ADVERTISEMENT

ಅಕ್ಕಮಹಾದೇವಿ ಮಹಿಳಾ ವಿವಿ: ಸುಲಭದಲ್ಲಿ ಕೈಗೆಟಕುತ್ತಿದೆ ಉನ್ನತ ಶಿಕ್ಷಣ

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ

ಬಸವರಾಜ ಸಂಪಳ್ಳಿ
Published 10 ಜೂನ್ 2025, 4:12 IST
Last Updated 10 ಜೂನ್ 2025, 4:12 IST
<div class="paragraphs"><p>ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ- ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ</p></div>

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ- ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ

   

ವಿಜಯಪುರ: ಮಹಿಳೆಯರಿಗೆ ಉನ್ನತ ಶಿಕ್ಷಣದ ಅವಕಾಶಗಳ ಹೆಬ್ಬಾಗಿಲನ್ನು ತೆರೆದಿರುವ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಮಹಿಳಾ ಸಬಲೀಕರಣಕ್ಕಾಗಿ ಹತ್ತು ಹಲವು ವಿನೂತನ ಶೈಕ್ಷಣಿಕ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುತ್ತಿದೆ.

ಮಹಿಳೆಯರ ಜ್ಞಾನ ಸಂಪಾದನೆ, ಸಂಸ್ಕೃತಿ, ಸಂಪನ್ನತೆಯನ್ನು ಹೆಚ್ಚಿಸಲು ನಿರಂತರವಾಗಿ ತುಡಿಯುತ್ತಿದೆ. ಅಷ್ಟೇ ಅಲ್ಲ ಗ್ರಾಮೀಣ ಪ್ರದೇಶದ ಮಹಿಳೆಯರ ಆರ್ಥಿಕ, ಸಾಮಾಜಿಕ ಉನ್ನತಿಗೂ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸುತ್ತಿದೆ. 

ADVERTISEMENT

ಉತ್ತರ ಕರ್ನಾಟಕ ಭಾಗದ ಮಹಿಳೆಯರ ಅಭಿವೃದ್ಧಿ, ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಪದವಿ, ಸ್ನಾತಕೋತ್ತರ ಪದವಿ ಸೇರಿದಂತೆ ಉನ್ನತ ಶಿಕ್ಷಣವನ್ನು ಕೈಗೆಟುವಂತೆ ಮಾಡುತ್ತಿದೆ.

ಮಹಿಳಾ ವಿಶ್ವವಿದ್ಯಾಲಯವು ಕಲಾ, ವಾಣಿಜ್ಯ, ಸಮಾಜ ವಿಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ವ್ಯವಹಾರಿಕ ಆಡಳಿತ, ವಿನ್ಯಾಸ ತಂತ್ರಜ್ಞಾನ, ಗೃಹ ವಿಜ್ಞಾನ, ದೈಹಿಕ ಶಿಕ್ಷಣ, ಸಮಾಜ ಕಾರ್ಯ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಮಹಿಳಾ ಅಧ್ಯಯನ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಸಮಾಜ ಕಾರ್ಯ, ಇತಿಹಾಸ, ರಾಜ್ಯಶಾಸ್ತ್ರ, ಬಯೋ ಇನ್ಫೋರ್ಮ್ಯಾಟಿಕ್ಸ್, ಬಯೋಟೆಕ್ನಾಲಜಿ, ಔಷಧೀಯ ರಸಾಯನಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್, ಆಹಾರ ಸಂಸ್ಕರಣೆ ಮತ್ತು ಪೋಷಣೆ, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ವಾಣಿಜ್ಯ ಮತ್ತು ನಿರ್ವಹಣಾ ಅಧ್ಯಯನ ವಿಭಾಗ, ವಾಣಿಜ್ಯ ಮತ್ತು ನಿರ್ವಹಣೆ, ಶಿಕ್ಷಣ ವಿಭಾಗಗಳಡಿಯಲ್ಲಿ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಮತ್ತು ಸರ್ಟಿಫಿಕೆಟ್ ಕೋರ್ಸುಗಳನ್ನು ನೀಡುತ್ತಿದೆ.

