ವಿಜಯಪುರ: ‘ಪಿಸುಗುಟ್ಟುವ ಗ್ಯಾಲರಿ’ ಗೋಳಗುಮ್ಮಟದ ಅಂಗಳದಲ್ಲಿ ಶನಿವಾರ ಸಂಜೆ ಸಂಗೀತ, ಭರತನಾಟ್ಯ ಲೋಕವೇ ಸೃಷ್ಟಿಯಾಗಿತ್ತು.
ಪ್ರವಾಸೋದ್ಯಮ ಇಲಾಖೆ, ಪುರಾತತ್ವ ಸರ್ವೇಕ್ಷಣೆ ಇಲಾಖೆ ಹಾಗೂ ಡಾ.ಸುಧಾಮೂರ್ತಿ ನೇತೃತ್ವದ ಮೂರ್ತಿ ಫೌಂಡೇಶನ್ ಸಹಯೋಗದಲ್ಲಿ ಶನಿವಾರ ಗೋಳಗುಮ್ಮಟದ ಹಸಿರು ಅಂಗಳದಲ್ಲಿ ನಡೆದ ‘ಕಲಾ ಧಾರಾ’ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ ಪ್ರಥಮ ಪ್ರಯತ್ನದಲ್ಲೇ ಜನಮನಸೂರೆಗೊಂಡು ಸಂಗೀತಾಸಕ್ತರ ಮನ ತಣಿಸಿತು.
ಪಂಡಿತ್ ವೆಂಕಟೇಶ ಕುಮಾರ ಅವರ ಸಂಗೀತ ಸುಧೆಯ ಸಂಭ್ರಮವನ್ನು ಸಂಗೀತ ಶೋತೃಗಳು ಸಂಭ್ರಮಿಸಿ, ರಾಗ ವೈಭವದಲ್ಲಿ ಮಿಂದೆದ್ದರು.
ಖ್ಯಾತ ಹಿಂದೂಸ್ತಾನಿ ಗಾಯಕ ಪಂ.ವೆಂಕಟೇಶ ಕುಮಾರ ಅವರ ಚಿನ್ನದ ಕಂಠದಿಂದ ಹೊರಬಂದ ದಾಸರ ಪದಗಳು ಸಂಗೀತದ ಜೊತೆಗೆ ಭಕ್ತಿಭಾವದಲ್ಲಿ ಮಿಂದೇಳುವಂತೆ ಮಾಡಿದವು.
‘ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ....’ ಎಂಬ ಸಾಲು ಪಂ.ವೆಂಕಟೇಶ ಕುಮಾರ ಅವರ ಕಂಠದಿಂದ ಹೊರಬಂದಾಗ ಅಲ್ಲೊಂದು ವಿಭಿನ್ನ ಲೋಕವೇ ಸೃಜಿಸಿತು.
ಪಂ.ರಘುನಾಥ್ ನಾಕೋಡ ಅವರು ತಬಲಾ ಸಾಥ್ ನೀಡಿದರೆ, ಬಸವರಾಜ ಹಿರೇಮಠ ಹಾರ್ಮೋನಿಯಂ ಸಾಥ್ ನೀಡಿದರು.
‘ಕಮಲೆ ಕಮಲಾಲಯೇ...’ ‘ಅಕ್ಕಾ ಕೇಳವ್ವ ನಾನೊಂದ ಕನಸು ಕಂಡೆ...’ ಹೀಗೆ ಅನೇಕ ಗೀತೆಗಳನ್ನು ಭಕ್ತಿಯ ಸ್ಪರ್ಶದೊಂದಿಗೆ ಹಾಡಿದರು.
