ADVERTISEMENT

ಇಟ್ಟಂಗಿಹಾಳ ಫುಡ್‍ಪಾರ್ಕ್‌; ಬಜೆಟ್‍ನಲ್ಲಿ ಪ್ರಸ್ತಾವನೆ

ಕೃಷಿ ಸಚಿವ ಬಿ.ಸಿ.ಪಾಟೀಲ‌ ಭರವಸೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 14:04 IST
Last Updated 22 ಫೆಬ್ರುವರಿ 2021, 14:04 IST
ವಿಜಯಪುರದ ಇಟ್ಟಂಗಿಹಾಳದಲ್ಲಿ ಫುಡ್‍ಪಾರ್ಕ್‍ಗಾಗಿ ಕಾಯ್ದಿರಿಸಿದ ಜಮೀನನ್ನು ಸೋಮವಾರ ಪರಿಶೀಲಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಶಾಸಕ ಎಂ.ಬಿ.ಪಾಟೀಲ ಜೊತೆ ಚರ್ಚಿಸಿದರು
ವಿಜಯಪುರದ ಇಟ್ಟಂಗಿಹಾಳದಲ್ಲಿ ಫುಡ್‍ಪಾರ್ಕ್‍ಗಾಗಿ ಕಾಯ್ದಿರಿಸಿದ ಜಮೀನನ್ನು ಸೋಮವಾರ ಪರಿಶೀಲಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಶಾಸಕ ಎಂ.ಬಿ.ಪಾಟೀಲ ಜೊತೆ ಚರ್ಚಿಸಿದರು   

ವಿಜಯಪುರ:ಜಿಲ್ಲೆಯ ಇಟ್ಟಂಗಿಹಾಳದಲ್ಲಿ ಫುಡ್‍ಪಾರ್ಕ್ ಸ್ಥಾಪಿಸಲು ಸ್ಥಳ ಸೂಕ್ತವಾಗಿರುವ ಹಿನ್ನೆಲೆಯಲ್ಲಿ ಮುಂಬರುವ ಬಜೆಟ್‌ನಲ್ಲಿಅನುದಾನ ಕಾಯ್ದಿರಿಸಲು ಪ್ರಸ್ತಾವ ಸಲ್ಲಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ‌ ಹೇಳಿದರು.

ಇಟ್ಟಂಗಿಹಾಳದಲ್ಲಿ ಫುಡ್‍ಪಾರ್ಕ್‍ಗಾಗಿ ಕಾಯ್ದಿರಿಸಿದ 210 ಎಕರೆ ಜಮೀನನ್ನು ಸೋಮವಾರ ಪರಿಶೀಲಿಸಿದ ಬಳಿಕ ಅವರುಮಾತನಾಡಿದರು.

ಜಿಲ್ಲೆಯಲ್ಲಿ ದ್ರಾಕ್ಷಿ, ದಾಳಿಂಬೆ ಹಾಗೂ ಲಿಂಬೆ ಬೆಳೆ ಹೆಚ್ಚಾಗಿ ಬೆಳೆಯುತ್ತಿರುವ ರೈತರಿಗೆ ಫುಡ್‍ಪಾರ್ಕ್ ಸ್ಥಾಪನೆಯಿಂದ ಹೆಚ್ಚಿನ ನೆರವಾಗಲಿದೆ ಎಂದು ಹೇಳಿದರು.

ADVERTISEMENT

ಪ್ರಧಾನಮಂತ್ರಿ ಆತ್ಮನಿರ್ಭರ ಯೋಜನೆಯಲ್ಲಿ ಕೃಷಿಗೂ ₹1 ಲಕ್ಷ ಕೋಟಿ ನೀಡಲಾಗಿದ್ದು, ಆ ಪೈಕಿ ₹ 10 ಸಾವಿರ ಕೋಟಿಯನ್ನು ವಿಶೇಷವಾಗಿ ಆಹಾರ ಸಂಸ್ಕರಣಾ ಘಟಕಗಳಿಗೂ ನೀಡಲಾಗಿದೆ. ಫುಡ್‍ಪಾರ್ಕ್‍ಗಾಗಿ ಇದರಲ್ಲಿನ ಅನುದಾನ ಕಾಯ್ದಿರಿಸಲು ಪ್ರಸ್ತಾಪಿಸುವುದಾಗಿ ಅವರು ತಿಳಿಸಿದರು.