ಅತ್ಯಾಧುನಿಕ ಉಪಕರಣಗಳನ್ನು ಹೊಂದಿರುವ ಪ್ರಯೋಗಾಲಯಗಳು, ಕಂಪ್ಯೂಟರ್ ಲ್ಯಾಬ್ ಮತ್ತು ಗ್ರಂಥಾಲಯದ ಸಂಶೋಧನಾ ಸೌಲಭ್ಯಗಳಿವೆ. 1 ಸಾವಿರಕ್ಕೂ ಅಧಿಕ ವಿದ್ಯಾರ್ಥಿನಿಯರಿಗೆ ಉಚಿತ ಹಾಸ್ಟೆಲ್‌ ವ್ಯವಸ್ಥೆ ಇದೆ.

ಮಹಿಳಾ ವಿವಿಯ ವೈಶಿಷ್ಟ್ಯ:

ವಿಶ್ವವಿದ್ಯಾಲಯದ ‘ಜ್ಞಾನಶಕ್ತಿ’ ಆವರಣದಲ್ಲಿ ಆರಂಭಿಸಲಾಗಿರುವ ‘ಕೌಶಲ’ ಮಹಿಳಾ ತಂತ್ರಜ್ಞಾನ ಪಾರ್ಕ್  ಹೊಸ ಹಾಗೂ ವಿಶಿಷ್ಟ ಪ್ರಯೋಗ. ವಿದ್ಯಾರ್ಥಿನಿಯರು ಮತ್ತು ಮಹಿಳೆಯರ ಅದರಲ್ಲಿಯೂ ವಿಶೇಷವಾಗಿ ಗ್ರ್ರಾಮೀಣ ಮಹಿಳೆಯರ ಕೌಶಲಾಭಿವೃದ್ಧಿಗಾಗಿ ಈ ಮಹಿಳಾ ತಂತ್ರಜ್ಞಾನ ಪಾರ್ಕ್ ಆರಂಭಿಸಲಾಗಿದೆ. ಇಂತಹ ತಂತ್ರಜ್ಞಾನ ಪಾರ್ಕ್‍ನ್ನು ಸ್ಥಾಪಿಸಿದ ದೇಶದ ಮೊಟ್ಟಮೊದಲ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆ ಮಹಿಳಾ ವಿಶ್ವವಿದ್ಯಾಲಯದ್ದು.

ವಿಶ್ವವಿದ್ಯಾಲಯಗಳು ಕೇವಲ ದಂತಗೋಪುರಗಳು, ಜನಸಾಮಾನ್ಯರಿಗೆ ಅಲ್ಲಿ ಪ್ರವೇಶವಿಲ್ಲ ಎಂಬ ಸಾಮಾನ್ಯ ಆರೋಪಗಳಿಗೆ ವಿರುದ್ಧವಾದ ವಾತಾವರಣ ನಿರ್ಮಾಣ ಮಾಡಿರುವ ಮಹಿಳಾ ವಿಶ್ವವಿದ್ಯಾನಿಲಯ, ವಿದ್ಯಾರ್ಥಿನಿಯರ ಜತೆಗೆ ಗ್ರಾಮೀಣ ಪ್ರದೇಶಗಳ ಮಹಿಳೆಯರಿಗೆ ವಿವಿಧ ವಿಷಯಗಳಲ್ಲಿ ತರಬೇತಿ ನೀಡುತ್ತಿದೆ.

