
ಬಸವನಬಾಗೇವಾಡಿ: ತಾಲ್ಲೂಕಿನ ಬಳ್ಳಾವೂರು ತಾಂಡಾದ ರೈತ ಮಹಿಳೆ ಸುನಿತಾ ಅನಿಲಕುಮಾರ ರಾಠೋಡ ಅವರು ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಶ್ರೀಗಂಧ, ಮಹಾಗನಿ ಮರಗಳೊಂದಿಗೆ ದ್ರಾಕ್ಷಿ, ಬಾಳೆ, ತರಕಾರಿ, ಹಣ್ಣಿನ ಗಿಡಗಳು, ಕುರಿ-ಕೋಳಿ ಸಾಕಾಣಿಕೆ ಹೀಗೆ ಅಲ್ಪ ಕೃಷಿಭೂಮಿಯಲ್ಲಿ ‘ಅರಣ್ಯ ಕೃಷಿ ಸಮಗ್ರ ಬೆಳೆ ಪದ್ದತಿ’ ಯಶಸ್ವಿಯಾಗಿ ಅಳವಡಿಸಿಕೊಂಡು, ಸದ್ಯ ವಾರ್ಷಿಕ ₹ 4 ರಿಂದ ₹5 ಲಕ್ಷ ಆದಾಯ ಗಳಿಸುತ್ತಾ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ.
ಪರಿಸರಕ್ಕೆ ಪೂರಕ ಕೃಷಿ : ಪ್ರಗತಿಪರ ರೈತ ಮಹಿಳೆ ಸುನಿತಾ ರಾಠೋಡ ಅವರು ಕಡಿಮೆ ಭೂಮಿಯಲ್ಲಿ ಅಧಿಕ ಲಾಭ ಕಂಡುಕೊಳ್ಳುವ ಗುರಿಯೊಂದಿಗೆ ಕುಟುಂಬದವರ ಸಹಕಾರ ಪಡೆದು ತಮ್ಮ ಒಂದೂವರೆ ಎಕರೆ ದ್ರಾಕ್ಷಿ ತೋಟದಲ್ಲಿ ಎಲ್ಲಿಯೂ ಜಾಗ ವ್ಯರ್ಥವಾಗದಂತೆ ವಾರ್ಷಿಕ ಬೆಳೆಗಳ ಜತೆಗೆ ದೀರ್ಘ ಕಾಲದಲ್ಲಿ ಕೈಹಿಡಿಯುವ 350 ಶ್ರೀಗಂಧ ಹಾಗೂ 400 ಮಹಾಗನಿ ಗಿಡಗಳನ್ನು ಕಳೆದ ಮೂರು ವರ್ಷಗಳ ಹಿಂದೆ ನೆಟ್ಟಿದ್ದು ಸದ್ಯ ಬಾನ್ನೆತರಕ್ಕೆ ಬೆಳೆದು ನಿಂತಿವೆ. ಹನಿ ನೀರಾವರಿ ಪದ್ದತಿಯಲ್ಲಿ ನಿಯಮಿತವಾಗಿ ನೀರು, ಗೊಬ್ಬರ ಹಾಕಿ ಬೆಳೆಗಳ ನಿರ್ವಹಣೆ ಮಾಡುತ್ತಿದ್ದಾರೆ.
ಬಳ್ಳಿ ತರಕಾರಿ : ಶ್ರೀಗಂಧ, ಮಹಾಗನಿ ಮರಗಳಿಗೆ ಅಂತರ ಬೆಳೆಯಂತೆ ನಿರಂತರ ಆದಾಯಕ್ಕಾಗಿ ದ್ರಾಕ್ಷಿ ತಂತಿ, ಕಂಬಗಳಿಗೆ ಆಧಾರವಾಗಿ ಬೆಳೆದ ಬಳ್ಳಿ ಆಧಾರಿತ ಹಾಗಲಕಾಯಿ, ಹೀರೆಕಾಯಿ ಪ್ರತಿ ಸಾಲಿನಲ್ಲಿ ಸಮೃದ್ಧವಾಗಿ ಹಬ್ಬಿವೆ.
ಜೊತೆಗೆ ಕರಿಬೇವು, ಹತ್ತಾರು ಗುಲಾಬಿ ಗಿಡಗಳು, ತೆಂಗು, ಮಾವು, ಪೇರು, ಚಿಕ್ಕು, ಸೀತಾಫಲ ಗಿಡಗಳಿಂದ ತೋಟದಲ್ಲಿ ಹಸಿರಿನ ಸಿರಿ ಕಂಗೊಳಿಸುತ್ತಿದೆ.
