ADVERTISEMENT

ಹೊಸಪೇಟೆ ಟ್ರಕ್‌ ಟರ್ಮಿನಲ್‌ ಮೊದಲ ಹಂತದ ಕಾಮಗಾರಿಗೆ ₹ 35 ಕೋಟಿ: ಡಿ.ಎಸ್.ವೀರಯ್ಯ

ಡಿ.ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 8 ಜುಲೈ 2022, 9:36 IST
Last Updated 8 ಜುಲೈ 2022, 9:36 IST
   

ಹೊಸಪೇಟೆ (ವಿಜಯನಗರ): ‘ನಗರ ಹೊರವಲಯದ ಅಮರಾವತಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಟ್ರಕ್‌ ಟರ್ಮಿನಲ್‌ ಮೊದಲ ಹಂತದ ಕಾಮಗಾರಿಯನ್ನು ₹ 35 ಕೋಟಿಯಲ್ಲಿ ಕೈಗೆತ್ತಿಕೊಳ್ಳಲಾಗುವುದು’ ಎಂದು ಡಿ.ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ಅಧ್ಯಕ್ಷ ಡಿ.ಎಸ್.ವೀರಯ್ಯ ತಿಳಿಸಿದರು.

ಶುಕ್ರವಾರ ಇಲ್ಲಿನ ಟ್ರಕ್‌ ಟರ್ಮಿನಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟ್ರಕ್‌ ಟರ್ಮಿನಲ್‌ಗೆ ಒಟ್ಟು 37 ಎಕರೆ ಜಾಗ ಇದೆ. ಮೊದಲ ಹಂತದಲ್ಲಿ 18 ಎಕರೆಯಲ್ಲಿ ನಿರ್ಮಿಸಲಾಗುವುದು. ಲಾರಿಗಳ ಪಾರ್ಕಿಂಗ್‌, ಶೌಚಾಲಯ, ಸ್ನಾನಗೃಹ, ಪೆಟ್ರೋಲ್‌ ಬಂಕ್‌, ಪೊಲೀಸ್‌ ಠಾಣೆ, ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಇತರೆ ಸೌಕರ್ಯ ಕಲ್ಪಿಸಲಾಗುವುದು. ಏಕಕಾಲಕ್ಕೆ 300 ವಾಹನಗಳನ್ನು ನಿಲ್ಲಿಸಬಹುದು. ಎರಡನೇ ಹಂತದಲ್ಲಿ ಹತ್ತು ಗೋದಾಮು ನಿರ್ಮಿಸಲಾಗುವುದು ಎಂದು ಮಾಹಿತಿ ಹಂಚಿಕೊಂಡರು.

ಬೆಂಗಳೂರಿನ ಎಸ್‌.ಆರ್‌. ಕನ್ಸ್‌ಟ್ರಕ್ಶನ್ಷ್‌ನವರಿಗೆ ಗುತ್ತಿಗೆ ನೀಡಲಾಗಿದೆ. ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಲಾಗಿದೆ. ಹೊಸಪೇಟೆ ಟ್ರಕ್‌ ಟರ್ಮಿನಲ್‌ಗೆ ಹೊಂದಿಕೊಂಡಂತೆ ಹೆದ್ದಾರಿ ಬದಿಯಲ್ಲಿ ಪ್ರಯಾಣಿಕರಿಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿ.ಪಿ.ಪಿ) ಮೂಲಸೌಕರ್ಯ (ವೇ ಸೈಡ್‌ ಅಮೆನಿಟೀಸ್‌) ಕಲ್ಪಿಸಲಾಗುವುದು ಎಂದರು.

ADVERTISEMENT

ರಾಜ್ಯದ ಚಿತ್ರದುರ್ಗ ಬೈಪಾಸ್‌, ಹೊಸಪೇಟೆ–ವಿಜಯಪುರ, ಬೀದರ್‌ ಜಿಲ್ಲೆಯ ಹುಮನಾಬಾದ್‌, ಹಾಸನ–ಮಂಗಳೂರು, ಹುಬ್ಬಳ್ಳಿ–ಹಾವೇರಿ, ಬಾಗಲಕೋಟೆ–ರಾಯಚೂರು, ನೆಲಮಂಗಲ–ಕುಣಿಗಲ್‌, ಮಂಗಳೂರು–ಶಿವಮೊಗ್ಗ, ಮಂಗಳೂರು–ಉಡುಪಿ ಜಿಲ್ಲೆಗಳ ಹೆದ್ದಾರಿಯಲ್ಲಿ ಈ ಸೌಕರ್ಯ ಕಲ್ಪಿಸಲು ನಿರ್ಧರಿಸಲಾಗಿದೆ. ಸ್ಥಳ ಗುರುತಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದ ವಿಜಯಪುರ, ಮಂಗಳೂರು, ಕೋಲಾರ, ಶಿವಮೊಗ್ಗ, ಹಿರಿಯೂರು, ಬೀದರ್‌, ಕಲಬುರಗಿ, ಚಿತ್ರದುರ್ಗ, ಚಾಮರಾಜನಗರಗಳಲ್ಲಿ ಟ್ರಕ್‌ ಟರ್ಮಿನಲ್‌ ನಿರ್ಮಿಸಲು ತೀರ್ಮಾನಿಸಲಾಗಿದೆ. ಸರ್ಕಾರಿ ಜಮೀನು ಗುರುತಿಸಿ ಹಂಚಿಕೆ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಹೇಳಿದರು.

ಲಾರಿ ಮಾಲೀಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಣ್ಣ ಭೂಪಾಳ್‌, ಲಾರಿ ಟ್ರಾನ್ಸ್‌ಪೋರ್ಟ್‌ ಅಸೋಸಿಯೇಶನ್‌ ಅಧ್ಯಕ್ಷ ರಮೇಶಕುಮಾರ್‌, ಅಲ್ಲಾಭಕ್ಷಿ, ಸಯ್ಯದ್‌ ನಾಸೀರ್‌, ವೆಂಕೋಬಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.