ADVERTISEMENT

ವಿಜಯಪುರ| ಇಫ್ತಾರ್‌ ಕೂಟ ಪ್ರೀತಿಯ ಸಂಕೇತ: ನಡಹಳ್ಳಿ

ಮುದ್ದೇಬಿಹಾಳದಲ್ಲಿ ನಡೆದ ಇಫ್ತಾರ್‌ ಕೂಟದಲ್ಲಿ ಸಾವಿರಾರು ಮುಸ್ಲಿಮರು ಭಾಗಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2023, 16:18 IST
Last Updated 26 ಮಾರ್ಚ್ 2023, 16:18 IST
ಮುದ್ದೇಬಿಹಾಳ ಪಟ್ಟಣದಲ್ಲಿ ಭಾನುವಾರ ನಡೆದ ಇಫ್ತಾರ್‌ ಕೂಟದಲ್ಲಿ ರೋಜದಾರರಿಗೆ ಶಾಸಕ ಎ.ಎಸ್‌.‍ಪಾಟೀಲ ನಡಹಳ್ಳಿ, ಉದ್ಯಮಿ ಭರತ್ ಊಟ ಬಡಿಸಿದರು 
ಮುದ್ದೇಬಿಹಾಳ ಪಟ್ಟಣದಲ್ಲಿ ಭಾನುವಾರ ನಡೆದ ಇಫ್ತಾರ್‌ ಕೂಟದಲ್ಲಿ ರೋಜದಾರರಿಗೆ ಶಾಸಕ ಎ.ಎಸ್‌.‍ಪಾಟೀಲ ನಡಹಳ್ಳಿ, ಉದ್ಯಮಿ ಭರತ್ ಊಟ ಬಡಿಸಿದರು    

ವಿಜಯಪುರ: ಮುದ್ದೇಬಿಹಾಳ ಪಟ್ಟಣದ ಇಂದಿರಾಗಾಂಧಿ ವೃತ್ತದ ಹತ್ತಿರ ಕೆರೆಯ ಬಳಿ ಇರುವ ಹೊಸ ಕಾಯಿಪಲ್ಲೆ ಮಾರುಕಟ್ಟೆಯಲ್ಲಿ ಭಾನುವಾರ ಪವಿತ್ರ ರಂಜಾನ್ ಮಾಸದ ಅಂಗವಾಗಿ ನಡೆದ ಇಫ್ತಾರ್‌ ಕೂಟದಲ್ಲಿ ಸಾವಿರಾರು ಜನ ಮುಸ್ಲಿಮರು ಪಾಲ್ಗೊಂಡಿದ್ದರು.

‘ಇಫ್ತಾರ್‌ ಕೂಟದಲ್ಲಿ ಯಾರೂ ರಾಜಕಾರಣ ಹುಡುಕಬಾರದು, ರಾಜಕಾರಣ ಮಾಡಬಾರದು. ಇದು ಪ್ರೀತಿಯ ಸಂಕೇತವಾಗಿದೆ’ ಎಂದು ಶಾಸಕ, ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ರಂಜಾನ್ ತಿಂಗಳ ಪರ್ಯಂತ ನಡೆಸುವ ಪ್ರಾರ್ಥನೆಯಲ್ಲಿ ಮುಸ್ಲಿಂ ಬಾಂಧವರು ಒಂದು ನಿಮಿಷ ನನಗಾಗಿ ಮೀಸಲಿಟ್ಟು ನನ್ನ ಮತ್ತು ನನ್ನ ಕುಟುಂಬಕ್ಕೆ ಅಲ್ಲಾಹ್ ಆಶೀರ್ವದಿಸುವಂತೆ ಪ್ರಾರ್ಥನೆ ಮಾಡಲು ಕೋರಿಕೊಳ್ಳುತ್ತೇನೆ ಎಂದು ಮನವಿ ಮಾಡಿದರು.