ಪ್ರವೇಶ ಮತ್ತು ಪರೀಕ್ಷಾ ಶುಲ್ಕ ಹಾಗೂ ಕಾಲೇಜುಗಳಿಗೆ ವಿಧಿಸುವ ಸಂಲಗ್ನ ಶುಲ್ಕಗಳು ಅತ್ಯಂತ ಕಡಿಮೆಯಿವೆ. ಜ್ಞಾನ ಸಂಪಾದಿಸುವ ಆಸಕ್ತಿಯುಳ್ಳ ಮಹಿಳೆಯರು, ಉನ್ನತ ಶಿಕ್ಷಣವನ್ನು ಪಡೆಯುವ ಹಂಬಲ ಮತ್ತು ಬಲವನ್ನು ಹೊಂದಿದವರಿಗೆ  ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ವಿಶಿಷ್ಟ ರೀತಿಯ ಪಠ್ಯಕ್ರಮವನ್ನು ರೂಪಿಸಲಾಗಿದೆ. ಇಲ್ಲಿನ  ವಿದ್ಯಾರ್ಥಿನಿಯರು ತಾವು ಓದುತ್ತಿರುವ ಕೋರ್ಸ್‍ನ ವಿಷಯಗಳಲ್ಲದೇ ಇತರ ವಿಷಯಗಳಲ್ಲಿ ಒಂದೊಂದು ವಿಷಯವನ್ನು ಪ್ರತಿ ಸೆಮಿಸ್ಟರ್‌ನಲ್ಲಿ ಓದುವ ಅವಕಾಶ ಕಲ್ಪಿಸಲಾಗಿದೆ. 

ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ, ಮಹಿಳೆ ಮತ್ತು ಪಶುಸಂಗೋಪನೆ ಅಭಿವೃದ್ಧಿ ವಿಷಯವನ್ನು ಮಹಿಳಾ ಅಧ್ಯಯನ ಪಠ್ಯಕ್ರಮದಲ್ಲಿ ಸೇರ್ಪಡೆ ಮಾಡಲಾಗಿದೆ.

‘ಸ್ತ್ರೀವಾದಿ ನ್ಯಾಯಶಾಸ್ತ್ರ’ ಹಾಗೂ ‘ಮಹಿಳಾ ಆರೋಗ್ಯ’ ಪತ್ರಿಕೆಯನ್ನು ಅಧ್ಯಯನ ಮಾಡಲು ಅವಕಾಶ ಇದೆ. 

ಪ್ರಥಮ ಬಾರಿಗೆ ಮೌಲ್ಯವರ್ಧಿತ ಸರ್ಟಿಫಿಕೇಟ್, ಡಿಪ್ಲೋಮಾ/ಅಡ್ವಾನ್ಸ್ ಡಿಪ್ಲೋಮಾ ಕೋರ್ಸ್‍ಗಳ ಆರಂಭಿಸಲಾಗಿದೆ.

ಹಿಂದುಳಿದ ಪ್ರದೇಶದ ಈ ವಿದ್ಯಾರ್ಥಿನಿಯರು ವಿವಾಹ ಪೂರ್ವದಲ್ಲೇ ಸರ್ಟಿಫಿಕೇಟ್ ಮತ್ತು ಪಿಜಿ ಡಿಪ್ಲೋಮಾ ಕೋರ್ಸ್‍ಗಳನ್ನು ಓದುವ ಅವಕಾಶ ಕಲ್ಪಿಸಲಾಗಿದೆ.

ಎರಡು ವರ್ಷಗಳ ಅವಧಿಯಲ್ಲಿ ಸ್ನಾತಕೋತ್ತರ ಕೋರ್ಸ್ ಜೊತೆಗೇ ಎರಡು ಅಥವಾ ಅದಕ್ಕಿಂತ ಹೆಚ್ಚು ಕೋರ್ಸ್‍ಗಳನ್ನು ಅಧ್ಯಯನ ಮಾಡಲು ಅವಕಾಶ ಒದಗಿಸಲಾಗಿದೆ.