ಜಿಲ್ಲೆಯಲ್ಲಿ ಬೆಳೆ ಹಾನಿಯಾದ ರೈತರಿಗೆ ಪಿಎಂ ಕಿಸಾನ್ ಯೋಜನೆಯಡಿ ಇಲ್ಲಿಯವರೆಗೆ 2,52,665 ರೈತರಿಗೆ ₹ 257.66 ಕೋಟಿ ಬಿಡುಗಡೆಯಾಗಿದೆ. ಕೃಷಿ ಯಾಂತ್ರೀಕರಣದಲ್ಲಿ 11,158 ರೈತರಿಗೆ ₹ 14.84 ಕೋಟಿ ಬಿಡುಗಡೆಯಾಗಿದೆ. ಡ್ರಿಪ್‌ ಇರಿಗೇಶನ್‍ನಲ್ಲಿ 9784 ರೈತರಿಗೆ ₹26.45 ಕೋಟಿ ಬಿಡುಗಡೆಯಾಗಿದೆ ಎಂದರು.

ಕಳೆದ ವರ್ಷ ಮುಖ್ಯಮಂತ್ರಿಗಳು 10 ಲಕ್ಷ ರೈತರಿಗೆ ತಲಾ ₹ 5000 ನೀಡಲಾಗುವುದೆಂದು ತಿಳಿಸಿದ್ದ ಹಿನ್ನೆಲೆಯಲ್ಲಿ 27,958 ರೈತರಿಗೆ ₹13.97 ಕೋಟಿ ನೀಡಲಾಗಿದೆ. ಬೆಳೆ ವಿಮೆಯ ಪೈಕಿ 11,215 ರೈತರಿಗೆ ₹24.76 ಕೋಟಿ ನೀಡಲಾಗಿದೆ ಎಂದು ಅವರು ಹೇಳಿದರು.

ಅದೇ ರೀತಿ ಬೆಳೆ ವಿಮೆಗಾಗಿ 1,59,166 ರೈತರಿಗೆ ₹109.46 ಕೋಟಿ ಬಿಡುಗಡೆಯಾಗಿದ್ದು, 6 ಹಂತಗಳಲ್ಲಿ ಇದನ್ನು ಬಿಡುಗಡೆಗೊಳಿಸಲಾಗಿದೆ. ಏಳನೇ ಹಂತದಲ್ಲಿ ₹14.37 ಕೋಟಿ ಬಿಡುಗಡೆಯಾಗಲಿದೆ ಎಂದು ಅವರು ಹೇಳಿದರು.

ಬಬಲೇಶ್ವರ ಶಾಸಕ ಎಂ.ಬಿ ಪಾಟೀಲ, ಅವರು ವಿಜಯಪುರ ಜಿಲ್ಲೆಯು ತೋಟಗಾರಿಕಾ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ, ಲಿಂಬೆ ಬೆಳೆಗಳನ್ನು ಬೆಳೆಯುವುದರಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿದ್ದು, ಇವುಗಳನ್ನು ವಿದೇಶಿಗಳಿಗೂ ರಫ್ತು ಮಾಡುವ ಅವಶ್ಯಕತೆ ಇದ್ದು, ಈ ಎಲ್ಲ ತೋಟಗಾರಿಕಾ ಬೆಳೆಗಳ ಸಂಸ್ಕರಣೆಗಾಗಿ ಸರ್ಕಾರ ಈ ನಿಟ್ಟಿನಲ್ಲಿ ಫುಡ್‍ಪಾರ್ಕ್‍ನ್ನು ಆದಷ್ಟು ಬೇಗನೇ ಸ್ಥಾಪಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.

ಇದರೊಂದಿಗೆ 140 ಎಕರೆಯಲ್ಲಿ ವೈನ್ ಪಾರ್ಕ್, 76 ಎಕರೆಯಲ್ಲಿ ಫುಡ್‍ಪಾರ್ಕ್‍ಗಾಗಿ ಜಮೀನು ಕಾಯ್ದಿರಿಸಿದ್ದು, ಈ ಎರಡು ಯೋಜನೆಗಳನ್ನು ಏಕೀಕೃತಗೊಳಿಸಿ, ಎರಡು ಪಾರ್ಕಗಳಿಗೆ ಒಂದೇ ರೀತಿಯ ಮೂಲಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸುವ ಅಗತ್ಯವಿದೆ. ಮುಂಬರುವ ಆಯವ್ಯಯದಲ್ಲಿ ಈ ಯೋಜನೆ ಸೇರ್ಪಡಿಸಬೇಕು.
ಇದರಿಂದ ರೈತರಿಗೂ ಇನ್ನು ಹೆಚ್ಚಿನ ಅನುಕೂಲವಾಗಲಿದೆ. ನಿರುದ್ಯೋಗಿ ಯುವಕರಿಗೂ ಉದ್ಯೋಗಾವಕಾಶಗಳು ಲಭಿಸಿದಂತಾಗುತ್ತದೆ ಎಂದು ಅವರು ಸಚಿವರಿಗೆ ಮನವರಿಕೆ ಮಾಡಿದರು.

ರಾಜ್ಯ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಜಿ.ಪಂ. ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಕೃಷಿ ಜಂಟಿ ನಿರ್ದೇಶಕ ರಾಜಶೇಖರ ವಿಲಿಯಮ್ಸ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.