ADVERTISEMENT

ದಲಿತನಾದರೂ ದಲಿತರನ್ನೇ ಬದಿಗಿಟ್ಟಿದ್ದೇನೆ: ಜಿಗಜಿಣಗಿ

ವಿಜಯಪುರದ ಗಣೇಶ ನಗರ ಬಳಿ ₹ 70 ಕೋಟಿ ಅನುದಾನದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 13:36 IST
Last Updated 1 ಜುಲೈ 2025, 13:36 IST
ವಿಜಯಪುರದ ಗಣೇಶ ನಗರ ಕ್ರಾಸ್ ಬಳಿ ₹70 ಕೋಟಿ ಅನುದಾನದಲ್ಲಿ ಬೆಂಗಳೂರು ರಸ್ತೆಗೆ ಫ್ಲೈ ಓವರ್‌ ನಿರ್ಮಾಣಕ್ಕೆ ಮಂಗಳವಾರ ಸಂಸದ ರಮೇಶ ಜಿಗಜಿಣಗಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು 
ವಿಜಯಪುರದ ಗಣೇಶ ನಗರ ಕ್ರಾಸ್ ಬಳಿ ₹70 ಕೋಟಿ ಅನುದಾನದಲ್ಲಿ ಬೆಂಗಳೂರು ರಸ್ತೆಗೆ ಫ್ಲೈ ಓವರ್‌ ನಿರ್ಮಾಣಕ್ಕೆ ಮಂಗಳವಾರ ಸಂಸದ ರಮೇಶ ಜಿಗಜಿಣಗಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು    

ವಿಜಯಪುರ: ‘ಒಂದು ಸಮಾಜ, ಒಬ್ಬ ವ್ಯಕ್ತಿ ಹಿಡಿದುಕೊಂಡು ರಾಜಕೀಯ ಮಾಡಿದವ ನಾನಲ್ಲ, ಎಲ್ಲ‌ ಸಮಾಜಗಳನ್ನು ಇಟ್ಟುಕೊಂಡು ರಾಜಕಾರಣ ಮಾಡಿದ್ದೇನೆ. ನಾನೊಬ್ಬ ದಲಿತನಾದರೂ ನನ್ನ‌ ಸಮಾಜವನ್ನೇ ಬದಿಗಿಟ್ಟಿದ್ದೇನೆ’ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ನಗರದ ಇಬ್ರಾಹಿಂಪುರ ಸಮೀಪದ ಗಣೇಶ ನಗರ ಕ್ರಾಸ್ ಬಳಿ ₹ 70 ಕೋಟಿ ಅನುದಾನದಲ್ಲಿ ಅಪ್ರೋಚ್ ಮತ್ತು ಸ್ಲಿಪ್ ರಸ್ತೆಯೊಂದಿಗೆ ಆರು ಲೇನ್ ಫ್ಲೈ ಓವರ್‌ ನಿರ್ಮಾಣಕ್ಕೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ‘18 ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ‌‌ ನೀಡಿದ್ದೇನೆ’ ಎಂದರು.

‘ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ವಿಜಯಪುರ ಲೋಕಸಭಾ ಕ್ಷೇತ್ರಕ್ಕೆ ನಾನು ಬಂದ ಬಳಿಕ ಜಿಲ್ಲೆಯಲ್ಲಿ ಒಂದೇ ಒಂದು ಹೆದ್ದಾರಿ ಇದ್ದರೂ ಸರಿಯಾಗಿರಲಿಲ್ಲ. ಹಿಂದಿನ ಯಾವೊಬ್ಬ ಸಂಸದರೂ ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ನೀಡಿರಲಿಲ್ಲ. ನನ್ನ ಚಪ್ಪಲಿ ಹರಿಯುವವರೆಗೂ ಇಲಾಖೆಗಳಿಗೆ ಅಲೆದಾಡಿ ಸರ್ಕಾರಕ್ಕೆ ಪತ್ರ ಬರೆದು, ಸಚಿವರ ಗಮನ ಸೆಳೆದು ಆರು ರಾಷ್ಟ್ರೀಯ ಹೆದ್ದಾರಿ ಮಾಡಿಸಿರುವೆ’ ಎಂದರು.

ADVERTISEMENT

ವಿಜಯಪುರ ನಗರದ ಸುತ್ತ 47 ಕಿ.ಮೀ. ಔಟರ್‌ ರಿಂಗ್ ರೋಡ್ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿದೆ. ಶೀಘ್ರದಲ್ಲೇ ಬಾಗಲಕೋಟೆ ರಸ್ತೆಯ ವಜ್ರ ಹನುಮಾನ ರೈಲ್ವೆ ಗೇಟ್ ಬಳಿ ಅಂಡರ್ ಪಾಸ್, ಸಂತೋಷ ಮಾತಾ ಗುಡಿ ಬಳಿ ಅಂಡರ್ ಪಾಸ್ ನಿರ್ಮಾಣಕ್ಕೆ ಪ್ರಯತ್ನ ನಡೆದಿದೆ ಎಂದರು.

