Indie woman in 'Shakti' scheme advertisement
ವಿಜಯಪುರ: ‘ವರ್ಲ್ಡ್ ಬುಕ್ ಆಫ್ ರೆಕಾರ್ಡ್’ಗೆ ಸೇರಿದ ‘ಶಕ್ತಿ’ ಯೋಜನೆಗೆ ಸಂಬಂಧಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರಿ ಜಾಹೀರಾತಿನಲ್ಲಿ ವಿಜಯಪುರದ ಮಹಿಳೆಯೊಬ್ಬರು ಮಿಂಚಿದ್ದಾರೆ.
‘ವಿಶ್ವ ದಾಖಲೆ ಬರೆದ ಗ್ಯಾರಂಟಿ ಯೋಜನೆ’ ಎಂಬ ಜಾಹೀರಾತಿನಲ್ಲಿ ಇಂಡಿ ತಾಲ್ಲೂಕಿನ ಬಬಲಾದ ಗ್ರಾಮದ ‘ಒಡಲ ಧ್ವನಿ’ ಮಹಿಳಾ ಒಕ್ಕೂಟದ ಸದಸ್ಯೆ ಬಾಯಿಜಾ ಬಾಯಿ ಹರಿಜನ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರಿಗೆ ಬಸ್‌ನಲ್ಲಿ ಉಚಿತ ಪ್ರಯಣಕ್ಕೆ ಟಿಕೆಟ್ ನೀಡುವ ಚಿತ್ರ ಬಳಕೆಯಾಗಿದೆ.
ಈ ಜಾಹೀರಾತಿನಲ್ಲಿ ಮುಖ್ಯಮಂತ್ರಿ ಅವರು ‘ಈ ಅಭೂತಪೂರ್ವ ಯಶಸ್ವಿಗೆ ಕಾರಣೀಭೂತರಾದ ಸಾರಿಗೆ ನಿಗಮದ ಎಲ್ಲ ಅಧಿಕಾರಿ, ಸಿಬ್ಬಂದಿಗೆ ಹಾಗೂ ಪ್ರಯಾಣಿಕರಿಗೆ ಅಭಿನಂದನೆ’ ತಿಳಿಸಿದ್ದಾರೆ.
‘ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ನಿವಾಸದ ಎದುರು ಜುಲೈ 14ರಂದು ನಡೆದ ಶಕ್ತಿ ಯೋಜನೆಯಡಿ 500 ಕೋಟಿ ಟಿಕೆಟ್ ವಿತರಣೆ ಸಮಾರಂಭಕ್ಕೆ ನನ್ನನ್ನು ಆಹ್ವಾನಿಸಿದ್ದರು. ಇದೀಗ ಶಕ್ತಿ ಯೋಜನೆ ಜಾಹೀರಾತಿನಲ್ಲಿ ನನಗೆ ಟಿಕೆಟ್ ನೀಡುವ ಚಿತ್ರವನ್ನು ಬಳಸಿಕೊಂಡಿರುವುದಕ್ಕೆ ತುಂಬಾ ಖುಷಿಯಾಗಿದೆ’ ಎಂದು ಬಬಲಾದ ಗ್ರಾಮದ ‘ಒಡಲ ಧ್ವನಿ’ ಮಹಿಳಾ ಒಕ್ಕೂಟದ ಸದಸ್ಯೆ ಬಾಯಿಜಾ ಬಾಯಿ ಹರಿಜನ ‘ಪ್ರಜಾವಾಣಿ’ಗೆ ತಿಳಿಸಿದರು.
‘ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಗೆ ಸಂಬಂಧಿಸಿದ ಮುಖ್ಯಮಂತ್ರಿಗಳ ಜಾಹೀರಾತಿನಲ್ಲಿ ವಿಜಯಪುರ ಜಿಲ್ಲೆ ಬಬಲಾದ ಗ್ರಾಮದ ಮಹಿಳೆ ಚಿತ್ರ ಬಳಕೆ ಮಾಡಿಕೊಂಡಿರುವುದು ಸಂತಸ ತಂದಿದೆ’ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.