ಭರತ ನಾಟ್ಯದಲ್ಲಿ ವಿಶ್ವದ ಗಮನ ಸೆಳೆದ ವಿದೂಷಿ ಮಿಥುನ್ ಶ್ಯಾಮ್ ರ ಭರತನಾಟ್ಯ ಭವ್ಯತೆ ಸ್ಪರ್ಶ ನೀಡಿತು. ಗೆಜ್ಜೆನಾದದ ಪ್ರತಿಧ್ವನಿಯೊಂದಿಗೆ ನರ್ತನ ಕಲಾ ಲೋಕವೇ ಸೃಜಿಸಿತು.
ಕಾರ್ಯಕ್ರಮದ ರೂವಾರಿ ಹಾಗೂ ರಾಜ್ಯಸಭಾ ಸದಸ್ಯೆ ಡಾ.ಸುಧಾಮೂರ್ತಿ, ಜಿಲ್ಲಾಧಿಕಾರಿ ಡಾ.ಕೆ. ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಮೊದಲಾದವರು ಪಾಲ್ಗೊಂಡಿದ್ದರು.
ವಿಜಯಪುರ: ಹಂಪಿ ಉತ್ಸವ, ಚಾಲುಕ್ಯ ಉತ್ಸವ, ಕದಂಬ ಉತ್ಸವ ಮಾದರಿಯಲ್ಲಿ ವಿಜಯಪುರದಲ್ಲಿ ಸಂಗೀತ ಉತ್ಸವ ಮಾಡುವ ಆಶಯವಿತ್ತು. ಇದೀಗ ಕಾಲ ಕೂಡಿ ಬಂದಿದ್ದು, ಪ್ರಥಮ ಬಾರಿಗೆ ‘ಕಲಾಧಾರ’ ಆಯೋಜಿಸಿದ್ದೇವೆ ಎಂದು ಮೂರ್ತಿ ಫೌಂಡೇಷನ್ ಅಧ್ಯಕ್ಷೆ, ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಹೇಳಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಗೊಂದು ಉತ್ಸವ ಮಾಡುವಷ್ಟು ಕನ್ನಡ ನಾಡು ಶ್ರೀಮಂತ ಸಂಸ್ಕೃತಿ ಹೊಂದಿದೆ. ವಿಜಯಪುರ ಅತ್ಯುತ್ತಮ ಸ್ಥಳ, ಸಾಂಸ್ಕೃತಿಕವಾಗಿಯೂ ಶ್ರೀಮಂತ ಜಿಲ್ಲೆ, ಇಲ್ಲಿ ಒಂದು ಸಾಂಸ್ಕೃತಿಕ ವಾತಾವರಣ ಸೃಷ್ಟಿಸಬೇಕಿದೆ’ ಎಂದರು.
ಎರಡು ದಿನದ ಕಲೋತ್ಸವ ಆಯೋಜಿಸಲಾಗಿದೆ. ಜನರಿಗೆ ಉಚಿತ ಪ್ರವೇಶ ಇದೆ. ಜನರು ಭಾಗವಹಿಸಿ ಸಂತೋಷ ಪಡಬೇಕು. ಜನರ ಸಹಕಾರ, ಪ್ರತಿಕ್ರಿಯೆ ನೋಡಿಕೊಂಡು ಪ್ರತಿವರ್ಷ ಅತ್ಯುತ್ತಮ ಕಾರ್ಯಕ್ರಮ ಆಯೋಜನೆ ಮಾಡುವ ಉದ್ದೇಶವಿದೆ ಎಂದರು.
ಗೋಳಗುಮ್ಮಟವನ್ನು ಯುನೆಸ್ಕೋ ಪಟ್ಟಿಗೆ ಸೇರಿಸಲು ಜಿಲ್ಲಾಡಳಿತ, ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವ ಕಳಿಸಿದರೆ, ನಾನು ಅದನ್ನು ಸಾಕಾರಗೊಳಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ವಿಜಯಪುರದ ಐತಿಹಾಸಿಕ ಸ್ಮಾರಕಗಳ ರಕ್ಷಣೆ ಜೊತೆಗೆ ಸ್ವಚ್ಛತೆ ಕಾಪಾಡಬೇಕು. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.