ADVERTISEMENT

ಪ್ರವಾಹ ಸಂತ್ರಸ್ತರಿಗೆ ನೆರವಿನ ಮಹಾಪೂರ

ಜಿಲ್ಲಾಡಳಿತದ ಮನವಿಗೆ ಉತ್ತಮ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2019, 15:37 IST
Last Updated 13 ಆಗಸ್ಟ್ 2019, 15:37 IST

ವಿಜಯಪುರ: ಜಿಲ್ಲೆಯ ಕೃಷ್ಣಾ ಮತ್ತು ಭೀಮಾ ನದಿ ತೀರದಲ್ಲಿ ಪ್ರವಾಹದಿಂದ ಸಂತ್ರಸ್ತರಾದ ಕುಟುಂಬಗಳಿಗೆ ಜಿಲ್ಲೆಯ ಸಂಘ–ಸಂಸ್ಥೆಗಳು, ಸಾರ್ವಜನಿಕರು ಉದಾರವಾಗಿ ನೆರವು ನೀಡಿದ್ದಾರೆ.

ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಜಿಲ್ಲಾಡಳಿತ ಮನವಿ ಮಾಡಿತ್ತು. ಇದಕ್ಕಾಗಿ ಜಿಲ್ಲಾಧಿಕಾರಿ ಕಚೇರಿ ಹಾಗೂ ಮುದ್ದೇಬಿಹಾಳದ ತಹಶೀಲ್ದಾರ್ ಕಚೇರಿಯಲ್ಲಿ ಸ್ವೀಕೃತಿ ಕೇಂದ್ರಗಳನ್ನು ತೆರೆದಿತ್ತು. ಇದಕ್ಕೆ ಸ್ಪಂದಿಸಿರುವ ಅನೇಕರು ಸಹಾಯ ಹಸ್ತ ಚಾಚಿದ್ದಾರೆ. ಸಂಘ–ಸಂಸ್ಥೆಗಳು ನೀಡಿದ್ದ ವಸ್ತುಗಳನ್ನು ಜಿಲ್ಲಾಡಳಿತವು ಪರಿಹಾರ ಕೇಂದ್ರಗಳ ಸಂತ್ರಸ್ತರಿಗೆ ತಲುಪಿಸಿದೆ.

ನಗರದ ಜಾತಗಾರ ಮುಸ್ಲಿಂ ಜಮಾತ ಸಂಘಟನೆಯು 5 ಸಾವಿರ ರೊಟ್ಟಿ, ಶೇಂಗಾ ಹಿಂಡಿ (ಚಟ್ನಿ), 10 ಚೀಲ ಚುರುಮುರಿ ಚೂಡಾ, ಬಿಸ್ಕೆಟ್, ಜಲನಗರದ ಜೈ ಸಂತೋಷಿ ಮಾತಾ ದೇವಸ್ಥಾನ ಸಮಿತಿಯು 1 ಕ್ವಿಂಟಲ್ ಅಕ್ಕಿ, ರವಾ, ನೀರಿನ ಬಾಟಲ್, ಜೀರಗಿ, ಸಾಸಿವೆ, ಅರಿಶಿಣ, ತುಪ್ಪ, ಮಸಾಲ ಖಾರ ಕೊಟ್ಟಿದೆ.

ADVERTISEMENT

ರೋಟರಿ ಕ್ಲಬ್ ಅಧ್ಯಕ್ಷ ಡಾ.ವಿಶ್ವನಾಥ ಸಿದ್ಧಾಂತಿ ಅವರು ಟೂತ್‌ಪೇಸ್ಟ್, ಟೂತ್‌ಬ್ರಶ್, ಜಿಲ್ಲಾ ಮಾಜಿ ಸೈನಿಕರ ಕಲ್ಯಾಣ ಸಂಘವು ರವಾ, ಅಕ್ಕಿ ನೀಡಿದೆ.

ಕುಮತಬಿನ್‌ ದರಬಾರ ಬಿಸಿಎ ಕಾಲೇಜು ರೊಟ್ಟಿ, ಅಕ್ಕಿ, ಶೇಂಗಾ ಹಿಂಡಿ, ಬಿಸ್ಕೆಟ್ ಪ್ಯಾಕೆಟ್, ಹಾಲಿನ ಪೌಡರ್ ಕೊಟ್ಟಿದೆ.

ಅಕ್ಕ ಮಹಾದೇವಿ ದೇವೂರ ಅವರು ಸಕ್ಕರೆ, ಅಕ್ಕಿ, ಚಹಾಪುಡಿ, ಟೂತ್‌ಬ್ರಶ್, ಬಿಸ್ಕೆಟ್, ಸೀರೆ, ಸುರೇಶ ವಾಲಿ ಅವರು ಸೀರೆ, ಅಂಗಿ, ಆದರ್ಶ ನಗರದ ರವಮಂದಿರ ಸೇನಾ ಸಮಿತಿಯು 80 ಸೀರೆ, 1.25 ಕ್ವಿಂಟಲ್ ಅಕ್ಕಿ, 3 ಚೀಲ ಚೂಡಾ, ಬಿಸ್ಕೆಟ್, ಬೂಂದಿ, ಉಪ್ಪಿನಕಾಯಿ, ಸಕ್ಕರೆ, ಚಹಾಪುಡಿ, ಸಾಬೂನು, ಬ್ರಶ್, ಪೇಸ್ಟ್, ಹಾಲು, ನೀರಿನ ಬಾಟಲ್, ಟವೆಲ್‌, ನವೀನ ಶರಣಪ್ಪ ಪಡಗಾನೂರ ಅವರು 25 ಕೆ.ಜಿ ಅಕ್ಕಿ ಕೊಟ್ಟಿದ್ದಾರೆ.

‘ನೆರವು ಸ್ವೀಕೃತಿ ಕೇಂದ್ರಗಳಿಗಿಂತ ನೇರವಾಗಿ ಪರಿಹಾರ ಕೇಂದ್ರಗಳಿಗೆ ತೆರಳಿ ನೆರವು ನೀಡಿದವರ ಸಂಖ್ಯೆ ಹೆಚ್ಚಾಗಿದೆ. ಪರಿಸ್ಥಿತಿ ಅರಿತ ಸಾರ್ವಜನಿಕರು, ಸಂಘ–ಸಂಸ್ಥೆಗಳು ಪರಿಹಾರ ಕೇಂದ್ರಗಳಿಗೆ ತೆರಳಿ ಬ್ಲಾಂಕೆಟ್, ಬೆಡ್‌ಶೀಟ್, ಚಾಪೆ, ಸೀರೆ, ಟವೆಲ್, ಪಂಚೆ, ನೀರಿನ ಬಾಟಲ್‌, ರೊಟ್ಟಿ, ಅಕ್ಕಿ, ರವಾ ಸೇರಿ ಅಗತ್ಯ ವಸ್ತುಗಳನ್ನು ಸಂತ್ರಸ್ತರಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ’ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.