ತೋಟದಲ್ಲಿ ಎರಡು ಕೊಳವೆಬಾವಿಗಳಿದ್ದು, ಕೃಷಿ ಅನುಕೂಲಕ್ಕಾಗಿ 30x30 ಅಳತೆಯ ಚಿಕ್ಕ ಕೃಷಿಹೊಂಡ, ಎರಡು ಎರೆಹುಳು ಗೊಬ್ಬರ ಘಟಕ, ಮೇವು ಸಾಕಾಣಿಕೆ ಶೆಡ್, ಟ್ರ್ಯಾಕ್ಟರ್ ಜೊತೆಗೆ ಹಲವು ಕೃಷಿ ಯಂತ್ರೋಪಕರಣ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಕುರಿ–ಕೋಳಿಯಿಂದಲೂ ಗಳಿಕೆ: ಸುನಿತಾ ಅವರು ತೋಟದಲ್ಲಿ ಬೆಳೆಗಳ ಜೊತೆ ಜಾನುವಾರು ಸಾಕಾಣಿಕೆಯಿಂದಲೂ ಲಾಭ ಗಳಿಸುತ್ತಿದ್ದಾರೆ. ಸದ್ಯ 30 ಕುರಿ, 20 ಆಡು, 50 ಕೋಳಿ ಹಾಗೂ ಎರಡು ಆಕಳು ಸಾಕಾಣಿಕೆ ಮಾಡಿ ಮಾರಾಟ ಮಾಡುತ್ತಿದ್ದು, ಅವುಗಳಿಗಾಗಿ ಪ್ರತ್ಯೇಕ ಶೆಡ್‌ಗಳನ್ನು ನಿರ್ಮಿಸಿಕೊಂಡಿದ್ದಾರೆ. ಜಾನುವಾರು ಗೊಬ್ಬರ, ಎರೆಹುಳು ಗೊಬ್ಬರವನ್ನು ಬೆಳೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ.
ವಾರ್ಷಿಕ ₹5 ಲಕ್ಷ ಲಾಭ: ದ್ರಾಕ್ಷಿ, ಹಾಗಲಕಾಯಿ, ಹೀರೆಕಾಯಿ ಬೆಳೆ, ಕುರಿ, ಆಡು, ಕೋಳಿ ಸಾಕಾಣಿಕೆ, ಹೈನುಗಾರಿಕೆ ಹೀಗೆ ಎಲ್ಲದರಿಂದ ಖರ್ಚು ವೆಚ್ಚ ತೆಗೆದು ವಾರ್ಷಿಕ ₹ 5 ಲಕ್ಷ ಆದಾಯ ಗಳಿಸುತ್ತಿದ್ದಾರೆ.
ಕಳೆದ ಮೂರು ತಿಂಗಳ ಹಿಂದೆ ದ್ರಾಕ್ಷಿ ಸಾಲುಗಳ ಮಧ್ಯದಲ್ಲಿ 400 ಬಾಳೆ ಗಿಡಗಳನ್ನು ಬೆಳೆದಿದ್ದಾರೆ. ಮುಂದಿನ ವರ್ಷ ಶ್ರೀಗಂಧ ಹಾಗೂ ಮಹಾಗನಿ ಮರಗಳಿಗೆ ಮರ ಕೃಷಿಯಾಧಾರಿತ ಕರಿ ಮೆಣಸು, ಯಾಲಕ್ಕಿಯಂತಹ ಬಳ್ಳಿ ಕೃಷಿ ಬೆಳೆದು ಅಧಿಕ ಲಾಭ ಮಾಡಿಕೊಳ್ಳುವ ವಿಚಾರ ಹೊಂದಿದ್ದಾರೆ. ಇದಲ್ಲದೇ ಬೇರೆಯವರ ಜಮೀನು ಪಾಲಿಗೆ ಪಡೆದು ತೊಗರಿ, ತರಕಾರಿ ಬೆಳೆಗಳನ್ನು ಬೆಳೆದು ಅಲ್ಲಿಯೂ ಲಕ್ಷಾಂತರ ಆದಾಯ ಗಳಿಸುತ್ತಿದ್ದಾರೆ.
ನನ್ನ ಕೃಷಿ ಕಾರ್ಯಕ್ಕೆ ಪತಿ ಹಾಗೂ ಕುಟುಂಬಸ್ಥರು ಬೆನ್ನೆಲುಬಾಗಿ ನಿಂತಿದ್ದಾರೆ. ಮರಗಳು ಆದಾಯ ಕೊಡುವವರೆಗೂ ಬಾಳೆ ಬಳ್ಳಿಯಾಧಾರಿತ ತರಕಾರಿ ಕುರಿಕೋಳಿ ಸಾಕಾಣಿಕೆ ಸಮಗ್ರ ಕೃಷಿ ನಿತ್ಯ ಆದಾಯ ಕೊಡುತ್ತವೆ-ಸುನಿತಾ ರಾಠೋಡ ರೈತ ಮಹಿಳೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.