ADVERTISEMENT

ನಾಲತವಾಡದಲ್ಲಿ ಮಂಗಗಳ ಉಪಟಳ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 4:42 IST
Last Updated 20 ಡಿಸೆಂಬರ್ 2025, 4:42 IST
ಬಜಾರದ ರಸ್ತೆಯಲ್ಲಿ ನಿರ್ಭಯವಾಗಿ ಓಡಾಡಿಕೊಂಡಿರುವ ಕೆಂಪು ಮಂಗಗಳು.
ಬಜಾರದ ರಸ್ತೆಯಲ್ಲಿ ನಿರ್ಭಯವಾಗಿ ಓಡಾಡಿಕೊಂಡಿರುವ ಕೆಂಪು ಮಂಗಗಳು.   

ಪ್ರಜಾವಾಣಿ ವಾರ್ತೆ

ನಾಲತವಾಡ: ಪಟ್ಟಣದ ಬಜಾರದ ಅಂಗಡಿಗಳು, ಶಾಲಾ ಕಾಲೇಜಿನ ಆವರಣದಲ್ಲಿ ಮಂಗಗಳ ಕಾಟದಿಂದ ಅಂಗಡಿಕಾರರು, ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ಇನ್ನಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ.

ಮಕ್ಕಳು ತಟ್ಟೆಯಲ್ಲಿ ಊಟ ಹಾಕಿಕೊಂಡು ತಿನ್ನಲು ಹೋದಾಗ ತಟ್ಟೆಗೆ ಕೈ ಹಾಕುತ್ತವೆ, ತಿಂಡಿ ಪೊಟ್ಟಣ ಹಿಡಿದು ಹಿರಿಯರು, ಮಕ್ಕಳು ಹೊರಟರೆ ತಿಂಡಿ ಪೊಟ್ಟಣ, ಕೈಚೀಲ ಕಸಿದುಕೊಂಡು ರಸ್ತೆಯಲ್ಲಿ ಓಡುತ್ತವೆ.ಕೋತಿಗಳನ್ನು ಹೆದರಿಸಲು ಹೋದರೆ ಮೈ ಮೇಲೆ ಎರಗುತ್ತವೆ. ಹಲವು ಬಾರಿ ಮಕ್ಕಳು ಕೋತಿಗಳಿಂದ ಕಚ್ಚಿಸಿಕೊಂಡಿರುವ ಪ್ರಕರಣಗಳೂ ಇವೆ.

ADVERTISEMENT

ಪಟ್ಟಣದ ಮನೆಗಳ ಮೇಲೆ ಮಂಗಗಳು ದಾಳಿ ಮಾಡಿ ಮನೆಯಲ್ಲಿರುವ ದವಸ, ಧಾನ್ಯ, ತರಕಾರಿ ಹಾಗೂ ಇನ್ನಿತರ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡುತ್ತವೆ. ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ಮಾಡಿ ಬಾಳೆ ಹಣ್ಣು ಸೇರಿದಂತೆ ತಿಂಡಿ ತಿನಿಸುಗಳನ್ನು ಕಿತ್ತುಕೊಂಡು ಹೋಗುತ್ತವೆ. ಅದನ್ನು ಓಡಿಸಲು ಅಂಗಡಿ ಮಾಲೀಕರು ಮುಂದಾದರೆ ಅವರಿಗೆ ಕಚ್ಚಲು ಮುಂದಾಗುತ್ತವೆ. ಮಾಳಿಗೆಯ ಮೇಲಿರುವ ನೀರಿನ ಟ್ಯಾಂಕ್, ಸಿಂಟೆಕ್ಸ, ಪೈಪ್ಲೈನ್, ಡಿಟಿಎಚ್ ಬುಟ್ಟಿಯಿಂದ ಟಿವಿ ಸಂಪರ್ಕಿಸುವ ವೈರ್, ಸೋಲಾರ್ ಪೆನಲ್ ಇದಾವುದಕ್ಕೂ ಮಂಗಗಳ ಕಾಟದಿಂದ ಉಳಿಗಾಲವಿಲ್ಲ ಎನ್ನುವಂತಾಗಿದೆ.

ರೈತರ ಬೆಳೆಗಳಿಗೂ ಇವುಗಳ ಕಾಟ ತಪ್ಪಿಲ್ಲ. ಹಸಿ ಬರಗಾಲದ ಈ ಸಂದರ್ಭದಲ್ಲಿ ವಿದ್ಯುತ್ ಆಗಾಗ ಕೈ ಕೊಡುತ್ತಿದ್ದು, ರೈತರು ಸಾಲ ಮಾಡಿ ಬೆಳೆಯುತ್ತಿದ್ದರೆ ಕೋತಿಗಳು ಬೆಳೆಗಳನ್ನೆಲ್ಲ ಕಿತ್ತು ನಾಶ ಪಡಿಸುತ್ತಿದ್ದು,  ತಲೆನೋವಾಗಿ ಪರಿಣಮಿಸಿದೆ.

ಆದಷ್ಟು ಬೇಗನೆ ಸಂಬಂಧ ಪಟ್ಟವರು ನಾಲತವಾಡ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಹೆಚ್ಚುತ್ತಿರುವ ಕೋತಿಗಳನ್ನು ನಿಯಂತ್ರಿಸಲು ಕ್ರಮ ಕೈಗೊಂಡು  ಅನುಕೂಲ ಮಾಡಿಕೊಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಮಾಳಿಗೆಯಲ್ಲಿ ದಾಂಗುಡಿ ಇಡುವ ಮಂಗಣ್ಣರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.