ಇಂಡಿ: ಕೇವಲ ಎರಡೇ ವರ್ಷದಲ್ಲಿ ಇಂಡಿ ತಾಲ್ಲೂಕಿನ ರೈತರು ಏಳು ಲಕ್ಷ ನಿಂಬೆ ಸಸಿಗಳನ್ನು ಮಾರಾಟ ಮಾಡುವಲ್ಲಿ ಸಫಲವಾಗಿದ್ದಾರೆ. ಇಂಡಿ ತಾಲ್ಲೂಕು ನಿಂಬೆ ಬೆಳೆಗೆ ಪ್ರಸಿದ್ದಿ ಪಡೆದುಕೊಂಡಿದೆ. ಇಲ್ಲಿಯ ನಿಂಬೆಯ ಗುಣಮಟ್ಟ ರಾಜ್ಯದಲ್ಲಿ ಎಲ್ಲಿಯೂ ಸಿಗುವುದಿಲ್ಲ ಎಂಬ ಮಾತಿದೆ.
ಇಂಡಿ ತಾಲ್ಲೂಕಿನ ಬಹುತೇಕ ರೈತರು ನಿಂಬೆ ಬೆಳೆಯುತ್ತಿದ್ದಾರೆ. ರಾಜ್ಯದ ಒಟ್ಟು ನಿಂಬೆ ಬೆಳೆಯ ಅರ್ಧದಷ್ಟು ಬೆಳೆ ತಾಲ್ಲೂಕಿನಿಂದ ಸರಬರಾಜು ಆಗುತ್ತಿದೆ. ಇದನ್ನರಿತ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ 2017ರಲ್ಲಿ ಮುಖ್ಯ ಮಂತ್ರಿಗಳಿಗೆ ಒತ್ತಡ ಹೇರಿ ಇಂಡಿ ಪಟ್ಟಣದಲ್ಲಿ ನಿಂಬೆ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ರೈತರಿಗೆ ಉತ್ತೇಜನ ಸಿಕ್ಕಿದೆ. ತಾಲ್ಲೂಕಿನಲ್ಲಿರುವ ನಿಂಬೆ ಅಭಿವೃದ್ಧಿ ಮಂಡಳಿಯಿಂದ ವಿವಿಧ ತರಬೇತಿ ನಡೆಯುತ್ತಿದ್ದು, ಇದೂ ಸಹ ನಿಂಬೆ ಬೆಳೆಯಲು ಪೂರಕವಾಗಿದೆ.
ಕೇವಲ ನಿಂಬೆ ಅಭಿವೃದ್ಧಿ ಮಂಡಳಿ ಸ್ಥಾಪಸಿದರೆ ಸಾಲದು ಎಂದು ಶಾಸಕ ಪಾಟೀಲ 2023 ರಲ್ಲಿ ನಿಂಬೆ ಬೆಳೆಗೆ ಜಿಯೋಗ್ರಾಫಿಕಲ್ ಇಂಡಿಕೇಷನ್ (ಜಿಐ) ಟ್ಯಾಗ್ ಪಡೆಯುವಲ್ಲಿಯೂ ಕೂಡಾ ಯಶಸ್ವಿಯಾಗಿದ್ದಾರೆ. ಇದರಿಂದ ಈಗ ಇಂಡಿ ನಿಂಬೆಗೆ ಜಾಗತಿಕ ಮಟ್ಟದಲ್ಲಿ ಗುರುತಿಸುವಂತಾಗಿ ಬೆಲೆ ಹೆಚ್ಚಾಗಿದ್ದಲ್ಲದೇ ಅದರ ಬೇಡಿಕೆ ಹೆಚ್ಚಾಗಿದೆ.
ಇಂಡಿ ತಾಲ್ಲೂಕಿನ ರೈತರು ನಿಂಬೆ ಸಸಿಗೆ ಬೇಡಿಕೆ ಹೆಚ್ಚಾಗಿದ್ದನ್ನು ಗಮನಿಸಿ ಸಸಿಗಳನ್ನು ಬೆಳೆಸುತ್ತಿದ್ದಾರೆ. ಕಳೆದ 2 ವರ್ಷಗಳಲ್ಲಿ ಮಹಾರಾಷ್ಟ್ರ, ಗೋವಾ, ತಮಿಳನಾಡು ಮುಂತಾದ ರಾಜ್ಯಗಳ ರೈತರು ನಿಂಬೆ ಸಸಿಗಳನ್ನು ಇಲ್ಲಿಂದಲೇ ಖರೀದಿ ಮಾಡುತ್ತಿದ್ದಾರೆ. ತಾಲ್ಲೂಕಿನ ವಿವಿಧ ಗ್ರಾಮಗಳ ರೈತರಿಂದ ಈಗಾಗಲೇ ಸುಮಾರು 7 ಲಕ್ಷ ಸಸಿಗಳ ಮಾರಾಟವಾಗಿದೆ.
