ವಿಜಯಪುರ: ‘ಕಾಶ್ಮೀರದ ಪಹಲ್ಗಾಮ್‍ನಲ್ಲಿ ಅಮಾಯಕ 26 ಜನ ಭಾರತೀಯರನ್ನು ಹತ್ಯೆ ಮಾಡಿದಾಗಲೇ ಪಾಕಿಸ್ತಾನವು ತನ್ನ ಶವ ಪೆಟ್ಟಿಗೆಗೆ ಮೊದಲ ಮೊಳೆ ಹೊಡೆದುಕೊಂಡಿದೆ. ಹೀಗೆ ಮುಂದುವರಿದರೆ ಪಾಕಿಸ್ತಾನ ಪ್ರಪಂಚದ ಭೂಪಟದಿಂದ ಮಾಯವಾಗಲಿದೆ’ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಾಕಿಸ್ತಾನ ತನ್ನ ಬಾಲ ಮುದುಡಿಸಿಕೊಂಡು ಸುಮ್ಮನಿದ್ದರೇ ಸರಿ ಇಲ್ಲದಿದ್ದರೇ, ದೇಶದ ಸೈನಿಕರು ಪಾಕಿಸ್ತಾನದ ಬಾಲ ಕತ್ತರಿಸುವುದು ನಿಶ್ಚಿತ’ ಎಂದರು.
‘ಭಾರತೀಯ ಸೈನಿಕರು ‘ಆಪರೇಷನ್ ಸಿಂಧೂರ’ ಮೂಲಕ ದೇಶದ ಶಕ್ತಿ, ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದ್ದಾರೆ. ಇದರಿಂದ ಪಾಕಿಸ್ತಾನ ನಡುಗಿಹೋಗಿದೆ. ಬಿಕ್ಷೆ ಬೇಡುವ ಸ್ಥಿತಿಗೆ ಬಂದು ತಲುಪಿದೆ. ತಿನ್ನಲು ಅನ್ನ, ಕುಡಿಯಲು ನೀರು, ಔಷಧಿಗಳಿಲ್ಲದೆ ಪ್ರಪಂಚದ ಮುಂದೆ ಸಾಲ ನೀಡುವಂತೆ ಭಿಕ್ಷೆ ಬೇಡುವ ಸ್ಥಿತಿ ಬಂದು ತಲುಪಿದೆ’ ಎಂದರು.
‘ಪಾಕಿಸ್ತಾನದ ನರಿ ಬುದ್ದಿಯಂತೆ ದೇಶಲ್ಲಿಯೂ ರಾಷ್ಟ್ರದ್ರೋಹಿಗಳಿದ್ದಾರೆ. ಹೊರಗಡೆಯ ದ್ರೋಹಿಗಳನ್ನು ಸೈನಿಕರು ಮಟ್ಟ ಹಾಕಿದರೆ, ದೇಶದಲ್ಲಿನ ರಾಷ್ಟ್ರದ್ರೋಹಿಗಳನ್ನು ಇಲ್ಲಿನ ರಾಷ್ಟ್ರಭಕ್ತರು ನೋಡಿಕೊಳ್ಳಬೇಕು. ಇಂದಲ್ಲ ನಾಳೆ ದೇಶದೊಳಗಿನ ರಾಷ್ಟ್ರ ದ್ರೋಹಿಗಳಿಗೆ ಬುದ್ದಿ ಕಲಿಸುವ ದಿನ ಬರುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಬಸವನ ಬಾಗೇವಾಡಿಯಲ್ಲಿ ಕ್ರಾಂತಿವೀರ ಬ್ರಿಗೇಡ್ 1008 ಸಾದು–ಸಂತರ ಪಾದಪೂಜೆ ಮೂಲಕ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ. ಸಧ್ಯ ರಾಜ್ಯದಲ್ಲಿ ಅನ್ಯಾಯಕ್ಕೆ ಒಳಗಾದ ಹಿಂದೂಗಳ ಮನೆಗಳಿಗೆ ಭೇಟಿ ನೀಡಿ ಸಾಂತ್ವಾನ ಹೇಳಲಾಗುತ್ತಿದೆ. ಜಮಖಂಡಿಯ ಜಗನೂರನಲ್ಲಿ ಬ್ರಿಗೇಡ್‌ನ ಮುಂದಿನ ಕಾರ್ಯಯೋಜನೆ ರೂಪಿಸಲಾಗುವುದು’ ಎಂದು ಮಾಹಿತಿ ನೀಡಿದರು.
‘ರಾಜಕಾರಣ ಶುದ್ದೀಕರಣ ಮಾಡಲು ನಾನು ಹಾಗೂ ನನ್ನಂತೆ ಶಾಸಕ ಬಸನಗೌಡ ಯತ್ನಾಳ ಕೂಡ ಶ್ರಮಿಸುತ್ತಿದ್ದಾರೆ. ಬಿಜೆಪಿ ಪಕ್ಷ ಒಂದು ಮೊನ್ನೆಯದಲ್ಲ. ಈ ಪಕ್ಷಕ್ಕೆ ಅನೇಕರು ತ್ಯಾನ–ಬಲಿದಾನ ಮಾಡಿದ್ದಾರೆ, ಅವರ ಬಲಿದಾನ ವ್ಯರ್ಥವಾಗಲು ಬಿಡಲ್ಲ. ಒಂದಲ್ಲ ಒಂದು ದಿನ ಪಕ್ಷ ಶುದ್ದೀಕರಣ ಆಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯುದ್ಧದ ಪರಿಸ್ಥಿತಿಯಲ್ಲಿ ದೇಶ ಸರ್ವ ಪಕ್ಷಗಳು ದೇಶ ಮೊದಲು ಎಂದು ತೋರಿಸುವಲ್ಲಿ ಯಶಸ್ವಿಯಾಗಿದೆ. ಎಲ್ಲ ಪಕ್ಷಗಳು ರಾಜಕಾರಣವನ್ನು ಪಕ್ಕಕ್ಕೆ ಸರಿಸಿ ದೇಶ ಮೊದಲು ಎಂದು ತೋರಿಸಿದೆ.-ಕೆ.ಎಸ್.ಈಶ್ವರಪ್ಪ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.