ಸಿಂದಗಿ: ರಾಜ್ಯಮಟ್ಟದ ಶಿಕ್ಷಕ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಸಿಂದಗಿಯ ಸಾಹಿತಿ ಹ.ಮ. ಪೂಜಾರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿ ಗೌರವ ಆಮಂತ್ರಣ ನೀಡಲಾಗಿದೆ. ಈ ಸಮ್ಮೇಳನದಲ್ಲಿ ರಾಷ್ಟ್ರಮಟ್ಟದ ಶಿಕ್ಷಣ ತಜ್ಞ ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಳ್ಳುವರು ಎಂದು ಕನ್ನಡ ಸಾಹಿತ್ಯ ಪರಿಷತ್ತು ಬಾಗಲಕೋಟೆ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಹೇಳಿದರು.
ಇಲ್ಲಿಯ ಸಾಹಿತಿ ಹ.ಮ.ಪೂಜಾರ ಮನೆಯಲ್ಲಿ ಭಾನುವಾರ ನಡೆದ ಗೌರವ ಆಮಂತ್ರಣ ಸಭೆಯಲ್ಲಿ ಮಾತನಾಡಿದ ಅವರು, ಅ.12ರಂದು ಬಾಗಲಕೋಟೆಯಲ್ಲಿ ಶಿಕ್ಷಕ ಸಾಹಿತಿಗಳ ಪ್ರಥಮ ಸಮ್ಮೇಳನ ನಡೆಯಲಿದೆ ಎಂದು ತಿಳಿಸಿದರು.
ಜಾನಪದ ವಿದ್ವಾಂಸ ಎಂ.ಎಂ.ಪಡಶೆಟ್ಟಿ ಮಾತನಾಡಿ, ಬಾಗಲಕೋಟೆ-ವಿಜಯಪುರ ಆಡಳಿತಾತ್ಮಕವಾಗಿ ಭಿನ್ನ ಜಿಲ್ಲೆಗಳಾದರೂ ಭಾವನಾತ್ಮಕವಾಗಿ ಅವಳಿ ಜಿಲ್ಲೆಗಳಾಗಿವೆ. ಅಂತೆಯೇ ಬಾಗಲಕೋಟೆಯಲ್ಲಿ ನಡೆಯಲಿರುವ ಶಿಕ್ಷಕ ಸಾಹಿತಿಗಳ ಸಮ್ಮೇಳನದ ಅಧ್ಯಕ್ಷರನ್ನಾಗಿ ಹ.ಮ.ಪೂಜಾರ ಅವರನ್ನು ಆಯ್ಕೆ ಮಾಡಿರುವುದು ಅಭಿನಂದನೀಯ ಕಾರ್ಯ. ಮಕ್ಕಳ ಸಾಹಿತಿಗಳ ತವರೂರು ವಿಜಯಪುರ ಜಿಲ್ಲೆ ಎಂದು ತಿಳಿಸಿದರು.
ಮಕ್ಕಳ ಸಾಹಿತ್ಯ ಸಂಗಮ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಎ.ಆರ್. ಹೆಗ್ಗನದೊಡ್ಡಿ ಮಾತನಾಡಿ, ಹ.ಮ.ಪೂಜಾರ ಅವರು ಶಿಕ್ಷಣ ಹಾಗೂ ಸಾಹಿತ್ಯ ರಂಗದಲ್ಲಿ ಅಗಾಧ ಕೊಡುಗೆ ಸಲ್ಲಿಸಿರುವುದನ್ನು ಗುರುತಿಸಿ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಅತ್ಯಂತ ಸೂಕ್ತವಾಗಿದೆ ಎಂದರು.
ಬಾಗಲಕೋಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಾಂಡುರಂಗ ಸಣ್ಣಪ್ಪನವರ, ಸಾಹಿತಿ ಹ.ಮ.ಪೂಜಾರ ಮಾತನಾಡಿದರು.
ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಸಿದ್ರಾಮ ಶಿರೋಳ, ಶಿರೂರ ಹೋಬಳ್ಳಿ ಪರಿಷತ್ತು ಅಧ್ಯಕ್ಷ ಸಂಜಯ ನಡುವಿನಮನಿ, ಸಿಂದಗಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷ ಚನ್ನಪ್ಪ ಕತ್ತಿ, ಶಿಕ್ಷಕ ಸಾಹಿತಿಗಳಾದ ಸಾತಿಹಾಳ, ಶಿವಕುಮಾರ ಶಿವಸಿಂಪಿ, ರಾಜೂ ಕೊಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.