ಮುದ್ದೇಬಿಹಾಳ: ಸಮಾಜ ಸೇವಕ, ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಎನ್.ಮದರಿ ಅವರು ತಮ್ಮ ಪುತ್ರ ಕಿರಣ್ ಅವರ ಮದುವೆ ಕಾರ್ಯಕ್ರಮದೊಂದಿಗೆ 46 ಜೋಡಿಗಳಿಗೆ ಉಚಿತವಾಗಿ ಸಾಮೂಹಿಕವಾಗಿ ವಿವಾಹ ನಡೆಸಿಕೊಡುವ ಕಾರ್ಯಕ್ರಮವನ್ನು ಮೇ 18 ರಂದು ಆಯೋಜಿಸಿದ್ದಾರೆ.
ಪಟ್ಟಣದ ಅಭ್ಯುದಯ ಪಿ.ಯು ಸೈನ್ಸ್ ಕಾಲೇಜು ಪಕ್ಕದಲ್ಲಿರುವ ಜಾಗದಲ್ಲಿ ಮದುವೆ ಕಾರ್ಯಕ್ರಮಕ್ಕಾಗಿ ಮಳೆ ನೀರು ಬೀಳದಂತೆ (ವಾಟರ್‌ಫ್ರೂಫ್) ಷಾಮೀಯಾನ ಹಾಕಿಸಿದ್ದಾರೆ. ಕಾರ್ಯಕ್ರಮಕ್ಕೆ ಕಲ್ಯಾಣ ಮಹೋತ್ಸವ ಎಂದು ಹೆಸರಿಟ್ಟಿದ್ದು ಮದುವೆ ಕಾರ್ಯಕ್ರಮದ ವಿವರಗಳನ್ನು ಗುರುವಾರ ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡರು.
‘ಪ್ರತಿವರ್ಷ ತಮ್ಮ ಸ್ವಂತ ಊರು ಖಿಲಾರಹಟ್ಟಿಯಲ್ಲಿ ಬೀರಲಿಂಗೇಶ್ವರ, ಕಾಡಸಿದ್ಧೇಶ್ವರ, ದ್ಯಾಮವ್ವ ದೇವಿ ಜಾತ್ರೆಯ ಸಮಯದಲ್ಲಿ ಉಚಿತವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸುತ್ತಾ ಬರುತ್ತಿದ್ದೇವು. ಆದರೆ ಈ ವರ್ಷ ಪುತ್ರನ ಮದುವೆ ಮಾಡುತ್ತಿರುವ ಕಾರಣ ಸಾಮೂಹಿಕ ವಿವಾಹಗಳನ್ನು ಇದೇ ಮದುವೆಯಲ್ಲಿ ಆಯೋಜಿಸುವುದು ಸೂಕ್ತ ಎಂದು ತೀರ್ಮಾನಿಸಿ ಕುಟುಂಬದವರು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ’ ಎಂದು ತಿಳಿಸಿದರು.
‘ಸಾಮೂಹಿಕ ವಿವಾಹಕ್ಕೆ ಒಟ್ಟು 46 ಜೋಡಿ ನೋಂದಾಯಿಸಿಕೊಂಡಿದ್ದು, ವಧು– ವರರಿಗೆ ಎರಡು ಜೊತೆ ಬಟ್ಟೆ, ತಾಳಿ ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ, ಮುಖಂಡ ಭಾಗಣ್ಣ ಕಡ್ಲಿ, ಲೆಕ್ಕಾಧಿಕಾರಿ ಬಸವರಾಜ ಬಿಜ್ಜೂರ ಇದ್ದರು.
ಭಾಷಣ, ವೇದಿಕೆ ಕಾರ್ಯಕ್ರಮ ಇಲ್ಲ: ಇಡೀ ಮುದ್ದೇಬಿಹಾಳ ತಾಲ್ಲೂಕಿಗೆ ಆಹ್ವಾನ ನೀಡಲಾಗಿದೆ. ಅದರಲ್ಲೂ ಎಲ್ಲ ರಾಜಕೀಯ ನಾಯಕರು, ಸ್ವಾಮೀಜಿಗಳಿಗೆ ಆಹ್ವಾನ ನೀಡಿದ್ದು ವೇದಿಕೆ ಕಾರ್ಯಕ್ರಮ ಮಾಡುತ್ತಿಲ್ಲ. ಯಾವುದೇ ಭಾಷಣ ಇರುವುದಿಲ್ಲ. ಮದ್ಯಾಹ್ನ 12.20ಕ್ಕೆ ಮಾಂಗಲ್ಯಧಾರಣ ನಡೆಯಲಿದೆ. ಕಲ್ಯಾಣ ಮಹೋತ್ಸವ ಕಾರ್ಯಕ್ರಮಕ್ಕೆ 30 ಸಾವಿರಕ್ಕೂ ಹೆಚ್ಚು ಜನ ಆಗಮಿಸುವ ನೀರೀಕ್ಷೆ ಇದೆ’ ಎಂದು ತಿಳಿಸಿದರು.
ಮದುವೆ ಊಟಕ್ಕೆ ತಿರುಪತಿ ಲಾಡು, ಬಾಂಬೆ ಹಲ್ವಾ: ಪುತ್ರನ ಮದುವೆ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ತಿರುಪತಿ ಲಾಡು ಹಾಗೂ ಬಾಂಬೆ ಹಲ್ವಾ ವ್ಯವಸ್ಥೆ ಮಾಡಿಸಿದ್ದೇವೆ. ತಿರುಪತಿ ಲಾಡು ಸಿದ್ಧಪಡಿಸುವ ಬಾಣಸಿಗರನ್ನು ಕರೆಯಿಸಲಾಗಿದೆ. ಊಟಕ್ಕೆ ಎರಡು ತರಹದ ಪಲ್ಯ, ಮೊಸರನ್ನ, ಎರಡು ಸಿಹಿ, ಅನ್ನ ಸಾರು ವ್ಯವಸ್ಥೆ ಮಾಡಿಸಲಾಗಿದೆ. ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಲಾಗಿದ್ದು ಬಂದ ವಾಹನಗಳನ್ನು ನಿಲುಗಡೆ ಮಾಡಲು ಪಾರ್ಕಿಂಗ್ ವ್ಯವಸ್ಥೆ ಇರಲಿದೆ ಎಂದು ತಿಳಿಸಿದರು.
Highlights - null
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.