
ಇಂಡಿ: ಇಂಡಿ ತಾಲ್ಲೂಕನ್ನು ಜಿಲ್ಲೆ ಕೇಂದ್ರವನ್ನಾಗಿ ಮಾಡಬೇಕೆಂಬ ಶಾಸಕ ಯಶವಂತರಾಯಗೌಡ ಪಾಟೀಲರ ಕನಸಿಗೆ ಮತ್ತೊಂದು ಮೈಲುಗಲ್ಲು ದೊರೆತಿದ್ದು, ಇಂಡಿ ಪುರಸಭೆಯನ್ನು 2025 ಡಿಸೆಂಬರ್ 1ರಿಂದಲೇ ಜಾರಿಗೆ ಬರುವಂತೆ ನಗರಸಭೆಯಾಗಿ ಮೇಲ್ದರ್ಜೆಗೇರಿಸಿ ಸರ್ಕಾರ ಆದೇಶ ಹೊರಡಿಸಿದೆ.
ಡಿಸೆಂಬರ್ 23ರಂದು ನಗರಸಭೆ ಕಾರ್ಯಾಲಯ ಲೋಕಾರ್ಪಣೆ ಮಾಡಲು ಇಂಡಿಯಲ್ಲಿ ಈಗಾಗಲೇ ಭರದ ಸಿದ್ದತೆಗಳು ಆರಂಭವಾಗಿದೆ. ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಸೇರಿದಂತೆ ಸಚಿವ ಸಂಪುಟದ ಸದಸ್ಯರು ಅನುಮೋದಿಸಿದ್ದರು. ಸರ್ಕಾರ ಗೆಜೆಟ್ ನೋಟಿಫಿಕೇಷನ್ ನಂತರ ಪುರಸಭೆ ನಗರಸಭೆಯನ್ನಾಗಿ ಮೇಲ್ದೇರ್ಜೆಗೇರಿಸಿ ಅದೇಶಿಸಿರುವುದು ಪಟ್ಟಣದ ಜನತೆಗೆ ಸಂತಸ ತಂದಿದೆ.
ನಗರಸಭೆಗೆ ಅನುದಾನ ಹೆಚ್ಚು: ಪುರಸಭೆಯನ್ನು ರಾಜ್ಯ ಸರ್ಕಾರ ನಗರ ಸಭೆಯನ್ನಾಗಿ ಮೇಲ್ದರ್ಜೆಗೇರಿಸಿ ಆದೇಶಿಸಿರುವುದರಿಂದ ನಗರದ ಅಭಿವೃದ್ಧಿಗೆ ಸರ್ಕಾರದ ಅನುದಾನಗಳು ಪ್ರಯೋಜನವಾಗಲಿದೆ. ಪುರಸಭೆಯು ನಗರಸಭೆ ಮೇಲ್ದರ್ಜೆಗೆ ಏರಿರುವುದರಿಂದ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ ಅನುದಾನಗಳು ಯೋಜನೆಗಳು ಸವಲತ್ತುಗಳು ಹೆಚ್ಚಾಗುವ ಭರವಸೆ ಜನ ಸಾಮಾನ್ಯರಲ್ಲಿ ಮೂಡಿದೆ.
ಡಿಸೆಂಬರ್ 23ರಂದು ನಗರಸಭೆ ಕಾರ್ಯಾಲಯ ಇಂಡಿ ಹಾಗೂ ನಗರ ಯೋಜನಾ ಪ್ರಾಧಿಕಾರ ಇಂಡಿ ಕಚೇರಿಗಳ ಪ್ರಾರಂಭೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಪುರಸಭೆ ಇದ್ದ ಸಂದರ್ಭದಲ್ಲಿ 23 ವಾರ್ಡಗಳಿದ್ದು, ಈಗ ನಗರಸಭೆಯಾಗಿ ಮಾರ್ಪಟ್ಟಿದ್ದಕ್ಕೆ 31 ವಾರ್ಡಗಳಾಗಿ ವಿಂಗಡಿಸಲಾಗಿದೆ.
ಸಮಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ನಗರಾಭಿವೃಧ್ಧಿ ಮತ್ತು ನಗರ ಯೋಜನೆ ಸಚಿವ ಭೈರತಿ ಸುರೇಶ ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್, ಕಬ್ಬು ಅಭಿವೃಧ್ಧಿ, ಸಕ್ಕರೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಸೇರಿದಂತೆ ರಾಜ್ಯ ಹಾಗೂ ಜಿಲ್ಲೆಯ ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಯಶವಂತಾರಾಯಗೌಡ ಪಾಟೀಲ ವಹಿಸಲಿದ್ದಾರೆ.
ಅಧಿಕಾರದ ಅವಧಿಯಲ್ಲಿ ಮಾಡಿರುವ ಕೆಲಸಗಳು ಶಾಶ್ವತವಾಗಿರುತ್ತವೆ. ರಾಜ್ಯದಲ್ಲಿ ನಮ್ಮದೇ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಇರುವುದರಿಂದ ತಾಲ್ಲೂಕಿನಲ್ಲಿ ಅಭಿವೃದ್ಧಿ ಸಾಧ್ಯವಾಗುತ್ತಿದೆಯಶವಂತರಾಯಗೌಡ ಪಾಟೀಲ ಶಾಸಕ
ಇಂಡಿ ಮತಕ್ಷೇತ್ರವನ್ನು ಶಾಸಕ ಯಶವಂತರಾಯಗೌಡ ಪಾಟೀಲರ ದೂರದೃಷ್ಟಿಯಿಂದ ಈಗ ಅಭಿವೃಧ್ಧಿ ಪಥದತ್ತ ಸಾಗುತ್ತಿದೆ. ನಗರ ಸಭೆಯಾಗಿ ಮೇಲ್ದರ್ಜೆಗೇರಿಸಿದ್ದು ಸಂತಸ ತಂದಿದೆಶಾಂತುಗೌಡ ಬಿರಾದಾರ ಇಂಡಿ ಪಟ್ಟಣದ ನಾಗರಿಕ