ವಿಜಯಪುರ: ಇಂಡಿ ಕಾಲುವೆ ನವೀಕರಣಕ್ಕಾಗಿ ₹2,666 ಕೋಟಿ ಮೊತ್ತದ ಅನುದಾನ ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ. ಈ ಸಂಬಂಧ ಅಗತ್ಯ ಇರುವ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್) ರಾಜ್ಯ ಸರ್ಕಾರ ಆದಷ್ಟು ಬೇಗ ಸಿದ್ಧಪಡಿಸಬೇಕು’ ಎಂದು ಸಂಸದ ರಮೇಶ ಜಿಗಜಿಣಗಿ ಒತ್ತಾಯಿಸಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಂಡಿ ಕಾಲುವೆ ನವೀಕರಣಕ್ಕೆ ಅಗತ್ಯ ಇರುವ ಕೇಂದ್ರದ ಪಾಲಿನ ಶೇ 60ರಷ್ಟು ಅನುದಾನವನ್ನು ನಾನು ತರುತ್ತೇನೆ. ರಾಜ್ಯ ಸರ್ಕಾರದ ಪಾಲಿನ ಶೇ 40ರಷ್ಟು ಅನುದಾನವನ್ನು ತರಲು ಜಿಲ್ಲೆಯ ಕಾಂಗ್ರೆಸ್ ಶಾಸಕರು, ಸಚಿವರು ಆದ್ಯತೆ ನೀಡಬೇಕು’ ಎಂದು ಸವಾಲು ಹಾಕಿದರು.
‘ಇಂಡಿ ಕಾಲುವೆ ನವೀಕರಣ ವಿಷಯದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಅನುದಾನ ನೀಡಲು ಮುಂದಾಗಿರುವ ವಿಷಯದಲ್ಲಿ ಕಾಂಗ್ರೆಸ್ ಶಾಸಕರು, ಸಚಿವರು ಕ್ರೆಡಿಟ್ ತೆಗೆದುಕೊಳ್ಳಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ' ಎಂದರು.
"ಕಾಲುವೆ ನವೀಕರಣವಾಗಬೇಕು, ಕಾಲುವೆಯ ಕೊನೆ ಭಾಗಕ್ಕೆ ನೀರು ಬರುತ್ತಿಲ್ಲ, ಹೂಳು ತುಂಬಿದೆ, ನೀರು ಸೋರಿಕೆಯಾಗುತ್ತಿದೆ, ಕಾಲುವೆ ಕೊನೆ ಭಾಗ ಎತ್ತರವಾಗಿದೆ ಎಂದು ಆ ಭಾಗದ ರೈತರು ನನ್ನ ಬಳಿ ಮನವಿ ಮಾಡಿದ ಹಿನ್ನೆಲೆಯಲ್ಲಿ 2024ರ ಸೆಪ್ಟೆಂಬರ್ 10ರಂದು ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾನು ಕಾಲುವೆ ನವೀಕರಣ ಮಾಡುವಂತೆ ಮನವಿ ಮಾಡಿದ್ದೆ. ಜೊತೆಗೆ ಕೇಂದ್ರ ಜಲಶಕ್ತಿ ಸಚಿವರು, ರಾಜ್ಯ ಸರ್ಕಾರದ ಜಲ ಸಂಪನ್ಮೂಲ ಸಚಿವರು, ಕೃಷ್ಣಾ ಮೇಲ್ದಂಡೆ ಯೋಜನೆ ಮುಖ್ಯ ಎಂಜಿನಿಯರ್ ಅವರ ಗಮನಕ್ಕೂ ತಂದಿದ್ದೆ’ ಎಂದು ಹೇಳಿದರು.
‘ಇಂಡಿ ಕಾಲುವೆ ನವೀಕರಣಕ್ಕಾಗಿ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮೂಲಕ ಕೇಂದ್ರ ಸರ್ಕಾರಕ್ಕೆ ನಾವು ಮನವಿ ಮಾಡಿದ ಮೇಲೆ ಸಂಸದರು ಈಗ ಮಧ್ಯಪ್ರವೇಶ ಮಾಡಿದ್ದಾರೆ ಎಂದು ಕಾಂಗ್ರೆಸ್ ಶಾಸಕರು ಹೇಳುತ್ತಿರುವುದು ಸರಿಯಲ್ಲ. ಯೋಜನೆ ಬಗ್ಗೆ ಅಷ್ಟೊಂದು ಆಸಕ್ತಿ, ಕಾಳಜಿ ಇದ್ದರೆ ಡಿಪಿಆರ್ ಸಿದ್ಧಪಡಿಸಿ, ಕೇಂದ್ರಕ್ಕೆ ಮೊದಲು ಕಳುಹಿಸಿ’ ಎಂದು ಒತ್ತಾಯಿಸಿದರು.
‘ಕಾಲುವೆ ನವೀಕರಣದ ಬಗ್ಗೆ ಕಾಂಗ್ರೆಸ್ ಶಾಸಕರು, ಸಚಿವರಿಗೆ ಆಸಕ್ತಿ ಇದ್ದಿದ್ದರೇ ಕಳೆದ 10 ವರ್ಷಗಳಿಂದ ಏಕೆ ಸುಮ್ಮನಿದ್ದರು, ಅವರಿಗೆ ತಾಕತ್ತು ಇರಲಿಲ್ಲವೇ’ ಎಂದು ಪ್ರಶ್ನಿಸಿದರು.
‘ಇಂಡಿ ಕಾಲುವೆ ವಿಷಯದಲ್ಲಿ ನೀವೇಕೆ ಇಷ್ಟು ವರ್ಷ ಸುಮ್ಮನಿದ್ದೀರಿ’ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದರು, ‘ಕಾಲುವೆ ಸಮಸ್ಯೆ ಬಗ್ಗೆ ಯಾರೂ ನನ್ನ ಗಮನಕ್ಕೆ ತಾರದ ಕಾರಣ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿರಲಿಲ್ಲ, ಗಮನಕ್ಕೆ ಬಂದ ತಕ್ಷಣವೇ ಕಳುಹಿಸಿದ್ದೇನೆ’ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ, ಮಾಜಿ ಶಾಸಕ ರಮೇಶ ಭೂಸನೂರ, ಸಂಜೀವ ಐಹೊಳೆ, ವಿಜಯ ಜೋಶಿ, ಕಾಸುಗೌಡ ಬಿರಾದಾರ ಇದ್ದರು.
₹2,666 ಕೋಟಿ ಅನುದಾನ ನೀಡಲು ಕೇಂದ್ರ ಸಿದ್ಧ ಕಾಲುವೆ ನವೀಕರಣಕ್ಕಾಗಿ ಮೋದಿಗೆ ಕೋರಿಕೆ ಕಾಂಗ್ರೆಸ್ ಶಾಸಕರು, ಸಚಿವರು ಸುಮ್ಮನಿದ್ದಿದ್ದೇಕೆ?
ಆಲಮಟ್ಟಿ ಜಲಾಶಯದ ಎತ್ತರವನ್ನು 519 ಮೀಟರ್‌ನಿಂದ 524 ಮೀಟರ್‌ಗೆ ಎತ್ತರಿಸಲು ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸುವ ವಿಷಯ ನನೆಗುದಿಗೆ ಬಿದ್ದಿರುವುದು ನನ್ನ ಗಮನಕ್ಕೆ ಬಂದಿಲ್ಲ ತಿಳಿದುಕೊಳ್ಳುತ್ತೇನೆರಮೇಶ ಜಿಗಜಿಣಗಿ ಸಂಸದ ವಿಜಯಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.