ADVERTISEMENT

ವಿಜಯಪುರ ಸಂಪೂರ್ಣ ಲಾಕ್‌ಡೌನ್‌ಗೆ ಹೆಚ್ಚಿದ ಒತ್ತಡ

ವಿಜಯಪುರ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್‌

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 12:44 IST
Last Updated 12 ಜುಲೈ 2020, 12:44 IST
ಎಂ.ಬಿ.ಪಾಟೀಲ
ಎಂ.ಬಿ.ಪಾಟೀಲ   

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕೋವಿಡ್‌ ವ್ಯಾಪಕವಾಗಿ ಹರಡುತ್ತಿರುವ ಜೊತೆಗೆ ಸಾವು, ನೋವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಪೂರ್ಣ ಲಾಕ್‌ಡೌನ್‌ ಮಾಡಬೇಕು ಎಂಬಒತ್ತಾಯ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರಿಂದ ವ್ಯಕ್ತವಾಗಿದೆ.

ಈಗಾಗಲೇ ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ 800 ಗಡಿ ದಾಟಿದೆ. 15 ಜನ ಸಾವಿಗೀಡಾಗಿದ್ದಾರೆ. ಕರ್ತವ್ಯ ನಿರತ ಪೊಲೀಸರು, ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್‌ ಪಾಸಿಟಿವ್‌ ಕಾಣಿಸಿಕೊಳ್ಳತೊಡಗಿದೆ.

ಜುಲೈ ಆರಂಭದಿಂದ ದಿನವೊಂದಕ್ಕೆ ಸರಾಸರಿ 50ಕ್ಕೂ ಹೆಚ್ಚು ಪ್ರಕರಣಗಳು ವರದಿಯಾತೊಡಗಿವೆ. ಈ ಎಲ್ಲ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಒಂದು ವಾರ ಲಾಕ್‌ಡೌನ್‌ ಮಾಡುತ್ತಿರುವಂತೆ ವಿಜಯಪುರ ಜಿಲ್ಲೆಯನ್ನೂ ಲಾಕ್‌ಡೌನ್‌ ಮಾಡಬೇಕು ಎಂಬ ಅಭಿಪ್ರಾಯ ಬಲವಾಗತೊಡಗಿದೆ.

ADVERTISEMENT

ಸ್ವಯಂ ಪ್ರೇರಿತ ಬಂದ್:

ಜುಲೈ 13ರಿಂದ ಜುಲೈ 26ರ ವರೆಗೆ ಸಲೂನ್‌ಗಳನ್ನು ಸ್ವಯಂ ಪ್ರೇರಿತವಾಗಿ ಬಂದ್‌ ಮಾಡಲು ಜಿಲ್ಲಾ ಕ್ಷೌರಿಕರ ಒಕ್ಕೂಟ ಈಗಾಗಲೇ ನಿರ್ಧರಿಸಿದೆ. ವ್ಯಾಪಾರಸ್ಥರು ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ಮಾತ್ರ ವ್ಯಾಪಾರ, ವಹಿವಾಟು ನಡೆಸಲು ನಿರ್ಧರಿಸಿದ್ದಾರೆ. ಹೀಗಾಗಿ ಸಂಪೂರ್ಣ ಲಾಕ್‌ಡೌನ್‌ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಎಂ.ಬಿ.ಪಾಟೀಲ ಒತ್ತಾಯ:

ಕೋವಿಡ್‌ ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯನ್ನು 15 ದಿನಗಳ ಮಟ್ಟಿಗೆ ಲಾಕ್‍ಡೌನ್ ಮಾಡಬೇಕು ಎಂದು ಶಾಸಕ ಎಂ.ಬಿ.ಪಾಟೀಲ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್‌ ಪಾಸಿಟಿವ್‌ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಆಸ್ಪತ್ರೆಗಳಲ್ಲಿಯೂ ಸಹ ರೋಗಿಗಳಿಗೆ ಬೆಡ್ ಸಿಗಲಾರದ ಪರಿಸ್ಥಿತಿ ಉಂಟಾಗಿದೆ. ಆರೋಗ್ಯ ವ್ಯವಸ್ಥೆ ಮೇಲೆಯೇ ಅತ್ಯಂತ ಗಂಭೀರ ಪರಿಣಾಮ ಉಂಟಾಗಿದ್ದು, ಆಸ್ಪತ್ರೆ ವೈದ್ಯರು, ಶೂಶ್ರಷಕ ಸಿಬ್ಬಂದಿ ಸೇರಿದಂತೆ ಇಡೀ ವ್ಯವಸ್ಥೆ ಸದ್ಯ ಸೋಂಕಿತರನ್ನು ಆರೈಕೆ ಮಾಡುವ ಸ್ಥಿತಿಯಲ್ಲಿ ಇಲ್ಲದೇ ಇರುವುದು ಕಂಡುಬಂದಿದೆ. ಕಾರಣ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಲಾಕ್‍ಡೌನ್ ಜಾರಿಗೆ ತರುವುದು ಅತೀ ಅಗತ್ಯವಿದೆ. ಇದರಿಂದ ರೋಗ ಹೆಚ್ಚು ಪಸರಿಸದಂತೆ ತಡೆಗಟ್ಟಬಹುದು ಎಂದು ಹೇಳಿದ್ದಾರೆ.

