ADVERTISEMENT

ವಿದ್ಯೆಯಷ್ಟೇ ವಿನಯವೂ ಮುಖ್ಯ: ನ್ಯಾ.ವೆಂಕಣ್ಣ ಹೊಸಮನಿ

ಹೆಣ್ಣು ಮಕ್ಕಳ ಉತ್ತೇಜನಕ್ಕಾಗಿ ಪ್ರೇರಣಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 14:36 IST
Last Updated 3 ಸೆಪ್ಟೆಂಬರ್ 2022, 14:36 IST
ವಿಜಯಪುರ ಸರ್ಕಾರಿ ಬಾಲಕಿಯರ ಬಾಲ ಮಂದಿರದಲ್ಲಿ ಆಯೋಜಿಸಿದ್ದ ಪ್ರೇರಣಾ ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವೆಂಕಣ್ಣ ಬಿ. ಹೊಸಮನಿ ಉದ್ಘಾಟಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಕೆ.ಚವ್ಹಾಣ್ ಇದ್ದಾರೆ
ವಿಜಯಪುರ ಸರ್ಕಾರಿ ಬಾಲಕಿಯರ ಬಾಲ ಮಂದಿರದಲ್ಲಿ ಆಯೋಜಿಸಿದ್ದ ಪ್ರೇರಣಾ ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವೆಂಕಣ್ಣ ಬಿ. ಹೊಸಮನಿ ಉದ್ಘಾಟಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಕೆ.ಚವ್ಹಾಣ್ ಇದ್ದಾರೆ   

ವಿಜಯಪುರ:ವ್ಯಕ್ತಿಗೆ ವಿದ್ಯೆಯಷ್ಟೇ ವಿನಯವೂ ಮುಖ್ಯ. ವಿದ್ಯಾರ್ಥಿಗಳು ವಿನಯಶೀಲರಾಗಿರಬೇಕು. ಉತ್ತಮ ಚಾರಿತ್ರ್ಯ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವೆಂಕಣ್ಣ ಬಿ. ಹೊಸಮನಿ ಸಲಹೆ ಮಾಡಿದರು.

ಸರ್ಕಾರಿ ಬಾಲಕಿಯರ ಬಾಲ ಮಂದಿರದಲ್ಲಿಜಿಲ್ಲಾ ಕಾನೂನು ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ‘ಮಗಳನ್ನು ರಕ್ಷಿಸಿ, ಮಗಳನ್ನು ಓದಿಸಿ’ ಕಾರ್ಯಕ್ರಮದಡಿ ಆಯೋಜಿಸಿದ್ದ ಪ್ರೇರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತಮ್ಮದೇ ಶಕ್ತಿ, ಸಾಮಾರ್ಥ್ಯದಿಂದಾಗಿ ಮಹಿಳೆಯರು ಈಗ ಪ್ರತಿಯೊಂದು ಕ್ಷೇತ್ರದಲ್ಲೂ ಮುನ್ನುಗ್ಗುತ್ತಿದ್ದಾರೆ. ಇದು ಅಕ್ಷರಶಃ ಬದಲಾವಣೆಯ ಸಂಕೇತವಾಗಿದೆ. ಒಂದು ಕಾಲದಲ್ಲಿ ನಾಲ್ಕು ಗೋಡೆಗೆ ಸೀಮಿತವಾಗಿದ್ದ ಮಹಿಳೆಯರು ಇಂದು ಪ್ರಗತಿಪಥದತ್ತ ಸಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಸಮಾಜಮುಖಿ ಆಲೋಚನೆ ಮತ್ತು ಸತತ ಪರಿಶ್ರಮದಿಂದ ಇನ್ನೂ ಉನ್ನತ ಮಟ್ಟದಲ್ಲಿ ಬದಲಾವಣೆ ಸಾಧ್ಯವಿದೆ ಎಂದು ತಿಳಿಸಿದರು.

ADVERTISEMENT

ವಿದ್ಯಾರ್ಥಿನಿಯರು ಓದಿನತ್ತ ಹೆಚ್ಚಿನ ಒಲವು ತೋರಬೇಕು. ಸಾಹಿತ್ಯ ಮತ್ತು ದಿನಪತ್ರಿಕೆಗಳ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಯಲ್ಲಮ್ಮ ಪಡೇಸೂರು ಮಾತನಾಡಿ, ಉತ್ತಮ ಅಧಿಕಾರಿಯಾಗಬೇಕು ಎನ್ನುವ ಕನಸು ನನಸಾಗಿಸಬೇಕಾದರೆ ಕೇವಲ ಶಿಕ್ಷಣದಿಂದ ಮಾತ್ರ ಸಾಧ್ಯವಿದೆ. ಸಮಾಜದಲ್ಲಿರುವ ಲಿಂಗತಾರತಮ್ಯವನ್ನು ಶಿಕ್ಷಣದಿಂದ ಮಾತ್ರ ಹೊಡೆದೋಡಿಸಬಹುದಾಗಿದೆ ಎಂದರು.

ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ರೇಣುಕಾ ದಿನ್ನಿ ಮಾತನಾಡಿ, ವಿದ್ಯಾರ್ಥಿನಿಯರು ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಏನೇ ಸಮಸ್ಯೆ ಎದುರಾದರು ಸಹ ಕುಗ್ಗದೇ, ಅಡ್ಡಿ-ಆತಂಕಗಳನ್ನು ಮೆಟ್ಟಿ ನಿಂತು ಜೀವನದಲ್ಲಿ ಏನಾದರು ಉತ್ತಮ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಕೆ.ಚವ್ಹಾಣ್ ಮಾತನಾಡಿ, ಜೀವನದಲ್ಲಿ ಒಳ್ಳೆಯ ವಿದ್ಯಾವಂತರಾಗಿ, ಪ್ರತಿಭಾವಂತ, ಜವಾಬ್ದಾರಿಯುತ ವ್ಯಕ್ತಿಯಾಗಿ ಹೊರಹೊಮ್ಮಬೇಕು ಎಂದು ಸಲಹೆ ಮಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶಿಲ್ಪಾ ನಾಯಕ ಅವರು ಮಗಳನ್ನು ರಕ್ಷಿಸಿ ಮಗಳನ್ನು ಓದಿಸಿ ಕಾರ್ಯಕ್ರಮದ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು.

ಜಿಲ್ಲಾ ಸಂಯೋಜಕರಾದ ಭಾರತಿ ಪಾಟೀಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಗೀತಾ ಗುತ್ತರಗಿಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.