮದ ಕಾರ್ಯದರ್ಶಿ, ಹಿರಿಯ ರಂಗಕರ್ಮಿ ಜಿ.ಎನ್.ದೇಶಪಾಂಡೆ ಬೇಸರ ವ್ಯಕ್ತಪಡಿಸಿದರು.

‘ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಹಿಂಭಾಗದಲ್ಲಿರುವ ‘ಸಂಸ’ ಬಯಲು ರಂಗಮಂದಿರದಂತೆ ಹಂದಿಗನೂರು ಸಿದ್ದರಾಮಪ್ಪ ಬಯಲು ರಂಗಮಂದಿರ ನಿರ್ಮಿಸಬೇಕು ಎಂಬುದು ನಮ್ಮ ಕನಸಾಗಿತ್ತು. ಇದಕ್ಕಾಗಿ ಹೋರಾಟವನ್ನು ನಡೆಸಿದ್ದೆವು. ಯೋಜನೆಗೆ ಮಂಜೂರಾತಿ ದೊರೆತ ಬಳಿಕ ಮೂರು ಬಾರಿ ನೀಲನಕ್ಷೆ ಒದಗಿಸಿದ್ದರೂ; ಅದ್ಯಾವುದನ್ನು ಪರಿಗಣಿಸಲಿಲ್ಲ.

ಎಂಜಿನಿಯರ್‌ಗಳು ತಮ್ಮ ಮನಸ್ಸಿಗೆ ತೋಚಿದಂತೆ ಕಾಮಗಾರಿ ನಿರ್ವಹಿಸಿದ್ದಾರೆ. ಉತ್ತರ–ದಕ್ಷಿಣಾಭಿಮುಖವಾಗಿ ಬದಲು ಪೂರ್ವ–ಪಶ್ಚಿಮಾಭಿಮುಖವಾಗಿ ವೇದಿಕೆ ನಿರ್ಮಿಸಿದ್ದಾರೆ. ಇದು ಕಲಾವಿದರು, ಪ್ರೇಕ್ಷಕರಿಗೆ ಬೆಳಗಿನ ವೇಳೆ ಸಾಕಷ್ಟು ತೊಂದರೆ ನೀಡಲಿದೆ’ ಎಂದು ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.