ಪಂಢರಪುರದ ವಿಠಲನಿಗೆ ಆಷಾಢ ಏಕದಶಿಯ ಪ್ರಥಮ ಪೂಜೆ ನೆರವೇರಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ - ಲತಾ ಶಿಂಧೆ ದಂಪತಿ ಅವರನ್ನು ಸನ್ಮಾನಿಸಲಾಯಿತು–ಪ್ರಜಾವಾಣಿ ಚಿತ್ರ
ಚಡಚಣ/ಸೋಲಾಪುರ: ಪಂಢರಪುರದಲ್ಲಿ ವಿಠಲ–ರುಕ್ಷ್ಮಿಣಿಗೆ ಮಹಾಪೂಜೆ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿ ಏಕನಾಥ ಶಿಂಧೆ, ವಿಠಲನ ದರ್ಶನಕ್ಕಾಗಿ ದರ್ಶನ ಮಂಟಪ ಹಾಗೂ ಟೋಕನ್ ದರ್ಶನ ವ್ಯವಸ್ಥೆ ಜಾರಿಗೆ ₹103 ಕೋಟಿ ಅನುದಾನ ನೀಡುವುದಾಗಿ ಹೇಳಿದರು.
ಪಂಢರಪುರದಲ್ಲಿ 1 ಸಾವಿರ ಬೆಡ್‌ಗಳ ಆಸ್ಪತ್ರೆ ನಿರ್ಮಾಣ ಮಾಡಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ವಿಠಲ ರುಕ್ಮಿಣಿ ಮಂದಿರ ಜೀರ್ಣೋದ್ಧಾರಕ್ಕಾಗಿ ಮಂಜೂರಾದ ₹73.80 ಕೋಟಿ ಅನುದಾನದಲ್ಲಿ ಪ್ರಾರಂಭಿಸಲಾಗಿರುವ ಕಾಮಗಾರಿ ಉತ್ಕೃಷ್ಟವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಠಲನ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಎಲ್ಲ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಕ್ರಮಕೈಗೊಳ್ಳಲಿದೆ ಎಂದರು.
ಮಂದಿರ ಸಮಿತಿಯ ಸಿಬ್ಬಂದಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಸರ್ಕಾರ ಕಟಿ ಬದ್ಧವಾಗಿದೆ ಎಂದು ಹೇಳಿದರು.
ಆಷಾಢ ಏಕಾದಶಿಯ ನಿಮಿತ್ಯವಾಗಿ ಆರೋಗ್ಯ ವಿಭಾಗದ ವತಿಯಿಂದ 4 ಕಡೆ ಮಹಾ ಆರೋಗ್ಯ ಶಿಬಿರ ಆಯೋಜಿಸಲಾಗಿದೆ. ಇಲ್ಲಿಯವರೆಗೆ 8 ಲಕ್ಷ ಭಕ್ತರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. 15 ಲಕ್ಷ ಭಕ್ತರು ಇದರ ಪ್ರಯೋಜನ ಪಡೆಯುವ ಅಪೇಕ್ಷೆ ಇದೆ ಎಂದು ಹೇಳಿದರು.