ತಾಂಬಾ ಗ್ರಾಮದ ಭೀರಪ್ಪ ವಗ್ಗಿ ಎಂಬ ರೈತರು ಕಳೆದ 2 ವರ್ಷಗಳಲ್ಲಿ 3 ಲಕ್ಷ ನಿಂಬೆ ಸಸಿಗಳನ್ನು ಕರ್ನಾಟಕದ ಬೆಂಗಳೂರು, ಮೈಸೂರು, ರಾಮನಗರ, ಶಿವಮೊಗ್ಗ, ಹರಪನಹಳ್ಳಿ, ಇಲಕಲ್ಲಗಳಿಗೆ ಹಾಗೂ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳಿಗೆ ಮಾರಿ ದಾಖಲೆ ಮಾಡಿದ್ದಾರೆ. ತೋಟಗಾರಿಕಾ ಇಲಾಖೆಯ ನರ್ಸರಿಯಿಂದ 14 ಸಾವಿರ ಸಸಿಗಳು ಇಲ್ಲಿಯವರೆಗೆ ಮಾರಾಟ ಮಾಡಿದ್ದು, ಇನ್ನೂ 8 ಸಾವಿರ ನಿಂಬೆ ಸಸಿಗಳಿಗೆ ಬೇಡಿಕೆ ಬಂದಿದೆ.
ಇಂಡಿ ತಾಲ್ಲೂಕಿನ ಬಹುತೇಕ ಗ್ರಾಮಗಳ ರೈತರು ತಮ್ಮ ಜಮೀನಿನ ಕೆಲವು ಭಾಗವನ್ನು ನಿಂಬೆ ನರ್ಸರಿಗಾಗಿಯೇ ಮೀಸಲಿಟ್ಟಿದ್ದಾರೆ. ತಾಲ್ಲೂಕಿನ ತಾಂಬಾ, ಸಾಲೋಟಗಿ, ಬೆನಕನಹಳ್ಳಿ, ತಡವಲಗಾ, ರೂಗಿ, ಬೊಳೆಗಾಂವ ಮುಂತಾದ ಗ್ರಾಮಗಳ ರೈತರು ನಿಂಬೆ ಬೆಳೆ ಜೊತೆ 2 ರಿಂದ 3 ಎಕರೆ ಜಮೀನು ಸಸಿಗಾಗಿಯೇ ಮೀಸಲಿಟ್ಟು, ನಿಂಬೆ ಸಸಿಗಳನ್ನು ಬೆಳೆಸುತ್ತಿದ್ದಾರೆ. ಪೋಷಕಾಂಶವುಳ್ಳ ಗೊಬ್ಬರ ಬಳಸಿ, ಮಣ್ಣು ಹದ ಮಾಡುತ್ತಾರೆ. ಸಸಿ ಹೊರ ತೆಗೆಯುವಾಗ ಬೇರು ಕತ್ತರಿಸದಂತೆ ಮುಂಜಾಗ್ರತೆ ವಹಿಸುತ್ತಾರೆ. ಗುಣಮಟ್ಟದ ಸಸಿಗಳನ್ನು ಬೆಳೆಸಿ, ಮಾರುತ್ತಾರೆ. ಕೆಲ ರೈತರು ಒಂದು ವರ್ಷದ ಸಸಿಗೆ ₹50 ಎರಡು ವರ್ಷದ ಸಸಿಗೆ ₹75 ಅದಕ್ಕಿಂತ ಹೆಚ್ಚಿನ ಅವಧಿಯ ಸಸಿಗಳಿಗೆ ₹100ರಂತೆ ಮಾರಾಟ ಮಾಡಿ ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ.
