ADVERTISEMENT

ಡೋಣಿ ನದಿ ವೀಕ್ಷಿಸಿದ ಜಲತಜ್ಞ ರಾಜೇಂದ್ರಸಿಂಗ್

ಶಾಸಕ ಎಂ.ಬಿ.ಪಾಟೀಲ, ಜಿಲ್ಲಾಧಿಕಾರಿ ವಿಜಯಮಹಾಂತೇಶ್‌ ಜೊತೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 26 ಮೇ 2022, 12:55 IST
Last Updated 26 ಮೇ 2022, 12:55 IST
ಡೋಣಿ ನದಿ ಪ್ರವಾಹಕ್ಕೆ ಕಾರಣವಾಗಿರುವ ಅಂಶಗಳ ಕುರಿತು ಜಲತಜ್ಞ ಡಾ.ರಾಜೇಂದ್ರಸಿಂಗ್ ಅವರು ಗುರುವಾರ ಜಿಲ್ಲಾಧಿಕಾರಿ ವಿಜಯಮಹಾಂತೇಶ್‌ ಅವರೊಂದಿಗೆ ಮಾತುಕತೆ ನಡೆಸಿದರು. ಜಲ ಬಿರಾದರಿ ಸಂಘಟನೆಯ ಪೀಟರ್ ಅಲೆಕ್ಸಾಂಡರ್, ಡಾ.ಮಹಾಂತೇಶ ಬಿರಾದಾರ ಇದ್ದರು
ಡೋಣಿ ನದಿ ಪ್ರವಾಹಕ್ಕೆ ಕಾರಣವಾಗಿರುವ ಅಂಶಗಳ ಕುರಿತು ಜಲತಜ್ಞ ಡಾ.ರಾಜೇಂದ್ರಸಿಂಗ್ ಅವರು ಗುರುವಾರ ಜಿಲ್ಲಾಧಿಕಾರಿ ವಿಜಯಮಹಾಂತೇಶ್‌ ಅವರೊಂದಿಗೆ ಮಾತುಕತೆ ನಡೆಸಿದರು. ಜಲ ಬಿರಾದರಿ ಸಂಘಟನೆಯ ಪೀಟರ್ ಅಲೆಕ್ಸಾಂಡರ್, ಡಾ.ಮಹಾಂತೇಶ ಬಿರಾದಾರ ಇದ್ದರು   

ವಿಜಯಪುರ:ಡೋಣಿ ನದಿ ಹೂಳು ತುಂಬಿ ನದಿ ಪಥ ಬದಲಿಸಿ, ಪ್ರವಾಹ ಉಂಟಾಗಿ ರೈತರ ಜಮೀನಿಗೆ ಹಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ಜಲತಜ್ಞ ಡಾ.ರಾಜೇಂದ್ರಸಿಂಗ್ ಅವರು ಗುರುವಾರ ಹೊನಗನಹಳ್ಳಿಯ ಹತ್ತಿರ ಡೋಣಿ ನದಿ ಪರಿಶೀಲಿಸಿದರು.

ಜಲ ಬಿರಾದರಿ ಸಂಘಟನೆ ಆಹ್ವಾನದ ಮೇರೆಗೆ ಆಗಮಿಸಿದ್ದ ಅವರು,ಡೋಣಿ ನದಿ ಪ್ರವಾಹಕ್ಕೆ ಕಾರಣವಾಗಿರುವ ಅಂಶಗಳ ಕುರಿತು ಶಾಸಕ ಎಂ.ಬಿ.ಪಾಟೀಲ ಹಾಗೂ ಜಿಲ್ಲಾಧಿಕಾರಿ ವಿಜಯಮಹಾಂತೇಶ್‌ ಅವರೊಂದಿಗೆ ಮಾತುಕತೆ ನಡೆಸಿದರು.

ಅವೈಜ್ಞಾನಿಕವಾಗಿ ನಿರ್ಮಿಸಿರುವ ಸೇತುವೆಗಳು (ಸೇತುವೆಗಳನ್ನು ನಿರ್ಮಾಣ ಸಂದರ್ಭದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ ರಸ್ತೆಗಳು ಹಾಗೆಯೇ ಇರುವುದು) ನದಿಯಲ್ಲಿ ಬಳ್ಳಾರಿ ಜಾಲಿ ಬೆಳೆದಿರುವುದು ಪ್ರವಾಹಕ್ಕೆ ಮುಖ್ಯ ಕಾರಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

ನದಿ ವ್ಯಾಪ್ತಿಯ ಗ್ರಾಮ ಪಂಚಾಯ್ತಿಗಳು ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿ ಹೂಳು ತೆಗೆದು, ಸ್ವಚ್ಛಗೊಳಿಸಲು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಮಾತನಾಡಿ, ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಕೇಂದ್ರ ಸರ್ಕಾರ ಸ್ವಾಮ್ಯದ ವ್ಯಾಪಕೋ ಸಂಸ್ಥೆ ಡೋಣಿ ನದಿಯನ್ನು ಸರ್ವೇ ಮಾಡಿ, ಸವಿವರ ವರದಿ ಪಡೆಯಲಾಗಿತ್ತು.ಅದರನ್ವಯ ಅಪಾರ ಮೊತ್ತದ ಯೋಜನೆಯ ಪ್ರಸ್ತಾವನೆ ವೆಚ್ಚದಾಯಕವಾಗಿರುವ ಕಾರಣ ಪ್ರವಾಹ ನಿಯಂತ್ರಣ ಯೋಜನೆಯಡಿ ಹಣ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಕೇಳಲಾಗಿತ್ತು. ಪ್ರಸ್ತಾವನೆ ಕೇಂದ್ರದಲ್ಲಿಯೇ ಬಾಕಿ ಉಳಿದಿದೆ. ಹೊಸ ದರಪಟ್ಟಿಯ ಅನುಸಾರ ಇನ್ನೊಂದು ಪ್ರಸ್ತಾವನೆಯನ್ನು ಜಲತಜ್ಞ ಡಾ.ವಿ.ಪಿ.ಹುಗ್ಗಿ ಅವರ ನೇತೃತ್ವದಲ್ಲಿ ತಯಾರಿಸಿ ನೀಡಲಾಗುವುದು. ತಾವೇ ನೇತೃತ್ವ ವಹಿಸಿ, ಕೇಂದ್ರ ಸರ್ಕಾರದ ಮನ ಒಲಿಸಬೇಕು. ತಮಗೆ ಪಕ್ಷಾತೀತವಾಗಿ ಎಲ್ಲ ಸರ್ಕಾರಗಳು ಮನ್ನಣೆ ನೀಡುವರು ಎಂದು ಹೇಳಿದರು.

ಜಲ ಬಿರಾದರಿ ಸಂಘಟನೆಯ ಪೀಟರ್ ಅಲೆಕ್ಸಾಂಡರ್, ಪರಿಸರ ತಜ್ಞ ಎನ್.ಡಿ.ಪಾಟೀಲ ಡೊಮನಾಳ, ಡಾ.ವಿ.ಪಿ.ಹುಗ್ಗಿ, ಡಾ.ಮಹಾಂತೇಶ ಬಿರಾದಾರ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.