ADVERTISEMENT

ತೆರೆಮರೆಗೆ ಸರಿದ ‘ಇಂಡಿ’ ಜಿಲ್ಲೆ ರಚನೆ ಬೇಡಿಕೆ

ಎ.ಸಿ.ಪಾಟೀಲ
Published 16 ಫೆಬ್ರುವರಿ 2026, 2:34 IST
Last Updated 16 ಫೆಬ್ರುವರಿ 2026, 2:34 IST
ಇಂಡಿ ಜಿಲ್ಲಾ ಕೇಂದ್ರವಾಗಲು ಸಿದ್ದಗೊಳಿಸಿರುವ ನಕ್ಷೆ
ಇಂಡಿ ಜಿಲ್ಲಾ ಕೇಂದ್ರವಾಗಲು ಸಿದ್ದಗೊಳಿಸಿರುವ ನಕ್ಷೆ   

ಇಂಡಿ: ವಿಜಯಪುರ ಜಿಲ್ಲೆಯಿಂದ ಬೇರ್ಪಟ್ಟು ‘ಇಂಡಿ’ಯನ್ನು ನೂತನ ಜಿಲ್ಲೆಯಾಗಿಸಬೇಕು ಎಂಬ ಬೇಡಿಕೆ, ಹೋರಾಟ, ಭರವಸೆಗಳು ಕಳೆದ ಎರಡು ವರ್ಷಗಳಿಂದ ತೆರೆಮರೆಗೆ ಸರಿದಿದೆ.

ಶಾಸಕ ಯಶವಂತರಾಯಗೌಡ ಪಾಟೀಲರು ‘ಇಂಡಿ’ ಜಿಲ್ಲೆಯನ್ನಾಗಿ ಮಾಡುತ್ತೇನೆ ಎಂದು ತಾಲ್ಲೂಕಿನ ಜನತೆಗೆ ಭರವಸೆ ನೀಡಿದ್ದರು. ಅವರದೇ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಒಂದು ಸಾವಿರ ದಿನ ಗತಿಸಿದರೂ ಈ ಬಗ್ಗೆ ಯಾವುದೇ ಚಕಾರವಿಲ್ಲ. ಜನರೂ ಮರೆತು ಹೋಗಿದ್ದಾರೆ. ಹೋರಾಟಗಾರರು ಧ್ವನಿ ಕಳೆದುಕೊಂಡಿದ್ದಾರೆ. ನೂತನ ಜಿಲ್ಲೆ ರಚನೆ ಕನಸು ನನಸಾಗುವುದೇ ಎಂಬುದು ಜನ ಸಾಮಾನ್ಯರ ಪ್ರಶ್ನೆಯಾಗಿದೆ.

ನೆರೆಯ ಸಿಂದಗಿಯಲ್ಲೂ ಹೊಸ ಜಿಲ್ಲೆ ರಚನೆಯಾಗಬೇಕು ಎಂಬ ಧ್ವನಿ ಕೇಳಿಬರುತ್ತಿದೆ. ಜೊತೆಗೆ ಇಂಡಿ, ಸಿಂದಗಿ ಪ್ರತ್ಯೇಕ ಜಿಲ್ಲೆಯ ಅವಶ್ಯಕತೆ ಇಲ್ಲ. ಈಗಿರುವ ವಿಜಯಪುರ ಜಿಲ್ಲೆಯಲ್ಲೇ ಇದ್ದು, ಹೆಚ್ಚು ಸೌಲಭ್ಯಗಳನ್ನು ಪಡೆಯುವಂತಾಗಬೇಕು ಎಂಬ ಅಭಿಪ್ರಾಯವೂ ಇದೆ. ಹೀಗಾಗಿ ಇಂಡಿ ಜಿಲ್ಲೆ ರಚನೆ ಗಗನಕುಸುಮವಾಗುವುದೇ ಅಥವಾ ಕೇವಲ ರಾಜಕೀಯ ಭರವಸೆಯಾಗಿ ಉಳಿಯುವುದೇ ಎಂಬುದು ಕಾದುನೋಡಬೇಕಿದೆ.

ADVERTISEMENT

ಭೀಮಾ ನದಿ ತೀರ, ಮಹಾರಾಷ್ಟ್ರದ ಗಡಿ ಹಂಚಿಕೊಂಡಿರುವ ಇಂಡಿ ತಾಲ್ಲೂಕು ನಂಜುಂಡಪ್ಪನವರ ವರದಿಯ ಪ್ರಕಾರ ಅತೀ ಹಿಂದುಗಳು ತಾಲ್ಲೂಕುಗಳಲ್ಲೊಂದಾಗಿತ್ತು. ಆದರೆ, ಕಳೆದೊಂದು ದಶಕದಲ್ಲಿ ಈ ಗಡಿನಾಡ ತಾಲ್ಲೂಕು ಸಕಲ ಸೌಲಭ್ಯಗಳನ್ನು ಒಳಗೊಂಡು ಜಿಲ್ಲಾ ಕೇಂದ್ರವಾಗುವ ಮಟ್ಟಿಗೆ ಬೆಳವಣಿಗೆ ಕಂಡಿದೆ. ಇದನ್ನು ಜಿಲ್ಲೆಯನ್ನಾಗಿ ಕಾಣಲು ತಾಲ್ಲೂಕಿನ ಪ್ರತಿಯೊಬ್ಬರೂ ಕಾತರದಿಂದ ಕಾಯುತ್ತಿದ್ದಾರೆ.

ಶಾಸಕ ಯಶವಂತರಾಯಗೌಡರು ಜಿಲ್ಲಾ ಕೇಂದ್ರಕ್ಕೆ ಅಗತ್ಯವಿರುವ ಸಕಲ ಸೌಲಭ್ಯವಿರುವ ಮಹಾನಗರ ಪಾಲಿಕೆ, ಮಿನಿ ವಿಧಾನಸೌಧ, ನಗರಕ್ಕೆ ₹98 ಕೋಟಿ ವೆಚ್ಚದಲ್ಲಿ ಭೀಮಾ ನದಿಯಿಂದ ಇನ್ನೂ 25 ವರ್ಷಗಳ ಕಾಲ ಕಡಿಮೆ ಬೀಳದಂತಹ ಶಾಶ್ವತ ಮತ್ತು ನಿರಂತರ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ.

ನಗರದಲ್ಲಿರುವ 4 ಪ್ರಮುಖ ರಸ್ತೆಗಳನ್ನು ವಿಸ್ತರಣೆ ಮಾಡಿ, ಡಾಂಬರೀಕರಣ, ಡಿವೈಡರ್, ಲೈಟ್ ವ್ಯವಸ್ಥೆ, ಪಾದಚಾರಿ ರಸ್ತೆ ವ್ಯವಸ್ಥೆ ಕಲ್ಪಿಸಲಾಗಿದೆ. ಮಧ್ಯದಲ್ಲಿ ಸಸಿಗಳನ್ನು ನೆಡಲಾಗಿದೆ. ನಗರದ ಮಧ್ಯದಲ್ಲಿ ಸಿಗ್ನಲ್ ವ್ಯವಸ್ಥೆ, ವ್ಯಾಪಾರ ವಹಿವಾಟಿಗೆ ಮೆಗಾ ಮಾರುಕಟ್ಟೆ, ಕೈಗಾರೀಕರಣಕ್ಕಾಗಿ ಸ್ಥಳವಕಾಶ ಮಾಡಿದ್ದಲ್ಲದೆ, ಅದರ ಅಭಿವೃದ್ಧಿ ಕಾರ್ಯ ಕೈಕೊಳ್ಳಲಾಗಿದೆ.

ವಿಜಯಪುರದಿಂದ ಮಹಾರಾಷ್ಟ್ರದ ಮುಂಬೈ- ಹೈದರಾಬಾದ್‌ ಹೆದ್ದಾರಿ ಸಂಪರ್ಕಿಸುವ ರಸ್ತೆ ನಿರ್ಮಾಣ, ಇಂಡಿ ನಗರದಿಂದ ಮುಂಬೈ, ಹೈದಾರಾಬಾದ್‌, ಬೆಂಗಳೂರು, ಮಂಗಳೂರು ಮುಂತಾದ ಮಹಾನಗರಗಳಿಗೆ ಸಂಪರ್ಕ ಕಲ್ಪಿಸುವ ಬ್ರಾಡ್ಗೇಜ್‌ ರೈಲು ಸಂಪರ್ಕ ಸ್ಟೇಷನ್ ಹೊಂದಿರುವ ಇಂಡಿ ತಾಲ್ಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ನೋಡಲು ಜನ ಕಾತರರಾಗಿದ್ದಾರೆ.

ಇಂಡಿ ನಗರದ ಬೆಳವಣಿಗೆಗಾಗಿ ಇಲ್ಲಿಯ ನಿಂಬೆ ಬೆಳೆಗೆ ಜಿಐ ಟ್ಯಾಗ್ ದೊರಕಿಸಿಕೊಟ್ಟಿದ್ದಲ್ಲದೆ, ರಾಜ್ಯಮಟ್ಟದ ಲಿಂಬೆ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಿ, ಇಂಡಿ ನಗರದಲ್ಲಿ ಅದರ ಕೇಂದ್ರ ಕಚೇರಿ ಸ್ಥಾಪನೆಗೆ ಈಗಾಗಲೇ ₹12 ಕೋಟಿ ಅನುದಾನ ಬಿಡುಗಡೆ ಮಾಡಿ, ರಾಜ್ಯಮಟ್ಟದ ಕಚೇರಿ ಸಿದ್ದಗೊಳ್ಳುತ್ತಲಿದೆ.

