ADVERTISEMENT

ತಿಕೋಟಾ: ದ್ರಾಕ್ಷಿ ನಾಡಲ್ಲಿ ಜಂಬೋ ರೆಡ್ ಡ್ರ್ಯಾಗನ್ ಫ್ರೂಟ್ ಕೃಷಿ

ರೈತರಿಗೆ ಕಡಿಮೆ ಖರ್ಚು, ಹೆಚ್ಚು ಲಾಭ

ಪರಮೇಶ್ವರ ಎಸ್.ಜಿ.
Published 29 ಸೆಪ್ಟೆಂಬರ್ 2022, 19:30 IST
Last Updated 29 ಸೆಪ್ಟೆಂಬರ್ 2022, 19:30 IST
ತಿಕೋಟಾ ತಾಲ್ಲೂಕಿನ ರತ್ನಾಪುರ ಗ್ರಾಮದ ರೈತ ಪವನಕುಮಾರ್‌ ರಾಣಗಟ್ಟಿ ಬೆಳೆದ ರೆಡ್ ಜಂಬೋ ಡ್ರ್ಯಾಗನ್ ಫ್ರೂಟ್
ತಿಕೋಟಾ ತಾಲ್ಲೂಕಿನ ರತ್ನಾಪುರ ಗ್ರಾಮದ ರೈತ ಪವನಕುಮಾರ್‌ ರಾಣಗಟ್ಟಿ ಬೆಳೆದ ರೆಡ್ ಜಂಬೋ ಡ್ರ್ಯಾಗನ್ ಫ್ರೂಟ್   

ತಿಕೋಟಾ: ರಾಜ್ಯದಲ್ಲಿ ಅತಿ ಹೆಚ್ಚು ದ್ರಾಕ್ಷಿ ಬೆಳೆಯುವ ವಿಜಯಪುರ ಜಿಲ್ಲೆಯಲ್ಲಿ ಜಂಬೋ ರೆಡ್ ಡ್ರ್ಯಾಗನ್ ಫ್ರೂಟ್ ಹೊಸ ತಳಿಯ ಬೆಳೆಯನ್ನು ಬೆಳೆಯುವ ಮೂಲಕ ರೈತರೊಬ್ಬರು ಉತ್ತಮ ಆದಾಯ ಗಳಿಸುತ್ತಿದ್ದಾರೆ.

ತಾಲ್ಲೂಕಿನ ರತ್ನಾಪುರ ಗ್ರಾಮದ ಯುವ ರೈತ ಪವನಕುಮಾರ್‌ ಬಸಪ್ಪ ರಾಣಗಟ್ಟಿ ಈ ಹೊಸ ಬೆಳೆಯನ್ನು ಕಡಿಮೆ ಖರ್ಚಿನಲ್ಲಿ ಬೆಳೆದು, ಹೆಚ್ಚು ಆದಾಯ ಗಳಿಸಿದ್ದಾರೆ. ಇರುವ 11 ಎಕರೆ ತೋಟದಲ್ಲಿ ಎರಡು ಎಕರೆಯಲ್ಲಿ ಈ ರೆಡ್ ಡ್ರ್ಯಾಗನ್ ಫ್ರೂಟ್ ಬೆಳೆದಿದ್ದಾರೆ. ಉಳಿದ ತೋಟದಲ್ಲಿ ಮೆಕ್ಕೆಜೋಳ ಹಾಗೂ ತೊಗರಿ ಬೆಳೆಯುತ್ತಿದ್ದಾರೆ.

ಸಾಮಾನ್ಯವಾದ ಡ್ರ್ಯಾಗನ್ ಫ್ರೂಟ್ ಗಿಂತಲೂ ಈ ಕಡುಕೆಂಪು ಬಣ್ಣದ ಡ್ರ್ಯಾಗನ್ ಹೆಚ್ಚು ಆಕರ್ಷಕವಾಗಿದೆ. ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ. ಈ ವರೆಗೆ ಕೆಂಪು ಮತ್ತು ಬಿಳಿ ಬಣ್ಣದ ಹಣ್ಣುಗಳು ಇದ್ದವು. ಈ ರೆಡ್ ಜಂಬೋ ಡ್ರ್ಯಾಗನ್ ಪೂರ್ಣ ಕೆಂಪು ಮತ್ತು ಹೆಚ್ಚು ಹೊಳಪನ್ನು ಹೊಂದಿದೆ.

ADVERTISEMENT

ಕಡಿಮೆ ಖರ್ಚು, ಹೆಚ್ಚು ಲಾಭ:ಆರಂಭದಲ್ಲಿ ಎಕರೆಗೆ ₹ 3 ಲಕ್ಷ ಖರ್ಚು ಮಾಡಿದ್ದಾರೆ. ಮೊದಲ ವರ್ಷ ₹ 1 ಲಕ್ಷ ಆದಾಯ, ಎರಡನೇ ವರ್ಷ ₹ 3 ಲಕ್ಷ ಆದಾಯ, ಮೂರನೇ ವರ್ಷ ₹ 6 ಲಕ್ಷ ಆದಾಯ, ಸದ್ಯ ಈಗ ನಾಲ್ಕನೆ ವರ್ಷ ₹ 5 ಲಕ್ಷ ಆದಾಯವಾಗಿದೆ. ಇನ್ನೂ ₹2-3 ಲಕ್ಷ ಆದಾಯ ಆಗುವ ನೀರಿಕ್ಷೆ ಇದೆ. ಆರಂಭದಲ್ಲಿ ಮಾತ್ರ ಖರ್ಚು ನಂತರ ಪ್ರತಿ ವರ್ಷ ಗೊಬ್ಬರ ಔಷಧ ಸಿಂಪಡಣೆಗೆ ₹ 50 ಸಾವಿರ ಮಾತ್ರ ಖರ್ಚಾಗುವುದು.