’ನಿಂಬೆ ಅಭಿವೃದ್ಧಿ ಮಂಡಳಿ ಆಡಳಿತ ಕಚೇರಿಗೆ ಹಾಗೂ ನಿಂಬೆ ಬೈಪ್ರೊಡಕ್ಟ್ ಫ್ಯಾಕ್ಟರಿಗಾಗಿ ಇಂಡಿ ಪಟ್ಟಣದಲ್ಲಿ 3.13 ಎಕರೆ ಸ್ಥಳವಕಾಶ ಪಡೆದುಕೊಂಡಿದ್ದು, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಿಂದ ₹1.5 ಕೋಟಿ ಅನುದಾನ ಬಿಡುಗಡೆಯಾಗಿದೆ. ಲೋಕೋಪಯೋಗಿ ಇಲಾಖೆ ಕಟ್ಟಡದ ಕಾರ್ಯ ನಡೆಸಿದೆ. ನಿಂಬೆಗೆ ಕೋಲ್ಡ್ ಸ್ಟೋರೇಜ್, ಟ್ರೇಡಿಂಗ್, ಬೈ ಪ್ರೊಡಕ್ಸ್ ಕಟ್ಟಡಗಳಿಗಾಗಿ ನಬಾರ್ಡ್ ದಿಂದ ₹12.75 ಕೋಟಿ ಅನುದಾನ ಮಂಜೂರಿಯಾಗಿದೆ. ಮಂಡಳಿಗೆ ಪೂರ್ಣಪ್ರಮಾಣದ ನಿರ್ದೇಶಕರನ್ನು ಸರ್ಕಾರ ಇಷ್ಟರಲ್ಲಿಯೇ ನೇಮಕ ಮಾಡುವ ಭರವಸೆ ಇದೆ’ ಎಂದು ನಿಂಬೆ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಎಚ್.ಎಸ್.ಪಾಟೀಲ ತಿಳಿಸಿದ್ದಾರೆ.
ಇಂಡಿ ನಿಂಬೆಗೆ ಜಿಐ ಟ್ಯಾಗ್ ಸಿಕ್ಕಿರುವದರಿಂದ ವರ್ಷದಿಂದ ವರ್ಷಕ್ಕೆ ಸಸಿಗಳ ಮಾರಾಟ ಹೆಚ್ಚಾಗುತ್ತಿದೆ. ಇತರೆ ರಾಜ್ಯಗಳಿಂದ ನಿಂಬೆ ಸಸಿ ಖರೀದಿಸಲು ರೈತರು ಬರುತ್ತಿದ್ದಾರೆಶಾಸಕ ಯಶವಂತರಾಯಗೌಡ ಪಾಟೀಲ
ಇಂಡಿ ನಿಂಬೆಗೆ ಜಿಐ ಟ್ಯಾಗ್ ದೊರೆತಿರುವುದರಿಂದ ಇಂಡಿ ತಾಲ್ಲೂಕಿನ ಹೆಚ್ಚಿನ ರೈತರು ನಿಂಬೆ ಸಸಿಗಳ ನರ್ಸರಿ ಆರಂಭಿಸಿದ್ದಾರೆ. ಇಲಾಖೆಯಿಂದ 14 ಸಾವಿರ ಸಸಿಗಳು ರೈತರಿಂದ ಕಳೆದ 2 ವರ್ಷಗಳಲ್ಲಿ 7 ಲಕ್ಷ ನಿಂಬೆ ಸಸಿ ಬೆಳೆಸಿ ಮಾರಾಟ ಮಾಡಿದ್ದಾರೆ.ಎಚ್.ಎಸ್.ಪಾಟೀಲ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ
ನಿಂಬೆ ಬೆಳೆಗಾರರಿಗೆ ಆತ್ಮಸ್ಥೈರ್ಯ ತುಂಬಲು ನಿಂಬೆ ಅಭಿವೃದ್ಧಿ ಮಂಡಳಿ ರಚಿಸಿ ಅದಕ್ಕೆ ಜಿಐ ಟ್ಯಾಗ್ ಕೂಡಾ ಸಿಎಂ ಮಾಡಿಸಿಕೊಟ್ಟಿದ್ದಾರೆ. ಅಸ್ಸಾಂ ದಾರ್ಜಿಲಿಂಗ್ ಚಹಾ ಹೇಗೆ ವಿಶ್ವವಿಖ್ಯಾತವಾಗಿದೆಯೋ ಅದೇ ರೀತಿ ಇಂಡಿ ನಿಂಬೆಗೆ ವಿಶ್ವ ವಿಖ್ಯಾತಗೊಳಿಸುವ ಸಂಕಲ್ಪ ಮಾಡಿರುವೆರಾಜಶೇಖರ ನಿಂಬರಗಿ ಬೆನಕನಹಳ್ಳಿ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.