ಮಹಿಳಾ ಸ್ನೇಹಿ ನೆಲೆಗಳು 

ಮದುವೆ ಮತ್ತಿತರ ಅನಿವಾರ್ಯ ಕಾರಣಗಳಿಂದ ವಿದ್ಯಾಭ್ಯಾಸ ಮೊಟಕುಗೊಳಿಸಿ ನಂತರ ವಿದ್ಯಾಭ್ಯಾಸ ಮುಂದುವರೆಸಲು ಬಯಸುವ ವಿದ್ಯಾರ್ಥಿನಿಯರಿಗೆ ವಯೋಮಿತಿ ಅಥವಾ ಯಾವುದೇ ಅವಧಿಗೆ ಸೀಮಿತಗೊಳಿಸದೇ ಅವರು ಹಿಂದೆ ಗಳಿಸಿರುವ ಕ್ರೆಡಿಟ್‍ಗಳನ್ನು ಗಣನೆಗೆ ತೆಗೆದುಕೊಂಡು ವಿದ್ಯಾಭ್ಯಾಸ ಮುಂದುವರೆಸಲು ಅವಕಾಶಗಳನ್ನು ಕಲ್ಪಿಸಲಾಗಿದೆ.  ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಎಲ್ಲಾ ಮಹಿಳೆಯರಿಗೆ ಮುಕ್ತ ಅವಕಾಶ ನೀಡಿದ್ದು ಯಾವುದೇ ಮಹಿಳೆ ಗ್ರಂಥಾಲಯದ ಸದಸ್ಯತ್ವ ಪಡೆದುಕೊಳ್ಳಬಹುದು. ಮಹಿಳಾ ವಿಶ್ವವಿದ್ಯಾಲಯದ ಎನ್‍ಎಸ್‍ಎಸ್ ಕೋಶದಲ್ಲಿ ಮುಕ್ತ ಎನ್‍ಎಸ್‍ಎಸ್ ಘಟಕ ಆರಂಭಿಸಿದ್ದು ಈ ಘಟಕದಲ್ಲಿ ಯಾವುದೇ ಮಹಿಳೆ ಎನ್‍ಎಸ್‍ಎಸ್ ಸ್ವಯಂ ಸೇವಕಿಯಾಗಿ ಸೇರ್ಪಡೆಗೊಳ್ಳಬಹುದಾಗಿದೆ.

ಗುಣಾತ್ಮಕ ಶಿಕ್ಷಣ ನೀಡುವುದು ವೃತ್ತಿ ಕೌಶಲಗಳನ್ನು ಬೆಳಸುವುದರೊಂದಿಗೆ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದಲ್ಲದೇ ಬದಲಾಗುತ್ತಿರುವ ಸಾಮಾಜಿಕ ಆರ್ಥಿಕ ಅವಶ್ಯಕತೆಗಳಿಗೆ ಅನುಗುಣವಾಗಿ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ವಿದ್ಯಾರ್ಥಿನಿಯರಲ್ಲಿ ಬೆಳೆಸಲಾಗುತ್ತಿದೆ –
- ಪ್ರೊ.ಶಾಂತಾದೇವಿ ಟಿ., ಪ್ರಭಾರ ಕುಲಪತಿ ವಿಶ್ವವಿದ್ಯಾಲಯ 
ಪಿಯುಸಿ ನಂತರ ವಿದ್ಯಾರ್ಥಿನಿಯರು ಓದಲು ವಿವಿ ಕ್ಯಾಂಪಸ್‌ನಲ್ಲೇ ಪದವಿ ಓದುವ ಅವಕಾಶ ಇದೆ. ಉಚಿತ ಹಾಸ್ಟೆಲ್‌ ವ್ಯವಸ್ಥೆ ಇದೆ. ಮಹಿಳಾ ಕೇಂದ್ರಿತ ವಿಷಯ ಅಧ್ಯಯನ ಮಾಡಬಹುದು ಸುರಕ್ಷಿತ ಮುಕ್ತ ವಾತಾವರಣ ಇದೆ.
– ಪ್ರೊ.ಓಂಕಾರ ಕಾಕಡೆ ಮುಖ್ಯಸ್ಥರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.