ಆರೋಗ್ಯಕ್ಕೆ ರಾಮಬಾಣ:ಈ ಹಣ್ಣು ಸೇವನೆಯಿಂದ ರೋಗ ನಿರೋಧಕ ಶಕ್ತಿ ವೃದ್ದಿ, ಬಿಳಿ ರಕ್ತ ಕಣ ಹೆಚ್ಚಳ, ಡೆಂಗಿಜ್ವರ ನಿವಾರಣೆ, ಅಜೀರ್ಣತೆ, ಬಿಪಿ, ಶುಗರ್, ಲಂಗ್ಸ್‌ ಸಮಸ್ಯೆ ನಿವಾರಣೆ, ಮೂಳೆ ಬಲವರ್ಧನೆ, ಹಲ್ಲು ಬಲಿಷ್ಠ, ಚರ್ಮ ಕಾಂತಿಗೆ ಸಹಾಯಕ.. ಹೀಗೆ ಶರೀರದ ಹಲವು ರೋಗಗಳಿಗೆ ರಾಮಬಾಣವಾಗಿದೆ ಎನ್ನುತ್ತಾರೆ ಕೃಷಿ ವಿಜ್ಞಾನಿಗಳು.

ಬೇರೆ ಯಾವುದಾದರೂ ಬೆಳೆ ಬೆಳೆಯಬೇಕಾದರೆ ಖರ್ಚು ಜಾಸ್ತಿ, ಆದಾಯ ಕಡಿಮೆಯಾಗುತ್ತದೆ. ಕೂಲಿಕಾರರ ಖರ್ಚು ಇತರೆ ಖರ್ಚು ಹೆಚ್ಚಳವಾಗಿದೆ. ಆದರೆ, ಈ ರೆಡ್ ಜಂಬೋ ಡ್ರ್ಯಾಗನ್ ರೈತನಿಗೆ ಕಡಿಮೆ ಖರ್ಚಿನ ಬೆಳೆಯಾಗಿದೆ. ಈ ಬೆಳೆಗೆ ರೋಗಗಳ ಕಾಟ ಜಾಸ್ತಿ ಇಲ್ಲ, ಬಿಳಿ ಡ್ರ್ಯಾಗನ್ ಕೆ.ಜಿಗೆ ₹100 ಇದ್ದರೆ, ಈ ರೆಡ್ ಡ್ರ್ಯಾಗನ್ ಕೆಜಿಗೆ ₹ 150-170 ದರ ಇದೆ. ಸಾಮಾನ್ಯವಾದ ಡ್ರ್ಯಾಗನ್ ಬೆಳೆಯಲು ಎಕರೆಗೆ 500 ಕಂಬ ನೆಟ್ಟು ₹3 ಲಕ್ಷ ಖರ್ಚಾಗುತ್ತಿತ್ತು, ಈ ರೆಡ್ ಡ್ರ್ಯಾಗನ್ ಗೆ 300 ಕಂಬಕ್ಕೆ ₹2.5 ಲಕ್ಷ ಖರ್ಚಾಗುತ್ತದೆ ಎನ್ನುತ್ತಾರೆ ರೈತ ಪವನಕುಮಾರ್‌.

ಈ ಹಣ್ಣನ್ನು ಮಾರುಕಟ್ಟೆಗೆ ಸಾಗಿಸುವುದಲ್ಲದೇ, ವಿಜಯಪುರ– ಬೆಳಗಾವಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೆ ಮಾರಾಟ ಮಾಡುವ ವ್ಯವಸ್ಥೆ ಮಾಡಿದ್ದಾರೆ. ಇದರಿಂದ ಮಹಾರಾಷ್ಟ್ರ ಹಾಗೂ ರಾಜ್ಯದ ಇತರೆ ಜಿಲ್ಲೆಗಳ ಪ್ರಯಾಣಿಕರು ಈ ಹಣ್ಣನ್ನು ಖರೀದಿಸಲು ಮುಗಿಬಿಳುತ್ತಾರೆ. ಪ್ರಯಾಣಿಕರು ಮಾರುಕಟ್ಟೆಗೆ ಹೋಗಿ ಖರಿದೀಸುವ ಬದಲು ತೋಟದಲ್ಲಿನ ತಾಜಾ ಹಣ್ಣು ಪಡೆದು ಖರೀದಿಸಿ ಖುಷಿ ಪಡುತ್ತಾರೆ.

**

ಖರ್ಚು ಕಡಿಮೆ ಮಾಡಿ ಆದಾಯ ಹೆಚ್ಚು ಪಡೆಯುವ ಬೆಳೆ ಇದಾಗಿದೆ. ಆರಂಭದಲ್ಲಿ ಮಾತ್ರ ಖರ್ಚು ನಂತರ ಕಡಿಮೆ ಖರ್ಚು ಇರುವುದು. ಸಾಮಾನ್ಯ ಡ್ರ್ಯಾಗನ್ ಕ್ಕಿಂತ ಶೇ 30 ರಷ್ಟು ಆದಾಯ ಹೆಚ್ಚಿದೆ ಇರುವುದು.
ಪವನಕುಮಾರ್‌ ರಾಣಗಟ್ಟಿ, ರೈತ, ರತ್ನಾಪುರ ಗ್ರಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.