ಇಂಡಿ ನಿಂಬೆಯನ್ನು ವಿಶ್ವಮಟ್ಟದಲ್ಲಿ ಪರಿಚಯಿಸಲು ಈಗಾಗಲೇ ಇಲ್ಲಿನ ನಿಂಬೆ ರಫ್ತಿಗೆ ವ್ಯವಸ್ಥೆ ಮಾಡಲಾಗಿದೆ. ನಗರದಲ್ಲಿ ರಾಜ್ಯಮಟ್ಟದ ಕೃಷಿ ವಿಜ್ಞಾನ ಕೇಂದ್ರ ಸ್ಥಾಪನೆ ಮಾಡಿ, ರೈತರ ವಿವಿಧ ಬೆಳೆಗಳಿಗೆ ಈ ಭಾಗದಲ್ಲಿ ಉತ್ತಮ ಸಲಹೆ ಸೂಚನೆ ನೀಡುವುದಲ್ಲದೆ ಮಣ್ಣಿನ ಪರೀಕ್ಷೆ ಕೂಡಾ ಮಾಡುವ ವ್ಯವಸ್ಥೆ ಮಾಡಲಾಗಿದೆ.

ಶೈಕ್ಷಣಿಕವಾಗಿ ಹಿಂದುಳಿದಿದ್ದ ಇಂಡಿ ನಗರದಲ್ಲಿ ಸರ್ಕಾರಿ ಪದವಿ ಕಾಲೇಜು, ಪಿಯು ಕಾಲೇಜು, ಐಟಿಐ ಕಾಲೇಜು, ಝಳಕಿ ಗ್ರಾಮದಲ್ಲಿ ಡಿಪ್ಲೋಮಾ ಕಾಲೇಜು ಮತ್ತು ಅವೆಲ್ಲವುಗಳಿಗೆ ಅಗತ್ಯವಿರುವ ಕಟ್ಟಡ ನಿರ್ಮಿಸಲಾಗಿದೆ. ಜಿಟಿಟಿಐ ಕಾಲೇಜಿಗೆ ಮಂಜೂರಾತಿ ಪಡೆದುಕೊಂಡಿದ್ದು, ಇಷ್ಟರಲ್ಲಿಯೇ ಅದಕ್ಕೆ ಅಗತ್ಯವಿರುವ ಕಟ್ಟಡ ನಿರ್ಮಿಸಲು ಸಿದ್ದತೆ ನಡೆದಿದೆ.

ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಶೇ 40ರಷ್ಟು ನೀರಾವರಿಯಾದ ಇಂಡಿ ತಾಲ್ಲೂಕಿಗೆ ಕಳೆದ 2 ವರ್ಷಗಳಿಂದ ತಾಲ್ಲೂಕಿನ 19 ಕೆರೆಗಳನ್ನು ತುಂಬಿಸುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ನೀರಾವರಿಯಿಂದ ವಂಚಿತವಾದ ಗ್ರಾಮಗಳಿಗೆ ನೀರಾವರಿ ಸಔಲಭ್ಯ ಕಲ್ಪಿಸಲಾಗಿದೆ. ರೇವಣಿಸಿದ್ದೇಶ್ವರ ಏತ ನೀರಾವರಿ ಪ್ರಾರಂಭವಾದರೆ ಶೇ 95ರಷ್ಟು ನೀರಾವರಿ ತಾಲ್ಲೂಕಾಗಿ ಮಾರ್ಪಡುತ್ತದೆ.