ಬೆಂಗಳೂರು ಟೋಲ್ ನಾಕಾ ಸಮಸ್ಯೆ ಸರಿಪಡಿಸುವ ಕೆಲಸ ಶೀಘ್ರ ಮಾಡುತ್ತೇನೆ. ಕೇಂದ್ರ ಸರ್ಕಾರದ ಯಾವುದೇ ಕೆಲಸ ಇದ್ದರೂ ನನ್ನ ಗಮನಕ್ಕೆ ತನ್ನಿ ನಾನು ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.

‘ವಿಜಯಪುರ ರೈಲು ನಿಲ್ದಾಣವನ್ನು ₹110 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಲಾಗುತ್ತಿದೆ. ₹4,500 ಕೋಟಿ ವೆಚ್ಚದಲ್ಲಿ ಜಿಲ್ಲೆಯಲ್ಲಿ ಐದು ಹೆದ್ದಾರಿಗಳನ್ನು ಅಭಿವೃದ್ಧಿ ಮಾಡಲಾಗಿದೆ‌ ಎಂದರು.

ಕಳೆದ 65 ವರ್ಷ ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಅಭಿವೃದ್ಧಿಗೆ ಆದ್ಯತೆ ನೀಡಲಿಲ್ಲ, ಬಡವರ ಉದ್ಧಾರ ಮಾಡುತ್ತೇವೆ ಎಂದು ಬಡವರನ್ನು ದೇಶ ಬಿಟ್ಟು ಹೋಗುವಂತೆ ಮಾಡಿದೆ ಕಾಂಗ್ರೆಸ್ ಎಂದು ಆರೋಪಿಸಿದರು.

ಭವಿಷ್ಯದಲ್ಲಿ ಎಂದೂ ಕಾಂಗ್ರೆಸ್‌ ರಾಜ್ಯದಲ್ಲಾಗಲಿ, ದೇಶದಲ್ಲಾಗಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಅರುಣ ಶಹಾಪೂರ ಮಾತನಾಡಿ, ‘ವಿರೋಧ ಪಕ್ಷದವರು ಜಿಗಜಿಣಗಿ ಅವರನ್ನು ಆರ್‌ ಒಬಿ ಸಂಸದ ಎಂದು ಟೀಕಿಸುವ ಬದಲು ಅವರನ್ನು ಮೀರಿಸುವಂತೆ ಜಿಲ್ಲೆಗೆ ಅನುದಾನ ತಂದು ಅಭಿವೃದ್ಧಿ ಕಾರ್ಯ ಮಾಡಿ ತೋರಿಸಲಿ’ ಎಂದು ಸವಾಲು ಹಾಕಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಜನಸಾಮಾನ್ಯರ ಜೊತೆ ಬೆರೆಯುವ ಗುಣ ಇರುವ    ಕಾರಣಕ್ಕೆ ಜಿಗಜಿಣಗಿ ಅವರು ಜನಪ್ರಿಯ ಆಗಿದ್ದಾರೆ. ಸದಾ ಕಾಲ ಒಂದಿಲ್ಲ ಒಂದು ಅಧಿಕಾರದಲ್ಲಿ ಇದ್ದಾರೆ ಎಂದರು.

ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಮಾಜಿ ಶಾಸಕ ರಮೇಶ ಭೂಸನೂರ, ಮುಖಂಡರಾದ ವಿಜುಗೌಡ ಪಾಟೀಲ, ಆರ್.ಎಸ್.ಪಾಟೀಲ ಕೂಚಬಾಳ, ರವಿಕಾಂತ ಬಗಲಿ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಸಪ್ನಾ ಕಣಮುಚನಾಳ, ಉಮೇಶ ಕೋಳಕೂರ ಇದ್ದರು.

18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ₹110 ಕೋಟಿ ವೆಚ್ಚದಲ್ಲಿ ವಿಜಯಪುರ ರೈಲು ನಿಲ್ದಾಣ ನವೀಕರಣ ₹4,500 ಕೋಟಿ ವೆಚ್ಚದಲ್ಲಿ ಜಿಲ್ಲೆಯಲ್ಲಿ 5 ಹೆದ್ದಾರಿ ಅಭಿವೃದ್ಧಿ
ಸದ್ದು ಗದ್ದಲ ಇಲ್ಲದೇ ಕೆಲಸ ಮಾಡುವ ವ್ಯಕ್ತಿ ನಾನು ಪ್ರಚಾರ ಪ್ರಿಯ ಅಲ್ಲ ನಾನು ಮಾಡಿರುವ ಕೆಲಸಕ್ಕೆ ನಾಮಫಲಕ ಫೋಟೊ ಹಾಕಿಕೊಳ್ಳುವ ಜಾಯಮಾನ ನನ್ನದಲ್ಲ ಜನರ ಕೆಲಸ ಮಾಡುವಲ್ಲಿ ತೃಪ್ತಿ ಇದೆ‌
ರಮೇಶ ಜಿಗಜಿಣಗಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.