ಸಿಎಂ ಗಮನಕ್ಕೆ:

ಈ ಸಂಬಂಧ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ, ‘ಕೋವಿಡ್‌ ಸಂಬಂಧಿಸಿದಂತೆ ಮುಖ್ಯಮಂತ್ರಿಗಳೊಂದಿಗೆ ಸೋಮವಾರ ನಡೆಯಲಿರುವ ವಿಡಿಯೊ ಸಂವಾದದ ಸಂದರ್ಭದಲ್ಲಿ ಜಿಲ್ಲೆಯನ್ನು ಸಂಪೂರ್ಣ ಲಾಕ್‌ಡೌನ್‌ ಮಾಡುವ ಕುರಿತಂತೆ ಜಿಲ್ಲೆಯ ಜನಪ್ರತಿನಿಧಿಗಳು, ಸಾರ್ವಜನಿಕರ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಗಮನಕ್ಕೆ ತರುತ್ತೇನೆ’ ಎಂದು ತಿಳಿಸಿದರು.

ಭಾನುವಾರ ಜಿಲ್ಲೆ ಸಂಪೂರ್ಣ ಸ್ತಬ್ಧ

ಕೋವಿಡ್ ಹಿನ್ನೆಲೆಯಲ್ಲಿ ಭಾನುವಾರದ ಲಾಕ್‌ಡೌನ್‌ಗೆ ವಿಜಯಪುರ ನಗರ ಸೇರಿದಂತೆ ಇಡೀ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿತ್ತು.

ಬಸ್ ನಿಲ್ದಾಣ, ಮಾರುಕಟ್ಟೆ, ಮುಖ್ಯ ರಸ್ತೆಗಳಲ್ಲಿ ಜನ, ವಾಹನಗಳ ಸಂಚಾರವಿಲ್ಲದೇ ಬಿಕೋ ಎನ್ನುತ್ತಿದ್ದವು. ಎಲ್ಲ ಅಂಗಡಿ, ಮುಂಗಟ್ಟು, ವಾಣಿಜ್ಯ ಮಳಿಗೆಗಳು ಬಾಗಿಲು ಬಂದ್ ಆಗಿದ್ದವು. ಬಸ್, ಆಟೊ ಸೇರಿದಂತೆ ಜನ, ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು.

ಆಸ್ಪತ್ರೆ, ಔಷಧ ಅಂಗಡಿ, ಕೋಳಿ ಮತ್ತು ಕುರಿ ಮಾಂಸ, ಹಾಲು ಮಾರಾಟ ಮಳಿಗೆಗಳು ಮಾತ್ರ ಬಾಗಿಲು ತೆರೆದಿದ್ದವು. ಆದರೆ, ಗ್ರಾಹಕರಿಲ್ಲದೇ ವ್ಯಾಪಾರ ಕ್ಷೀಣವಾಗಿತ್ತು.

ವಿಜಯಪುರ, ಸಿಂದಗಿ, ಮುದ್ದೆಬಿಹಾಳ, ಬಸವನ ಬಾಗೇವಾಡಿ, ಇಂಡಿ, ಚಡಚಣ, ಹೊರ್ತಿ, ದೇವರಹಿಪ್ಪರಗಿ, ತಿಕೋಟಾ, ಕೊಲ್ಹಾರ, ನಾಲತವಾಡ, ಆಲಮಟ್ಟಿ, ನಿಡಗುಂದಿ,ತಾಳಿಕೋಟೆ ಸೇರಿದಂತೆ ಜಿಲ್ಲೆಯ ನಗರ, ಪಟ್ಟಣಗಳಲ್ಲಿ ಪ್ರಮುಖ ವೃತ್ತಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕುವ ಮೂಲಕ ಸಂಚಾರಕ್ಕೆ ತಡೆಯೊಡ್ಡಿದ್ದರು. ಬೈಕ್, ಕಾರುಗಳಲ್ಲಿ ಅಡ್ಡಾಡುವವರನ್ನು ಪೊಲೀಸರು ತಡೆದು, ವಿಚಾರಣೆ ಮಾಡಿದ ಬಳಿಕ ತುರ್ತು ಇದ್ದವರಿಗೆ ಮಾತ್ರ ಹೋಗಲು ಬಿಟ್ಟರು. ಕೆಲವೆಡೆ ಅನಗತ್ಯವಾಗಿ ಸಂಚರಿಸುವವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು. ಬಹುತೇಕ ಜನರು ಮನೆಯಲ್ಲೇ ಇರುವ ಮೂಲಕ ಲಾಕ್‌ಡೌನ್‌ಗೆ ಸ್ವಯಂ ಪ್ರೇರಿತ ಬೆಂಬಲ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.