ತಾಲ್ಲೂಕಿನ ಗ್ರಾಮೀಣ ರಸ್ತೆಗಳು ಹಾಳಾಗಿದ್ದು, ಅವುಗಳ ರಿಪೇರಿಗಾಗಿ ಮಾತ್ರ ಕಾಯುತ್ತಿದೆ. ಭೀಮಾ ನದಿಯ ನೀರಿನ ಪಾಲನ್ನು ಬಳಸಿಕೊಳ್ಳಬೇಕಿದೆ. ವ್ಯಾಪಾರ ವಹಿವಾಟಿನ ಅಭಿವೃದ್ಧಿಯಾಗಬೇಕಿದೆ. ಆರೋಗ್ಯ ಸೌಲಭ್ಯಗಳು ಆಗಬೇಕಿದೆ. ಇನ್ನೂ ಕೆಲವು ಮಹತ್ವದ ಕಾರ್ಯಗಳು ಆಗಬೇಕಿದೆ. ಅವೆಲ್ಲ ಸೌಲಭ್ಯಗಳು ಕಂಡುಕೊಳ್ಳಲು ತಾಲ್ಲೂಕು ಕೇಂದ್ರ, ಜಿಲ್ಲಾ ಕೇಂದ್ರವದರೆ ಗಡಿ ನಾಡು ಅಭಿವೃದ್ಧಿಯಾಗುತ್ತದೆ ಎಂದು ಜನಸಾಮಾನ್ಯರು ಕನಸು ಕಾಣತ್ತಿದ್ದಾರೆ.

ಅದೇ ನಿಟ್ಟಿನಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲರು ಕೆಲವೇ ದಿನಗಳಲ್ಲಿ ಇಂಡಿ ತಾಲ್ಲೂಕು ಜಿಲ್ಲಾ ಕೇಂದ್ರ ಮಾಡುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಇನ್ನು ಎಷ್ಟು ದಿನ ಕಾಯಬೇಕು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ರಾಜ್ಯದ ಯಾವುದೇ ಜಿಲ್ಲೆ ವಿಭಜಿಸಲು ಸರ್ಕಾರ ಮುಂದಾದರೆ ಅದೇ ಸಂದರ್ಭದಲ್ಲಿ ಇಂಡಿ ಕೂಡಾ ಜಿಲ್ಲಾ ಕೇಂದ್ರವನ್ನಾಗಿ ಮಾಡಲಾಗುವುದು.
ಯಶವಂತರಾಯಗೌಡ ಪಾಟೀಲ, ಶಾಸಕ 
ನಮ್ಮ ತಾಲ್ಲೂಕು ಮಹಾರಾಷ್ಟ್ರದ ಗಡಿಯಲ್ಲಿರುವುದರಿಂದ ಕಳೆದ 7 ದಶಕಗಳಿಂದ ಅಭಿವೃದ್ಧಿ ವಂಚಿತವಾಗಿದೆ. ಇದು ಜಿಲ್ಲೆಯಾದರೆ ಅಭಿವೃದ್ಧಿಯ ಭರವಸೆಯಿದೆ. ಜಿಲ್ಲೆ ಮಾಡಲು ಯಾರೇ ಪ್ರಯತ್ನಿಸಲಿ ಅದಕ್ಕೆ ಸಂಪೂರ್ಣ ಬೆಂಬಲವಿದೆ
ಬಿ.ಡಿ.ಪಾಟೀಲ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ, ಇಂಡಿ
ತಾಲ್ಲೂಕಿನಲ್ಲಿ ವಿಭಾಗೀಯ ಎಸಿ ಕಚೇರಿ ಡಿವೈಎಸ್ಪಿ ಕಚೇರಿ ರಾಜ್ಯಮಟ್ಟದ ನಿಂಬೆ ಅಭಿವೃದ್ಧಿ ಮಂಡಳಿ ಕೃಷಿ ವಿಜ್ಞಾನ ಕೇಂದ್ರ ಆಗಿರುವುದರಿಂದ ಇದು ಜಿಲ್ಲೆಯಾದರೆ ಗಡಿ ಪ್ರದೇಶವಾದ ಇಂಡಿ ಅಭಿವೃದ್ಧಿಯಾಗುವುದರಲ್ಲಿ ಸಂದೇಹವಿಲ್ಲ.
ಭೀಮಣ್ಣ ಕವಲಗಿ, ಅಧ್ಯಕ್ಷ, ನಿಂಬೆ ಅಭಿವೃದ್ಧಿ ಮಂಡಳಿ
ಗಡಿ ನಾಡು ಇಂಡಿ ತಾಲ್ಲೂಕಿನಲ್ಲಿ ಭೀಮಾ ನದಿ ಹರಿದಿದೆ. ಅದರ ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳಬೇಕಿದೆ. ಇದು ಜಿಲ್ಲೆಯಾದರೆ ರಾಜ್ಯದ ಗಮನ ಸೆಳೆಯುತ್ತದೆ. ಅಭಿವೃದ್ಧಿಗೆ ಅನುಕೂಲವಾಗುತ್ತದೆ.
ಸದಾಶಿವ ಪ್ಯಾಟಿ, ಅಧ್ಯಕ್ಷ, ಹಿಂಗಣಿ ಗ್ರಾಮ ಪಂಚಾಯಿತಿ
ಇಂಡಿ ಮಿನಿ ವಿಧಾನಸೌಧ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.