ADVERTISEMENT

ಪತ್ರಕರ್ತರು ಜನರ ಧ್ವನಿಯಾಗಬೇಕಿದೆ: ಸಚಿವ ಎಂ.ಬಿ.ಪಾಟೀಲ ಸಲಹೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 3:21 IST
Last Updated 25 ಡಿಸೆಂಬರ್ 2025, 3:21 IST
ವಿಜಯಪುರ ನಗರದಲ್ಲಿ ಬುಧವಾರ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕ ಮತ್ತು ವಿವಿಧ ತಾಲ್ಲೂಕು ಘಟಕಗಳ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಅಭಿನಂದನಾ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಉದ್ಘಾಟಿಸಿದರು
ವಿಜಯಪುರ ನಗರದಲ್ಲಿ ಬುಧವಾರ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕ ಮತ್ತು ವಿವಿಧ ತಾಲ್ಲೂಕು ಘಟಕಗಳ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಅಭಿನಂದನಾ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಉದ್ಘಾಟಿಸಿದರು   

ವಿಜಯಪುರ: ‘ಪತ್ರಿಕಾರಂಗಕ್ಕೆ ಭವ್ಯವಾದ ಇತಿಹಾಸವಿದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಪರಿಗಣಿಸಲಾಗಿದೆ. ಆ ಚೌಕಟ್ಟಿನಲ್ಲಿ ಪತ್ರಕರ್ತರು ನಡೆಯಬೇಕಿದೆ, ಜನರ ಸಮಸ್ಯೆಗೆ ಸ್ಪಂದಿಸಬೇಕು, ಜನರ ಧ್ವನಿಯಾಗಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ನಗರದ ಕಂದಗಲ್‌ ಹನುಮಂತರಾಯ ರಂಗಮಂದಿರದಲ್ಲಿ ಬುಧವಾರ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕ ಮತ್ತು ವಿವಿಧ ತಾಲ್ಲೂಕು ಘಟಕಗಳ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಇರುವುದನ್ನು ಇರುವ ಹಾಗೆ ಬರೆಯಲು ಪತ್ರಕರ್ತರಿಗೆ ಸ್ವಾತಂತ್ರ್ಯ ಬೇಕಾಗಿದೆ.‌ ಮಾಲೀಕರ ಅಜೆಂಡಾವು ಪತ್ರಕರ್ತರ ಕೈಕಟ್ಟಿ ಹಾಕಿದೆ.‌ ಇದರಿಂದ ಪತ್ರಕರ್ತರ ಕ್ರೀಯಾಶೀಲತೆ ಮೊಟಕಾಗಿದೆ’ ಎಂದರು.

ADVERTISEMENT

₹10 ಲಕ್ಷ ಅನುದಾನ: ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಕಾರ್ಯನಿರತ ಪತ್ರಕರ್ತರ ಸಂಘದ ಭವನಕ್ಕೆ ಮೂಲಸೌಲಭ್ಯ, ಕ್ಷೇಮಾಭಿವೃದ್ಧಿ ನಿಧಿಗೆ ₹10 ಲಕ್ಷ ಅನುದಾನ ಕೊಡುವುದಾಗಿ ಘೋಷಣೆ ಮಾಡಿದರು.

‘ನನ್ನ 40 ವರ್ಷಗಳ ದೀರ್ಘ ರಾಜಕಾರಣದಲ್ಲಿ ಪತ್ರಕರ್ತರ ಜೊತೆ ಸಂಯಮದಿಂದ ವರ್ತಿಸಿದ್ದೇನೆ. ನನ್ನಿಂದ ತಪ್ಪುಗಳಾದಾಗ ಪತ್ರಕರ್ತರು ಬರೆದಾಗ ತಿದ್ದುಕೊಂಡು ಬಂದಿದ್ದೇನೆ.‌ ಯಾರನ್ನೂ ಟಾರ್ಗೆಟ್ ಮಾಡಿಲ್ಲ’ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ‘ಪತ್ರಕರ್ತ ಎಂದಾಕ್ಷಣ ಎದೆ ಮುಟ್ಟಿ ನೋಡಿಕೊಳ್ಳಬೇಕಾದ ಸಂದರ್ಭ ಎದುರಾಗಿದೆ. ಪತ್ರಕರ್ತರಿಗೆ ಮೊದಲು ಇದ್ದ ಘನತೆ ಮುಕ್ಕಾಗಿ ಹೋಗುತ್ತಿದೆ. ನಿಜವಾದ ಪತ್ರಕರ್ತರು ಕಳೆದುಹೋಗದಂತೆ, ವೃತ್ತಿ ಘನತೆ ಕಾಪಾಡಿಕೊಳ್ಳಬೇಕಿದೆ’ ಎಂದು  ಹೇಳಿದರು.

ಪತ್ರಕರ್ತ ಗೋಪಾಲ ನಾಯಕ ಸಂಗ್ರಹದ ‘ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಗಳ ಸೂಕ್ತಿಗಳು’ ಪುಸ್ತಕ ಲೋಕಾರ್ಪಣೆ ಮಾಡಲಾಯಿತು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ರಾಜ್ಯ ಕಾರ್ಯದರ್ಶಿ ಪುಂಡಲೀಕ ಬಾಳೋಜಿ, ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಯಡಳ್ಳಿ, ಬಾಗಲಕೋಟೆ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ ಅಂಗಡಿ, ಪದಾಧಿಕಾರಿಗಳಾದ ಇಂದುಶೇಖರ ಮಣೂರ, ಪ್ರಕಾಶ ಬೆಣ್ಣೂರ, ಶಶಿಕಾಂತ ಮೆಂಡೆಗಾರ, ಬಸವರಾಜ ಉಳ್ಳಾಗಡ್ಡಿ, ಮೊಹ್ಮದ್ ಸಮೀರ್ ಇನಾಂಮದಾರ, ಅವಿನಾಶ ಬಿದರಿ, ಸದ್ದಾಂ ಹುಸೇನ ಜಮಾದಾರ, ವಿನೋದ ಸಾರವಾಡ, ರಾಹುಲ್ ಆಪ್ಟೆ ಇದ್ದರು.

ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಪತ್ರಿಕಾರಂಗ ಡಿಜಿಟಲ್‌ ಮಯವಾಗಿದ್ದರೂ ಕೂಡ ಇಂದಿಗೂ ಪತ್ರಿಕೆ ಓದುವ ಹವ್ಯಾಸ ಉಳಿದುಕೊಂಡಿದೆ 
-ಎಂ.ಬಿ.ಪಾಟೀಲಜಿಲ್ಲಾ ಉಸ್ತುವಾರಿ ಸಚಿವ 
ಪತ್ರಕರ್ತರಿಗೆ ಒಳಿತು-ಕೆಡಿಕಿನ ಅರಿವು ಇರಬೇಕು ನಮ್ಮೊಳಗೆ ಒಬ್ಬ ನ್ಯಾಯಾಧೀಶ ಇರಬೇಕು ವೃತ್ತಿಗೆ ಅಪಚಾರ ಮಾಡಬಾರದು ತದ್ವಿರುದ್ಧವಾಗಿ ನಡೆದುಕೊಳ್ಳಬಾರದು 
-ಶಿವಾನಂದ ತಗಡೂರುಅಧ್ಯಕ್ಷಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.