ದೇಶ-ವಿದೇಶಗಳಿಂದ ಭಕ್ತರು ಇಲ್ಲಿಗೆ ಆಗಮಿಸುವುದರಿಂದ ಆರೋಗ್ಯದ ದೃಷ್ಟಿಯಿಂದ ಭಕ್ತರಿಗೆ ಯಾವುದೇ ತೊಂದರೆಗಳು ಆಗದಂತೆ ತ್ವರಿತವಾಗಿ 1000 ಬೆಡ್ ಗಳ ಆಸ್ಪತ್ರೆ ನಿರ್ಮಾಣ ಮಾಡಬೇಕಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಸರ್ವ ಸಾಮಾನ್ಯರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಮುಖ್ಯಮಂತ್ರಿ ಲಡಕಿ ಬೆಹನ್ ಯೋಜನಾ, ಮುಖ್ಯಮಂತ್ರಿ ಅನ್ನಪೂರ್ಣ ಯೋಜನಾ, 3 ಉಚಿತ ಗ್ಯಾಸ್ ಸಿಲಿಂಡರ್ ಯೋಜನೆ, ನಿರುದ್ಯೋಗಿ ಯುವಕರಿಗೆ ಅಪ್ರೆಂಟಿಸ್ ಯೋಜನೆ, ಎಲ್ಲ ಯೋಜನೆಗಳ ಮೂಲಕ ಸಾಮಾನ್ಯ ಜನರ ಜೀವನ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಲಡಕಿ ಬೆಹನ್ ಯೋಜನೆ ರೀತಿಯಲ್ಲಿಯೇ ಲಡಕಾ ಭಾಯಿ ಯೋಜನೆ ಮೂಲಕ ಯುವಕರಿಗೆ ಕೌಶಲ ಆಧಾರಿತ ತರಬೇತಿ ನೀಡಲಾಗುವುದು ಹಾಗೂ ತರಬೇತಿ ವೇಳೆಯಲ್ಲಿ ₹6 ಸಾವಿರ ವೇತನ ನೀಡಲಾಗುವುದು ಎಂದು ತಿಳಿಸಿದರು.
ಪಂಢರಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವತಿಯಿಂದ ಆಯೋಜಿಸಿದ್ದ ಕೃಷಿ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಏಕನಾಥ ಶಿಂಧೆ, ಸೋಲಾಪುರ ಜಿಲ್ಲೆ ದಾಳಿಂಬೆ ಬೆಳೆಗಾಗಿ ಪ್ರಸಿದ್ಧವಾಗಿದೆ. ಜಿಲ್ಲೆಯಲ್ಲಿ ದಾಳಿಂಬೆ ಕೃಷಿ ಕ್ಷೇತ್ರ ಹಾಗೂ ಉತ್ಪಾದನೆ ಹೆಚ್ಚಿಸುವ ಸಲುವಾಗಿ ಪ್ರಯತ್ನ ಮಾಡುವುದು ಅವಶ್ಯಕವಾಗಿದೆ ಎಂದರು.
ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಮಂತ್ರಿ ಹಾಗೂ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ, ಕಂದಾಯ ಸಚಿವ ರಾಧಾಕೃಷ್ಣ ವಿಖೆ ಪಾಟೀಲ, ಗ್ರಾಮವಿಕಾಸ ಸಚಿವ ಗಿರೀಶ ಮಹಾಜನ, ಆರೋಗ್ಯ ಸಚಿವ ಡಾ.ತಾನಾಜಿ ಸಾವಂತ, ಶಿಕ್ಷಣ ಸಚಿವ ದೀಪಕ ಕೆಸರಕರ, ಆರೋಗ್ಯ ಸಚಿವಾಲಯದ ಕೇಂದ್ರ ರಾಜ್ಯ ಸಚಿವ ಪ್ರತಾಪರಾವ ಜಾಧವ, ಸಂಸದ ಶ್ರೀಕಾಂತ ಶಿಂಧೆ, ಶಾಸಕ ಸಮಾಧಾನ ಅವತಾಡೆ, ಸಚಿನ್ ಕಲ್ಯಾಣ್ ಶೆಟ್ಟಿ, ಭರತ ಗೋಗಾವಲೆ, ಜಿಲ್ಲಾಧಿಕಾರಿ ಕುಮಾರ ಆಶೀರ್ವಾದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿರೀಶ ದೇಶಪಾಂಡೆ, ಮಂದಿರ ಸಮಿತಿಯ ಸಹ ಅಧ್ಯಕ್ಷ ಗಹಿನಿನಾಥ ಮಹಾರಾಜ ಔಸೇಕರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.