ದೇವರಹಿಪ್ಪರಗಿ: ನಿವೃತ್ತಿ ಎಂಬುದು ನೌಕರಿಗೆ ಹೊರತು ನಾವು ಮಾಡುವ ಕಾಯಕಕ್ಕೆ ಅಲ್ಲ ಎಂದು ಕೃಷಿಯಲ್ಲಿ ತೊಡಗಿ, ಇತರರಿಗೂ ಮಾದರಿಯಾಗಿದ್ದಾರೆ ಪಟ್ಟಣದ ಬಸವರಾಜ ಪಾಟೀಲ.
ಬಸವರಾಜ ಪಾಟೀಲ ಅವರು ಮನಗೂಳಿ ಗ್ರಾಮದ ಬಿ.ಎಸ್.ಪಾಟೀಲ ಪದವಿಪೂರ್ವ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ಉಪನ್ಯಾಸಕರಾಗಿ ನಿವೃತ್ತಿ ಹೊಂದಿ, 2018ರಿಂದ ಕೃಷಿ ಕಾಯಕದಲ್ಲಿ ನಿರತರಾಗಿದ್ದಾರೆ.
22 ಎಕರೆ ಭೂಮಿಯಲ್ಲಿ 200 ನಿಂಬೆ, 4 ಎಕರೆಯಲ್ಲಿ ಕಬ್ಬು, 500 ಸೀತಾಫಲ, 200 ಪೇರಲ, 15 ನೇರಳೆ, ಹಲಸು, 50 ಮಾವು, 28 ತೆಂಗು, ಚೆರ‍್ರಿ, ಸ್ಟ್ರಾಬೆರಿ,ಬೆಟ್ಟದ ನೆಲ್ಲಿ, ರಾಮಫಲ, ಗಜನಿಂಬೆ, ಅಂಜೂರ, ಚಿಕ್ಕು,ಕರಿಬೇವು ಸೇರಿದಂತೆ ಒಟ್ಟು 1200 ಕ್ಕಿಂತಲೂ ಹೆಚ್ಚಿನ ಹಣ್ಣು ಹಾಗೂ ವಾಣಿಜ್ಯ ಬೆಳೆಗಳನ್ನು ಬೆಳೆದಿದ್ದಾರೆ. 13 ಎಕರೆಯಲ್ಲಿ ತೊಗರಿ ಬೆಳೆ ಬೆಳೆಯುತ್ತಿದ್ದು, ನೀರಿನ ಮೂಲಗಳಾಗಿ ಒಂದು ಬಾವಿ, 3 ಬೋರ್‌ವೆಲ್‌ಗಳಿವೆ. ನೀರಿನ ಸರಬರಾಜಿಗಾಗಿ ಪೂರ್ಣ ಪೈಪ್‌ಲೈನ್ ಹಾಗೂ ತುಂತುರು, ಹನಿ ನೀರಾವರಿ ಘಟಕದ ವ್ಯವಸ್ಥೆ ಮಾಡಿಕೊಂಡಿದ್ದಾರೆ.
‘ಕಳೆದ ಮೂರು ವರ್ಷಗಳಿಂದ ಕಬ್ಬಿನ ಬೆಳೆ ಹಾಗೂ ನಿಂಬೆ ಬೆಳೆಯಿಂದ ಉತ್ತಮ ಆದಾಯ ಪಡೆಯುತ್ತಿದ್ದೇನೆ. ಕೃಷಿ ಕಾರ್ಯಗಳ ಅನುಕೂಲಕ್ಕಾಗಿ ತೋಟದಲ್ಲಿಯೇ ಮನೆ ಮಾಡಿಕೊಂಡಿದ್ದು, ತೊಗರಿ ಹಾಗೂ ಕಬ್ಬಿನ ಕೃಷಿಗೆ ಸಹಕಾರಿಯಾಗಿದೆ. ಪ್ರತಿದಿನ ಬೆಳಿಗ್ಗೆಯಿಂದ ಸಂಜೆವರೆಗೆ ಹಣ್ಣಿನ ಗಿಡಗಳಿಗೆ ನೀರು ಬಿಡುವುದು, ಗೊಬ್ಬರಗಳ ಅಗತ್ಯತೆ, ಕಟಾವು ಸೇರಿದಂತೆ ಎಲ್ಲ ಕೆಲಸಗಳನ್ನು ನೋಡಿಕೊಳ್ಳುತ್ತೇನೆ. ಇದರಿಂದ ನನಗೂ ನೆಮ್ಮದಿ’ ಎನ್ನುತ್ತಾರೆ ರೈತ ಬಸವರಾಜ.
ಕೃಷಿ ಕಾರ್ಯಕ್ಕೆ ಎರಡೂವರೆಯಿಂದ ಮೂರು ಲಕ್ಷ ವೆಚ್ಚ ಮಾಡುವ ಅವರು, ವಾರ್ಷಿಕವಾಗಿ ಏಳರಿಂದ ಎಂಟು ಲಕ್ಷ ಲಾಭವನ್ನು ಪಡೆಯುತ್ತಿದ್ದಾರೆ. ಸದ್ಯ ಪಟ್ಟಣದ ಪ್ರಗತಿಪರ ರೈತರಾಗಿ, ಯುವರೈತರಿಗೆ ಮಾರ್ಗದರ್ಶಕರೂ ಆಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.