ಇಂಡಿ : ಪಟ್ಟಣದ ಇಂಡಿ -ಸಾಲೋಟಗಿ ಗ್ರಾಮದ ಹಳೆಯ ಗಾಡಿ ರಸ್ತೆಯನ್ನು ಮಿನಿವಿಧಾನ ಸೌಧದಿಂದ ಗಣಪತಿ ಗುಡಿ ವರೆಗೆ ಸುಮಾರು 100 ಮೀಟರ್ ರಸ್ತೆ ಒತ್ತುವರಿ ವಿವಾದ ಹಲವು ವರ್ಷಗಳಿಂದ ಬಗೆಹರಿಯದೇ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗಿದೆ.
ಒತ್ತುವರಿ ಜಾಗವನ್ನು ಈಗಾಗಲೇ ಪೊಲೀಸ್ ಇಲಾಖೆ ತೆರವುಗೊಳಿಸಿದೆ. ಆದರೆ, ರಸ್ತೆಯ ಅಕ್ಕಪಕ್ಕದ ನಿವಾಸಿಗಳು ಮಾಡಿರುವ ಒತ್ತುವರಿ ತೆರವಾಗದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಒತ್ತುವರಿ ತೆರವಿಗೆ ಆಗ್ರಹಿಸಿ ಕಳೆದ 16 ವರ್ಷಗಳಿಂದ ಪುರಸಭೆಗೆ, ತಾಲ್ಲೂಕು ಆಡಳಿತಕ್ಕೆ, ಲೋಕಾಯುಕ್ತ ಇಲಾಖೆಗೆ ಸಾರ್ವಜನಿಕರು ಮನವಿ ಪತ್ರ ಸಲ್ಲಿಸಿದರೂ ಇಲ್ಲಿಯವರೆಗೆ ಯಾವುದೇ ಕ್ರಮ ಆಗಿಲ್ಲ.
ಒತ್ತುವರಿಯಾಗಿರುವ ಈ ರಸ್ತೆಯ ಮೇಲೆ ಕಂಪೌಂಡ್ ಗೋಡೆಯ ಕಲ್ಲು, ಮಣ್ಣು ಮತ್ತು ಮತ್ತೊಂದು ಬದಿಗೆ ಬೆಳೆದಿರುವ ಮುಳ್ಳಿನ ಕಂಟಿ ರಸ್ತೆಯ ಮೇಲೆ ಬಿದ್ದು, ಅಲ್ಲಿದ್ದ ಹಳೆಯ ಗಟಾರ ಮುಚ್ಚಿಕೊಂಡು ಗಟಾರದ ಕೊಳಚೆ ನೀರು ಮುಂದೆ ಸಾಗದೇ ಅಕ್ಕಪಕ್ಕದವರ ಮನೆ ಸೇರುತ್ತಿದೆ.
ಕೊಳಚೆ ನೀರು ಗಬ್ಬು ವಾಸನೆ ಬೀರಿದ್ದಲ್ಲದೇ ಕಚ್ಚುವ ಹುಳಗಳು ಹುಟ್ಟಿಕೊಂಡಿವೆ. ಸಾರ್ವಜನಿಕರು ತಮ್ಮ ಮನೆಗಳಲ್ಲಿ ವಾಸ ಮಾಡಲು ಕಷ್ಟವಾಗುತ್ತಿದೆ. ಈ ರಸ್ತೆಯ ಮುಂದಿನ ಕೆಲಸಕ್ಕೆ ಅಧಿಕಾರಿಗಳು ಕ್ರಮ ಜರುಗಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಈ ರಸ್ತೆಯನ್ನು ತೆರವು ಮಾಡಿಸಿಕೊಟ್ಟರೆ ರಸ್ತೆ ಅಭಿವೃದ್ಧಿ ಮಾಡಿಕೊಡುವದಾಗಿ ಸ್ಥಳೀಯ ಪುರಸಭೆ ಹಲವಾರು ಸಲ ಠರಾವು ಪಾಸು ಮಾಡಿದೆ. ಆದರೂ ಕೂಡಾ ಈ ರಸ್ತೆ ಮಾತ್ರ ತೆರವಾಗುತ್ತಿಲ್ಲ. ಇಲ್ಲಿ 60 ಅಡಿ ಅಳತೆಯ ರಸ್ತೆಯಿದೆ ಎಂದು ಸಿಟಿ ಸರ್ವೆ ಇಲಾಖೆ ಸುಮಾರು ಸಲ ಸರ್ವೆ ಮಾಡಿ, ಜಾಗ ಗುರುತಿಸಿ ಕಂಬಗಳನ್ನೂ ಕೂಡಾ ನಡೆಸಿದೆ. ಇಷ್ಟಾದರೂ ಕೂಡಾ ಈ ರಸ್ತೆ ಮಾತ್ರ ತೆರವು ಮಾಡುತ್ತಿಲ್ಲ. ಸ್ಥಳೀಯ ಶಾಸಕರು ಮಧ್ಯ ಪ್ರವೇಶಿಸಿ, ಸಮಸ್ಯೆ ಬಗೆಹರಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಒತ್ತುವರಿ ರಸ್ತೆ ವೀಕ್ಷಣೆ ಮಾಡಿದ್ದೇನೆ. ಪುರಸಭೆಯ ಅಧಿಕಾರಿಗಳ ಸಭೆ ಕರೆದಿದ್ದೇನೆ. ರಸ್ತೆ ಅಭಿವೃದ್ದಿಗೆ ಅಗತ್ಯ ಕ್ರಮ ಜರುಗಿಸುತ್ತೇನೆ. –ಅನುರಾಧಾ ವಸ್ತ್ರದ ಉಪ ಕಂದಾಯ ವಿಭಾಗಾಧಿಕಾರಿ ಇಂಡಿ
ಸಾಲೋಟಗಿ ಗ್ರಾಮಕ್ಕೆ ಹೋಗುವ ಗಾಡಿ ರಸ್ತೆ ಬಂದಾಗಿದೆ. ಅಲ್ಲಿರುವ ಗಟಾರದ ನೀರು ನಿಂತು ಗಬ್ಬು ವಾಸನೆ ಹರಡಿದೆ. ಇದರಿಂದ ಸೊಳ್ಳೆಗಳ ಕಾಟವಾಗಿದ್ದು ಮನೆಯಲ್ಲಿ ಮಲಗಲು ಸಾಧ್ಯವಾಗುತ್ತಿಲ್ಲಟಿ.ಎಚ್.ಬಿರಾದಾರ ವಕೀಲ
ತೆರವು ಮಾಡಿಸಿದ ಇಂಡಿ-ಸಾಲೋಟಗಿ ಗಾಡಿ ರಸ್ತೆ ಕೆಲಸ ಪುರಸಭೆಯವರು ಪ್ರಾರಂಭಿಸಲು ಅಡತಡೆ ಬಂದರೆ ಪೊಲೀಸ್ ಇಲಾಖೆ ಸಹಕಾರ ಪಡೆಯುತ್ತೇವೆ–ಬಿ.ಎಸ್.ಕಡಕಬಾವಿ ತಹಶೀಲ್ದಾರ್ ಇಂಡಿ
ರಸ್ತೆ ಆಕ್ರಮಿಸಿಕೊಂಡವರು ಕೋರ್ಟ್‌ಗೆ ಹೋಗಿ ತಡೆ ತಂದಿದ್ದಾರೆ. ಆದರೆ ಪುರಸಭೆಯ ಅಧಿಕಾರಿಗಳು ಸರಿಯಾಗಿ ಕೋರ್ಟ್‌ಗೆ ಮಾಹಿತಿ ನೀಡದೇ ವಿಳಂಬ ಮಾಡುತ್ತಿದ್ದಾರೆ. ಕಾರಣ ರಸ್ತೆ ಅಭಿವೃದ್ಧಿ ಕೆಲಸ ನಿಂತಿದೆ.ಅನೀಲಗೌಡ ಬಿರಾದಾರ ಪುರಸಭೆ ಸದಸ್ಯಇಂಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.