
ವಿಜಯಪುರ: ಅಪಸ್ಮಾರ, ಮೂರ್ಛೆರೋಗ ಕುರಿತು ಸಮಾಜದಲ್ಲಿ ಇರುವ ಮೂಢನಂಬಿಕೆ ಹಾಗೂ ತಪ್ಪು ಕಲ್ಪನೆಗಳನ್ನು ದೂರ ಮಾಡುವುದು ಅತ್ಯಂತ ಅವಶ್ಯಕವಾಗಿದೆ’ ಎಂದು ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಾಧಿಕಾರಿ ಡಾ.ಅರ್ಚನಾ ಕುಲಕರ್ಣಿ ಹೇಳಿದರು.
ಅಂತರರಾಷ್ಟ್ರೀಯ ಅಪಸ್ಮಾರ ಮೂರ್ಛೆರೋಗ ದಿನಾಚರಣೆ ಅಂಗವಾಗಿ ಸೋಮವಾರ ಸಿದ್ದೇಶ್ವರ ದೇವಸ್ಥಾನದಿಂದ ಜನಜಾಗೃತಿ ಜಾಥಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಮೂರ್ಛೆರೋಗದಿಂದ ಬಳಲುವ ವ್ಯಕ್ತಿಯು ಸಾಮಾನ್ಯ ವ್ಯಕ್ತಿಯಂತೆ ಜೀವನ ನಡೆಸಲು ಸಮಾಜದ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ. ಅಪಸ್ಮಾರ ರೋಗಿಗಳು ಮೂರ್ಛೆಗೊಂಡು ಬಿದ್ದಾಗ ಅವರ ಬಾಯಿಯನ್ನು ಬಲವಂತವಾಗಿ ತೆರೆಯಲು ಯತ್ನಿಸಬಾರದು. ಇದರಿಂದ ಹಲ್ಲುಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. ಮೂರ್ಛೆಯ ಸ್ಥಿತಿ ಹೆಚ್ಚು ಕಾಲ ಮುಂದುವರಿದರೆ ಅಥವಾ ಮರು ಉಂಟಾದರೆ ತಕ್ಷಣ ವೈದ್ಯರ ನೆರವು ಪಡೆಯಬೇಕು. ಅಪಸ್ಮಾರ ರೋಗಕ್ಕೆ ಉಚಿತ ಚಿಕಿತ್ಸೆ, ಔಷಧ ಹಾಗೂ ಆಪ್ತಸಮಾಲೋಚನೆ ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.
ಡಾ.ಪರಶುರಾಮ ಹಿಟ್ನಳ್ಳಿ, ಡಾ.ಓಂಕಾರ ತದ್ದೇವಾಡಿ, ಮನೋರೋಗ ತಜ್ಞ ಡಾ. ಮಂಜುನಾಥ ಮಸಳಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜೆ. ಎಂ. ಕೋಲೂರ, ಬೆಳಗಾವಿ ವಿಭಾಗದ ಸಹನಿರ್ದೇಶಕ ಸುರೇಶ ಹೊಸಮನಿ, ಜಿಲ್ಲಾ ಸಂಯೋಜಕ ಆನಂದ ರಾಠೋಡ, ಕ್ಲಿನಿಕಲ್ ಸೈಕಾಲಜಿಸ್ಟ್ ಕೆ.ಬಿ.ಬಾಗವಾನ ಇದ್ದರು.