ADVERTISEMENT

ನಿತ್ಯ ಉಪವಾಸ ವ್ರತ ಆಚರಿಸಿ ಜೀವನದಲ್ಲಿ ಸಾರ್ಥಕತೆ ಕಂಡುಕೊಳ್ಳುವುದೇ ರಂಜಾನ್ ಮಾಸದ ಮಹತ್ವವಾಗಿದೆ. ಮಾನವರಾಗಿ ಎಲ್ಲರನ್ನೂ ಪ್ರೀತಿಸುವ ಗುಣ ಅಳವಡಿಸಿಕೊಂಡು ಬದುಕಬೇಕು ಅನ್ನೋದು ಎಲ್ಲ ಧರ್ಮಗಳ ಸಾರವಾಗಿದೆ. ಇದನ್ನು ಪ್ರಾಮಾಣಿಕವಾಗಿ ಜೀವನದಲ್ಲಿ ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಶಾಸಕ, ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಶ್ರದ್ಧೆಯಿಂದ ಉಪವಾಸ ವ್ರತ ಆಚರಿಸುವ ಎಲ್ಲರಿಗೂ ಊಟ ಬಡಿಸುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. ಅಲ್ಲಾಹನ ಸ್ಮರಣೆ ಮಾಡುವ ಸಂದರ್ಭ ನಿಮ್ಮ ಸೇವೆ ಮಾಡಿದರೆ ನನಗೆ ಪುಣ್ಯದ ಫಲ ತಟ್ಟುತ್ತದೆ ಎಂದರು.

ಎಲ್ಲಿಯವರೆಗೂ ನಾನು ಸಾರ್ವಜನಿಕ ಬದುಕಿನಲ್ಲಿರುತ್ತೇನೋ ಅಲ್ಲಿಯವರೆಗೂ ಮನುಷ್ಯರಲ್ಲಿ ಜಾತಿ, ಧರ್ಮದ ಭೇದ ಮಾಡುವುದಿಲ್ಲ ಅನ್ನೋ ಮಾತನ್ನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ನಾನು ಕೊಟ್ಟ ಮಾತಿನಂತೆ ನಡೆದುಕೊಳ್ಳುವವನು ಎಂದು ಹೇಳಿದರು.

ಬಾಗವಾನ ಜಮಾತ್ ಅಧ್ಯಕ್ಷ ನಬೀಲಾಲ ಹುಣಚಗಿ ಮಾತನಾಡಿ, ಶಾಸಕ ನಡಹಳ್ಳಿಯವರು ಎಲ್ಲರನ್ನೂ ಸಮಾನವಾಗಿ ಕಾಣುವಂಥವರು. ಎಲ್ಲ ರೋಜದಾರರಿಗೂ ಊಟ ಬಡಿಸಿ ಸೇವೆ ಸಲ್ಲಿಸಿದ್ದಾರೆ. ನಮ್ಮ ಸಮುದಾಯಕ್ಕೆ, ನಮ್ಮ ಸಮುದಾಯದ ಬಡಾವಣೆಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ನಾವು ಅವರಿಗೆ ಎಷ್ಟು ಧನ್ಯವಾದ ತಿಳಿಸಿದರೂ ಕಡಿಮೆ. ಅವರ ಪರವಾಗಿ ಅಲ್ಲಾನ ಬಳಿ ಪ್ರಾರ್ಥಿಸೋಣ ಎಂದರು.

ಮುಖಂಡರಾದ ಅಬ್ದುಲ್‍ಜಬ್ಬಾರ್ ಮೋಮಿನ್, ಎಸ್.ಕೆ.ಮೋಮಿನ್, ಅಬ್ದುಲ್‍ರಹೆಮಾನ್ ಬಾಗವಾನ, ಅಬ್ದುಲ್‍ವಹಾಬ್ ಮೋಮಿನ್, ಅಬ್ದುಲ್‍ರಜಾಕ ಮೋಮಿನ್, ಕಾಶೀಮ ಹಳ್ಳೂರ, ಎಂ.ಡಿ.ಹುಣಶ್ಯಾಳ, ರಫೀಕ ಢವಳಗಿ ಇದ್ದರು. ಶಾಸಕರು ತಮ್ಮ ಪುತ್ರ ಭರತ್ ಜೊತೆ ಸೇರಿ ಎಲ್ಲ ರೋಜದಾರರಿಗೂ ತಮ್ಮ ಕೈಯಾರೆ ಉಣಬಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.